ಕಲಬುರಗಿ: ಕಳೆದ ಡಿ.14ರಂದು ಜಿಲ್ಲಾಸ್ಪತ್ರೆಯಲ್ಲಿ ಶಿಶುಗಳು ಅದಲು ಬದಲು ಆಗಿರುವ ಪ್ರಕರಣಕ್ಕೆ ತೆರೆ ಬಿದ್ದಿದ್ದು, ಡಿಎನ್‌ಎ ಪರೀಕ್ಷೆ ನಂತರ ಶಿಶುಗಳು ತಾಯಿಯಂದಿರ ಮಡಿಲು ಸೇರಿವೆ. ಆದರೆ ಮೂರು ವಾರಗಳ ಕಾಲ ತಾಯಂದಿಯರು ಆಸ್ಪತ್ರೆಯಲ್ಲಿದ್ದರೂ ತಮ್ಮ ಮಗುವಿಗೆ ಪ್ರೀತಿ ತೋರದ, ಮುದ್ದಾಡಿಸದ ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾಗಿತ್ತು.
ಕಳೆದ 2017ರ ಡಿಸೆಂಬರ್ 14ರಂದು ಜಿಲ್ಲಾಸ್ಪತ್ರೆಯಲ್ಲಿ ಜೇವರ್ಗಿ ತಾಲೂಕಿನ ಕೋಣಸಿರಸಗಿ ಗ್ರಾಮದ ನಂದಮ್ಮ ಸಿದ್ದಪ್ಪಗೆ ಮಗುವೊಂದು ಜನಿಸಿತ್ತು. ಅದೇ ದಿನ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕಾಡಮಗೇರಾದ ಗ್ರಾಮದ ನಜ್ಮಾ ಬೇಗಂ ಲಾಲ ಮೊಹ್ಮದ ಎನ್ನುವರಿಗೂ ಮಗು ಜನಿಸಿತ್ತು. ಆಸ್ಪತ್ರೆಯ ಆಯಾಗಳು ನಂದಮ್ಮ ಹಾಗೂ ಅವರ ಪತಿ ಮತ್ತು ಕುಟುಂಬ ವರ್ಗದವರಿಗೆ ಗಂಡು ಮಗು ಜನಿಸಿದೆ ಎಂದು ಹೇಳಿ ಗಂಡು ಮಗು ಕೊಟ್ಟಿದ್ದರು.
ಪ್ರಥಮ ಮಗು ಗಂಡು ಜನಿಸಿತು ಎಂದು ಹರ್ಷಗೊಂಡು ಬಂಧುಗಳಿಗೆ ಸುದ್ದಿ ಮುಟ್ಟಿಸಿದ್ದರು. ಆದರೆ ಈ ಖುಷಿ ಬಹಳ ಹೊತ್ತು ಉಳಿಯಲಿಲ್ಲ. ತದನಂತರ ಆಸ್ಪತ್ರೆಯ ಇನ್ನೊಬ್ಬ ಆಯಾ ಬಂದು ತಪ್ಪಿನಿಂದ ನಿಮಗೆ ಗಂಡು ಮಗು ಹುಟ್ಟಿದೆ ಎಂದು ಹೇಳಿದ್ದೆವು. ಆದರೆ ನಿಮಗೆ ಜನಿಸಿದ್ದು ಹೆಣ್ಣು ಎಂದು ಹೇಳಿ ಹೆಣ್ಣು ಮಗು ಒಪ್ಪಿಸಿದರು. ನಿಮಗೆ ಕೊಟ್ಟಿದ್ದ ಗಂಡು ನಜ್ಮಾ ಬೇಗಂಳದ್ದು ಎಂದು ಹೇಳಿ ಗಂಡು ಮಗು ತೆಗೆದುಕೊಂಡರು. ಇದನ್ನು ಒಪ್ಪದ ನಂದಮ್ಮ ಕುಟುಂಬ ವರ್ಗದವರು ಆಸ್ಪತ್ರೆಯ ಆಡಳಿತದವರ ವಿರುದ್ಧ ಪ್ರತಿಭಟನೆಗಿಳಿದರು. ತಮ್ಮೊಂದಿಗೆ ಆಸ್ಪತ್ರೆಯ ಸಿಬ್ಬಂದಿ ಆಟವಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಜ್ಮಾ ಬೇಗಂಳ ಕುಟುಂಬದದವರು ಸಹ ಹೆಣ್ಣು ಮಗು ಸ್ವೀಕರಿಸಲು ಒಪ್ಪಲಿಲ್ಲ. ಆಗ ಆಸ್ಪತ್ರೆಯ ಸರ್ಜನ್ ಡಾ.ಬಿ.ಎನ್. ಜೋಶಿ ಹಾಗೂ ಇತರರು ಎರಡು ಕುಟುಂಬ ವರ್ಗದವರ ಮನವೊಲಿಸಲು ಯತ್ನಿಸಿದರು ಹಾಗೂ ರಕ್ತ ಪರೀಕ್ಷೆ ನಡೆಸಿದರು. ರಕ್ತ ಪರೀಕ್ಷೆ ವರದಿಯಂತೆ ನಜ್ಮಾ ಬೇಗಂ ಲಾಲ ಮೊಹ್ಮದ ಹಾಗೂ ಗಂಡು ಮಗುವಿನ ರಕ್ತದ ಗುಂಪು ಬಿ ಪಾಸಿಟಿವ್ ಆಗಿತ್ತು. ಹೆಣ್ಣು ಮಗುವಿನ ರಕ್ತದ ಗುಂಪು ನಂದಮ್ಮ ಮತ್ತು ಸಿದ್ದಪ್ಪ ರಕ್ತದ ಗುಂಪು ಎ ನೆಗೆಟಿವ್ ಆಗಿತ್ತು. ಆದರೂ ಮಕ್ಕಳನ್ನು ಇಬ್ಬರು ತಾಯಿಯಂದಿರು
ಒಪ್ಪಿಕೊಳ್ಳದ ಕಾರಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಹಾಗೂ ಇತರ ಅಧಿಕಾರಿಗಳನ್ನು ಕರೆಯಿಸಿ ಮನವೊಲಿಸಿ ಪ್ರಯತ್ನಿಸಲಾಗಿತ್ತು. ಆದರೂ ಶಿಶುಗಳನ್ನು ಒಪ್ಪಿಕೊಳ್ಳದ ಜತೆಗೆ ಹಾಲು ಕುಡಿಸಲು ಇಬ್ಬರೂ ತಾಯಿಂದಿರು ನಿರಾಕರಿಸಿದ್ದರು.
ಆಗ ಆಸ್ಪತ್ರೆ ಹಾಗೂ ಪೊಲೀಸ್ ಇಲಾಖೆಯವರು ಡಿಎನ್‌ಎ ಪರೀಕ್ಷೆ ನಡೆಸಲು ನಿರ್ಧರಿಸಿ ಡಿಎನ್‌ಎ ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ತಾಯಂದಿಯರಿಂದ ತಿರಸ್ಕಲ್ಪಟ್ಟ ಎರಡು ಶಿಶುಗಳು ಆಸ್ಪತ್ರೆಯಲ್ಲಿಯೇ ಇದ್ದವು. ಡಿಎನ್‌ಎ ಪರೀಕ್ಷಾ ವರದಿ ಬರುವವರೆಗೂ ಆಸ್ಪತ್ರೆಯಲ್ಲಿರಲು ಅವಕಾಶ ಕಲ್ಪಿಸಲಾಗಿತ್ತು. ಜ.5ರಂದು ವರದಿ ಬಂದ ನಂತರ ಗಂಡು ಮಗುವನ್ನು ನಜ್ಮಾ ಬೇಗಂಗೆ ಹಾಗೂ ಹೆಣ್ಣು ಮಗುವನ್ನು ನಂದಮ್ಮಳಿಗೆ ನೀಡಲಾಯಿತು.