ಆನೇಕಲ್: ತಾಲೂಕಿನ ಆಕ್ಸ್‌ಫರ್ಡ್ ಆಸ್ಪತ್ರೆಯಲ್ಲಿ ಯುವಕನೊಬ್ಬ ಮೃತಪಟ್ಟಿದ್ದು, ಇದಕ್ಕೆ ಆಸ್ಪತ್ರೆಯ ನಿರ್ಲಕ್ಷ್ಯ ಕಾರಣ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ.
ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಶುಕ್ರವಾರ ಮಹಿಳೆಯೊಬ್ಬರು ತನ್ನ ಮಗನನ್ನು ಆಕ್ಸ್‌ಫರ್ಡ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ ಬಳಿಕ ಆತನ ಚಿಕಿತ್ಸೆ, ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಇಡೀ ದಿನ ಆಸ್ಪತ್ರೆ ಮುಂದೆ ಕೂತು ಅಳುತ್ತಿದ್ದರು. ಇದು ಮಾಧ್ಯಮಗಳಲ್ಲಿ ಸುದ್ದಿ ಸಹ ಆಗಿತ್ತು. ಆದರೆ, ಅದೇ ತಾಯಿಯ ಮಗ ಈಗ ಮೃತಪಟ್ಟಿದ್ದಾನೆ ಎಂಬ ಸುದ್ದಿ ತಿಳಿದು ಕುಸಿದುಹೋದರು.
ಬನ್ನೇರುಘಟ್ಟ ಸಮೀಪದ ವಾಸಿ ಅಲೋಕ್ (28) ಮೃತಪಟ್ಟ ಯುವಕ. 8 ದಿನಗಳ ಹಿಂದೆ ಕೋವಿಡ್ ಸೋಕು ತಗುಲಿದೆ ಎಂದು ಆಕ್ಸ್‌ಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನಡೆದುಬಂದೇ ದಾಖಲಾಗಿದ್ದರು. ಅಂದಿನಿಂದಲೂ ಮಗನ ಚಿಕಿತ್ಸೆ ಹೇಗಿದೆ, ಆರೋಗ್ಯದ ಸ್ಥಿತಿ ಬಗ್ಗೆ ಯಾವುದೇ ಮಾಹಿತಿ ನೀಡದೆ ಆಸ್ಪತ್ರೆಯವರು ಸತಾಯಿಸಿದ್ದಲ್ಲದೆ, ಮಗ ಮೃತಪಟ್ಟಿದ್ದಾನೆ ಎಂದು ಹೇಳುತ್ತಿದ್ದಾರೆ. ಆರೋಗ್ಯವಾಗಿದ್ದ ನನ್ನ ಮಗನ ಸಾವಿಗೆ ಆಸ್ಪತ್ರೆಯವರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.
ಆಕ್ಸ್‌ಫರ್ಡ್ ಆಸ್ಪತ್ರೆಗೆ ದಾಖಲಾದ ಮಗ ಎರಡು ದಿನಗಳ ಹಿಂದೆ ಕಳುಹಿಸಿದ ವಿಡಿಯೋನಲ್ಲಿ ಮಾತನಾಡುತ್ತ, ನನಗೆ ಇಲ್ಲಿ ಯಾವುದೇ ಚಿಕಿತ್ಸೆ ನೀಡುತ್ತಿಲ್ಲ, ಬದಲಾಗಿ ಹಿಂಸೆ ನೀಡುತ್ತಿದ್ದಾರೆ. ನನ್ನನ್ನು ಕರೆದುಕೊಂಡು ಹೋಗಿ ಎಂದು ಮನವಿ ಮಾಡಿಕೊಂಡಿದ್ದ. ಇದರಿಂದ ಆತಂಕಕ್ಕೆ ಒಳಗಾಗಿ ಆಸ್ಪತ್ರೆಯ ಬಳಿ ಬಂದು ಮಗನ ಆರೋಗ್ಯದ ಬಗ್ಗೆ ಮಾಹಿತಿ ಕೇಳಿದರೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಾರಿಕೆಯ ಉತ್ತರವನ್ನು ಆಸ್ಪತ್ರೆಯವರು ನೀಡಿದ್ದರು. ಇದರಿಂದ ದಿಕ್ಕು ತೋಚದೆ ರಾತ್ರಿಯವರೆಗೂ ಆಸ್ಪತ್ರೆಯ ಎದುರು ಕಾಯ್ದು ಕುಳಿತಿದ್ದೆ. ಈಗ ಮಗನ ಸಾವಿನ ಸುದ್ದಿ ತಿಳಿದಿದೆ. ಇದಕ್ಕೆಆಸ್ಪತ್ರೆಯವರೇ ಹೊಣೆ ಎಂದು ದೂರಿದ್ದಾರೆ. ಬನ್ನೇರುಘಟ್ಟ ಸಮೀಪದ ಗೊಟ್ಟಿಗೆರೆ ವಾಸಿ ಜಯಶ್ರೀ ಮತ್ತು ದಿವಾಕರ್ ಎಂಬುವರ ಪುತ್ರ. ಅಲೋಕ್ ಬಿಇಪದವೀಧರ. ಮನೆಯ ಆಧಾರ ಸ್ತಂಭವಾಗಿದ್ದ ಈತನನ್ನುನಾವು ಕಳೆದುಕೊಂಡೆವು. ಇನ್ನು ನಮಗೆ ದಿಕ್ಕು ಯಾರು ಎಂದು ಅವರು ಗೋಳಾಡಿದರು.