Advertisement

ಸಾವಿರ ಗಡಿ ದಾಟಿದ ಸೋಂಕಿತರು

12:21 PM Jul 17, 2020 | Suhan S |

ವಿಜಯಪುರ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಕೋವಿಡ್‌ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು ಗುರುವಾರ ಒಂದೇ 144 ಜನರಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸಹಸ್ರ ಗಡಿ ಮೀರಿ ನಿಂತಿದೆ.

Advertisement

ಗುರುವಾರ ಪ್ರಕಟವಾದ ಕೋವಿಡ್‌ ವೈದ್ಯಕೀಯ ವರದಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ 144 ಜನರಲ್ಲಿ ಸೋಂಕು ಕಾಣಿಸಿದ್ದು, ಸೋಂಕಿತರ ಸಂಖ್ಯೆ 1120ಕ್ಕೇರಿದೆ. ಹೊಸ ಸೋಂಕಿತರಲ್ಲಿ ಪೊಲೀಸ್‌, ಮಹಾನಗರ ಪಾಲಿಕೆ, ಹೆಸ್ಕಾಂ ಸಿಬ್ಬಂದಿ ಅಧಿಕ ಸಂಖ್ಯೆಯಲ್ಲಿ ಇರುವುದು ಗಮನೀಯ. ಕಂಟೈನ್‌ಮೆಂಟ್‌ ಪ್ರದೇಶಗಳ ಸೋಂಕಿತರ ಪರಿಸರದಲ್ಲಿನ ಸಂಪರ್ಕದಿಂದ ಇತರರಿಗೆ ಸೋಂಕು ಹರಡಿಕೊಂಡಿದೆ. ನಗರ, ಪಟ್ಟಣ, ಗ್ರಾಮಗಳಲ್ಲೂ ವ್ಯಾಪಕವಾಗಿ ಹರಡಲು ಆರಂಭಿಸಿದೆ. ಇದರಲ್ಲಿ 77 ಪುರುಷರು, 49 ಮಹಿಳೆಯರು, ಓರ್ವ ಯುವಕ, 5 ಯುವತಿಯರು, 9 ಬಾಲಕರು ಹಾಗೂ 3 ಬಾಲಕಿಯರು ಸೇರಿದ್ದಾರೆ. ಸೋಂಕು ದೃಢಪಟ್ಟಿರುವ ಎಲ್ಲರನ್ನೂ ಕೋವಿಡ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದೇ ದಿನ ಕೋವಿಡ್‌ ದಿಂದ ಗುಣಮುಖರಾಗಿ 65 ರೋಗಿಗಳು ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆ ಮನೆಗೆ ಮರಳಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನಿಂದ ಗುಣಮುಖ ಆದವರ ಸಂಖ್ಯೆ 719ಕ್ಕೇರಿದೆ. ಮತ್ತೂಂದೆಡೆ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನಿಂದ 19 ಜನರು ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next