Advertisement

ಬಿಎಂಟಿಸಿಯ ಇಬ್ಬರು ಸಿಬ್ಬಂದಿಗೆ ಸೋಂಕು: ಆತಂಕ

06:13 AM Jun 15, 2020 | Lakshmi GovindaRaj |

ಬೆಂಗಳೂರು: ಕೇವಲ ಮೂರು ದಿನಗಳ ಅಂತರದಲ್ಲಿ ಬಿಎಂಟಿಸಿಯಲ್ಲಿ ಮತ್ತೆ ಇಬ್ಬರು ಸಿಬ್ಬಂದಿಯಲ್ಲಿ ಕೋವಿಡ್‌ 19 ದೃಢಪಟ್ಟಿದ್ದು, ಮತ್ತಷ್ಟು ಆತಂಕಕ್ಕೆ ಕಾರಣ ವಾಗಿದೆ. ಇದು ಮುಂದಿನ ದಿನಗಳಲ್ಲಿ ಬಿಎಂಟಿಸಿ ಕಾರ್ಯಾಚರಣೆ  ಮೇಲೆ ಪರಿಣಾಮ ಬೀರಲಿದೆ. ಕೋರಮಂಗಲ ಡಿಪೋದ ಚಾಲಕ ಮತ್ತು ಇಂದಿರಾನಗರ ಡಿಪೋದ ಸಂಚಾರ ನಿಯಂತ್ರಕರೊಬ್ಬರಿಗೆ ಸೋಂಕು ಕಾಣಿಸಿಕೊಂಡಿದ್ದು, ಬೆನ್ನಲ್ಲೇ ಉಳಿದ ಸಿಬ್ಬಂದಿಯಲ್ಲಿ ತಲ್ಲಣ ಸೃಷ್ಟಿಸಿದೆ.

Advertisement

ಪರಿಣಾಮ  ಸಂಜೆಯಿಂದಲೇ ಬಸ್‌ಗಳ ಕಾರ್ಯಾಚರಣೆಯಲ್ಲಿ ಇಳಿಮುಖ ಕಂಡುಬಂದಿದೆ. ಸೋಮವಾರ ಈ ಆತಂಕ ಉಳಿದ ಘಟಕಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ಎರಡೂ ಸೋಂಕಿನ ಮೂಲಗಳು ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ,  ಇಬ್ಬರೂ ಹೆಚ್ಚು-ಕಡಿಮೆ ಮೂರ್‍ನಾಲ್ಕು ದಿನಗಳಿಂದ ಅನಾರೋಗ್ಯ ಕಾರಣ ರಜೆಯಲ್ಲಿದ್ದರು. ಹಾಗಾಗಿ, ಇವರೊಂದಿಗೆ ಸಂಪರ್ಕದಲ್ಲಿದ್ದವರ ಸಂಖ್ಯೆ ವಿರಳ.

ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಇಬ್ಬರ ಗಂಟಲು  ದ್ರವ ಮಾದರಿ ಪರೀಕ್ಷೆಗೊಳಗಪಡಿಸಲಾಗಿತ್ತು. “ಪಾಸಿಟಿವ್‌’ ಇರುವುದು ಗೊತ್ತಾಗುತ್ತಿದ್ದಂತೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಕುಟುಂಬಗಳನ್ನು ಕ್ವಾರಂಟೈನ್‌ ಮಾಡಲಾಗಿದೆ. ಪ್ರಾಥಮಿಕ ಮತ್ತು ದ್ವಿತೀಯ  ಸಂಪರ್ಕಿತರ ಪತ್ತೆಕಾರ್ಯವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದುವರಿಸಿದೆ. ಸಂಚಾರ ನಿಯಂತ್ರಕರು ಜೂ.6ರವರೆಗೆ ಕಾರ್ಯನಿರ್ವಹಿಸಿದ್ದರು. ನಂತರ ಅನಾರೋಗ್ಯದ ಕಾರಣ ರಜೆಯಲ್ಲಿದ್ದರು. ಅದೇ ರೀತಿ,  ಕೋರಮಂಗಲದ ಚಾಲಕ ಜೂ.11ರವರೆಗೆ ಕರ್ತವ್ಯ ನಿರ್ವಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುರಕ್ಷತೆ ನಗಣ್ಯ: ಆರೋಪ: ಈ ಮಧ್ಯೆ ಪಾಸಿಟಿವ್‌ ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ತಮಗೆ ಸುರಕ್ಷತೆಯೇ ಇಲ್ಲದಂತಾಗಿದೆ  ಎಂದು ಕೋರಮಂಗಲ ಡಿಪೋದಲ್ಲಿ ಚಾಲನಾ ಸಿಬ್ಬಂದಿ  ಭಾನುವಾರ ಪ್ರತಿಭಟನೆ ನಡೆಸಿದರು. “ಸೂಕ್ತ ಮಾಸ್ಕ್ ಮತ್ತು ಸ್ಯಾನಿಟೈಸರ್‌ ವ್ಯವಸ್ಥೆಯೇ  ಇಲ್ಲ. ನಿತ್ಯ ನೂರಾರು ಜನರೊಂದಿಗೆ ಪ್ರಯಾಣಿಸುವ ಚಾಲಕರು ಮತ್ತು  ನಿರ್ವಾಹಕರು ಆತಂಕದಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ.

ಸಹವಾಸ ಬೇಡ ವೆಂದು ಮನೆಯಲ್ಲಿದ್ದರೆ, ವೇತನಕ್ಕೆ ಕತ್ತರಿ ಬೀಳುತ್ತದೆ. ಆಗ, ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ. ಕೆಲಸಕ್ಕೆ ಹಾಜರಾದರೆ, ಸಹೋದ್ಯೋಗಿಗಳಲ್ಲಿ  ಕಾಣಿಸುತ್ತಿರುವ ಕೋವಿಡ್‌ 19 ಭಯ ಹುಟ್ಟಿಸುತ್ತದೆ. ಸಮರ್ಪಕ ಸುರಕ್ಷಾ ಸಾಮಗ್ರಿಗಳನ್ನು ವಿತರಿಸಬೇಕು’ ಎಂದು ಆಗ್ರಹಿಸಿದರು. “ಇಬ್ಬರಲ್ಲಿ ಪಾಸಿಟಿವ್‌ ಇರುವುದು ಗೊತ್ತಾಗಿದೆ. ಆದರೆ, ಈ ಬಗ್ಗೆ ವರದಿಗಳು ಇನ್ನೂ ಸಂಸ್ಥೆಯ ಕೈಸೇರಿಲ್ಲ.

Advertisement

ಬೆನ್ನಲ್ಲೇ ಅಗತ್ಯ ಸುರಕ್ಷತಾ  ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಖಗವಸು, ಸ್ಯಾನಿಟೈಸರ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಇಬ್ಬರೂ ವಾರದಿಂದ ರಜೆ ಇರುವುದರಿಂದ ಸಂಪರ್ಕಿತರ ಪ್ರಶ್ನೆ ಬರುವುದಿಲ್ಲ. ಕಾರ್ಯಾಚರಣೆ ಮೇಲೆಯೂ ಇದು ಪ್ರಭಾವ  ಬೀರುವುದಿಲ್ಲ’ ಎಂದು  ಬಿಎಂಟಿಸಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಸ್ಥೆಯ ಅಧಿಕಾರಿಯೊಬ್ಬರು ಸಿಬ್ಬಂದಿಯ ಅಹವಾಲು ಆಲಿಸಿ ಮನವೊಲಿಸುವ ಪ್ರಯತ್ನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next