ಬೆಂಗಳೂರು: ನಗರದ ಪೊಲೀಸ್ ಠಾಣೆ, ಪಾಲಿಕೆ ಕಚೇರಿ ಹಾಗೂ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ವಿವಿಧ ವಲಯದಲ್ಲಿ ಕೆಲಸ ಮಾಡುವ ಸಿಬ್ಬಂದಿಯಲ್ಲಿ ಕೋವಿಡ್ 19 ದೃಢಪಡುತ್ತಿರುವುದು ತಲ್ಲಣ ಮೂಡಿಸಿದೆ. ಇತ್ತೀಚೆಗೆ ಬೆಳಗಾವಿಯಲ್ಲಿ ನರ್ಸ್‌ವೊಬ್ಬರು ಕ್ವಾರಂಟೈನ್‌ನಲ್ಲಿದ್ದು, ಮಗಳ ಸಮೀಪಕ್ಕೆ ಬಂದು ಮಾತನಾಡಲಾಗದೆ ಕಣ್ಣೀರಿಟ್ಟ ದೃಶ್ಯ ರಾಜ್ಯದ ಲ್ಲಷ್ಟೇ ಅಲ್ಲದೇ ಹೊರ ರಾಜ್ಯಗಳ ಸುದ್ದಿ ಮಾಧ್ಯಮಗಳಲ್ಲೂ ಪ್ರಸಾರವಾಗಿತ್ತು
. ಕೌಟುಂ ಬಿಕ ಬಾಂಧವ್ಯ ಅನುಭವಿಸಲಾಗದೆ, ಮತ್ತೂಂದು ಕಡೆ ಯಾರಿಗೆ ಸೋಂಕು ಬರುತ್ತದೆಯೋ, ಯಾವಾಗ ಕ್ವಾರಂಟೈನ್ ಆಗಬೇಕೋ ಎಂಬ ಆತಂಕದಲ್ಲೇ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಇದು ಕೇವಲ ವೈದ್ಯಕೀಯ ಸಿಬ್ಬಂದಿಯ ಸ್ಥಿತಿಯಲ್ಲ. ಸಾರ್ವಜನಿಕ ಸಂಪರ್ಕದಲ್ಲಿರುವ ಎಲ್ಲ ಸರ್ಕಾರಿ ಹಾಗೂ ಖಾಸಗಿ ವಲಯಗಳ ಸಿಬ್ಬಂದಿ ಇಂತಹ ನೋವನ್ನು ಅನುಭವಿಸುತ್ತಿದ್ದಾರೆ.
ನಗರದಲ್ಲಿ ಪೊಲೀಸ್, ಬ್ಯಾಂಕ್ ಸಿಬ್ಬಂದಿ ಹಾಗೂ ಪಾಲಿಕೆ ಸದಸ್ಯ ಸೇರಿ ವಿವಿಧ ವಲಯಗಳಲ್ಲಿರುವವರಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದು ಹಾಗೂ ಆಯಾ ಪ್ರದೇಶಗಳು ಸೀಲ್‌ಡೌನ್ ಆಗುತ್ತಿರುವುದು ಅಧಿಕಾರಿಗಳ ಆತ್ಮಸ್ಥೆರ್ಯ ಕುಗ್ಗಿಸಿದೆ. ಆತಂಕದ ಹಿನ್ನೆಲೆಯಲ್ಲಿ ಬಿಬಿಎಂಪಿ ಕಚೇರಿಗಳು, ಪೊಲೀಸ್ ಠಾಣೆ, ಬ್ಯಾಂಕ್ ಸೇರಿದಂತೆ ವಿವಿಧ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದರ ನಡುವೆಯೇ ಕೆಲಸ ಮಾಡುತ್ತಿದ್ದಾರೆ. ಇನ್ನು ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಬಿಬಿಎಂಪಿ ಕಾರ್ಯವೈಖರಿ ಹಾಗೂ ಮೇಯರ್ ಸಾರ್ವಜನಿಕ ಭೇಟಿ, ಮೇಯರ್ ವೈದ್ಯಕೀಯ ನಿಧಿಗೆ ತಾತ್ಕಾಲಿಕ ತಡೆ ನೀಡಿರುವುದು ಸೇರಿದಂತೆ ಕೆಲವು ಮಾರ್ಪಾಡು ಮಾಡಿಕೊಳ್ಳಲಾಗಿದೆ.
