ಮುಂಬಯಿ: ಕಳೆದ ವಾರಕ್ಕೆ ಹೋಲಿಸಿದರೆ ಮುಂಬಯಿ ಮಹಾನಗರದಲ್ಲಿ ಕೋವಿಡ್ ವೈರಸ್ ಸೋಂಕಿನ ಆರ್ಭಟ ಸ್ವಲ್ಪ ಮಟ್ಟಿಗೆ ಕಡಿಮೆಯಾದಂತೆ ಕಾಣುತ್ತಿದೆ. ಆದರೆ, ಅದರ ಅಕ್ಕಪಕ್ಕದ ನಗರಗಳಲ್ಲಿ ಸೋಂಕಿತರ ಸಂಖ್ಯೆ ವ್ಯಾಪಕವಾಗಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸದ್ಯ ದೇಶದ ಕೋವಿಡ್ ಹಾಟ್‌ಸ್ಪಾಟ್‌ಗಳಲ್ಲಿ ಎರಡನೇ ಸ್ಥಾನದಲ್ಲಿರುವ ಮುಂಬಯಿ ಮಹಾನಗರ ಪ್ರದೇಶದ (ಎಂಎಂಆರ್) ವ್ಯಾಪ್ತಿಯಲ್ಲಿ ಮುಂಬಯಿ ನಗರ, ಉಪನಗರ, ಥಾಣೆ, ಪಾಲ್ಗರ್ ಮತ್ತು ರಾಯಯ್ಗಡ ಎಂಬ ಐದು ಜಿಲ್ಲೆಗಳಿದ್ದು, ಎಂಎಂಆರ್ ವ್ಯಾಪ್ತಿಯಲ್ಲಿ ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮುಂಬಯಿ ಒಂದರಲ್ಲೇ 68 ಸಾವಿರಕ್ಕೂ ಅಧಿಕ ಸೋಂಕಿತರಿದ್ದರೆ, ಉಳಿದವರೆಲ್ಲಾ ಮುಂಬಯಿನ ನೆರೆ ನಗರಗಳ ನಿವಾಸಿಗಳು. ಮುಂಬೈ ನಗರದಲ್ಲಿನ ಕಂಪೆನಿಗಳು, ಕಾರ್ಖಾನೆಗಳಲ್ಲಿ ಕೆಲಸ ಮಾಡುವವರ ಪೈಕಿ ಹೆಚ್ಚಿನವರು ಉಪನಗರಗಳಿಂದ ಬರುತ್ತಾರೆ. “ಲಾಕ್‌ಡೌನ್ ತೆರವಾದ ಬಳಿಕ ಜನ ಸಂಚಾರ ಹೆಚ್ಚಾಗಿರುವ ಕಾರಣ ಮಹಾನಗರದಿಂದ ಉಪನಗರಗಳಿಗೂ ಸೋಂಕು ವ್ಯಾಪಿಸಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.