ಅಲ್ಲದೆ, ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ವಿವಿಧ ವಿಭಾಗಗಳನ್ನು ಸಂಪರ್ಕಿಸುವ ಹೆಚ್ಚುವರಿ ಗೇಟ್‌ಗಳನ್ನು ಮುಚ್ಚಲಾಗಿದ್ದು, ಒಂದೇ ಗೇಟ್‌ನ ಮೂಲಕ ಎಲ್ಲರು ಪ್ರವೇಶಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಮುಖ್ಯ ಕಟ್ಟಡಗಳನ್ನು ಪ್ರವೇಶಿಸುವವರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಅಗತ್ಯ ಮೀಟಿಂಗ್‌ಗಳನ್ನು ಮಾತ್ರ ಮಾಡಲಾಗುತ್ತಿದೆ. ಸಾರ್ವಜನಿಕರೊಂದಿಗೆ ವ್ಯವಹರಿಸುವಾಗ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇದರ ಹೊರತಾಗಿಯೂ ಆತಂಕ ಕಡಿಮೆಯಾಗಿಲ್ಲ.
ಮಗಳ ಪ್ರಶ್ನೆಗೆ ಉತ್ತರಿಸಲಾಗುತ್ತಿಲ್ಲ!: ಪಾಲಿಕೆ ಸದಸ್ಯ ಇಮ್ರಾನ್‌ಪಾಷಾ ಅವರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದು, ಅವರು ಅನುಭವಿಸುತ್ತಿರುವ ನೋವನ್ನು ಉದಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ. “ಕಳೆದ ಒಂದು ವಾರದಿಂದ ಕ್ವಾರಂಟೈನ್‌ನಲ್ಲಿ ಇದ್ದೇನೆ. ಕ್ವಾರಂಟೈನ್‌ಗೆ ಒಳಗಾಗುವ ಮುನ್ನವೂ ಮನೆಯಲ್ಲೂ ಮಾಸ್ಕ್ ಹಾಕಿಕೊಂಡು ಇರುತ್ತಿದ್ದೆ. ಅಪ್ಪಾ ಇನ್ನು ಎಷ್ಟು ದಿನ ಮನೆಗೆ ಬರುವುದಕ್ಕೆ ಎಂದು ಮಗಳು ಕೇಳುವ ಪ್ರಶ್ನೆಗೆ ಉತ್ತರಿಸಲಾಗುತ್ತಿಲ್ಲ” ಎಂದು ನೋವು ತೋಡಿಕೊಂಡರು.
ಅವ್ಯವಸ್ಥೆ ಬದಲಾಗುತ್ತಿಲ್ಲ: ಆಡಳಿತ ವಲಯದಲ್ಲಿಯೂ ಕೋವಿಡ್ 19 ಆತಂಕ ಕಾಣಿಸಿಕೊಂಡ ಮೇಲೂ ಬಿಬಿಎಂಪಿ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಕಚೇರಿಗಳ ಸಿಬ್ಬಂದಿಗೆ ನೆರವಾಗುವ ನಿಟ್ಟಿನಲ್ಲಿ ಆಯಾ ಸಂಸ್ಥೆಗಳು ಯೋಜನೆ ರೂಪಿಸಿಕೊಂಡಿಲ್ಲ. ಕೆಲವು ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರಾದರೂ ಇದು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗುತ್ತಿಲ್ಲ. ಇನ್ನು ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ನಿತ್ಯ ಸಚಿವರು ಸೇರಿದಂತೆ ಅಧಿಕಾರಿಗಳು ಸಭೆ ಸೇರುತ್ತಲ್ಲೇ ಇದ್ದಾರೆ.
ಈ ವೇಳೆ ಸರ್ಮಪಕವಾಗಿ ಮಾಸ್ಕ್ ಧರಿಸುತ್ತಿಲ್ಲ. ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳುತ್ತಿಲ್ಲ. ಮುಖ್ಯವಾಗಿ ಈ ಕಚೇರಿಗಳಿಗೆ ನಿತ್ಯ ಯಾರು ಬಂದು ಹೋಗುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಸಂಗ್ರಹ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ, ಕೋವಿಡ್ 19 ಆತಂಕ ಹೆಚ್ಚುತ್ತಲೇ ಇದೆ. ಈ ಮಧ್ಯೆ ಕ್ವಾರಂ ಟೈನ್‌ಗೆ ಒಳಗಾಗುವ ಸಿಬ್ಬಂದಿಗೆ ಸೂಕ್ತ ವಾಹನ ವ್ಯವಸ್ಥೆ ಕಲ್ಪಿಸದ ಆರೋ ಪವೂ ಇದೆ. ಕ್ವಾರಂಟೈನ್ ಬಗ್ಗೆಯೂ ದೂರುಗಳು ಕೇಳಿಬರುತ್ತಿವೆ.