ಉದಯವಾಣಿ ಸಮಾಚಾರ
ನೇಸರಗಿ: ಮಣ್ಣಿಗೂ ರೈತರಿಗೂ ಅವಿನಾಭಾವ ಸಂಬಂಧವಿದೆ. ಮಣ್ಣಿನ ಸತ್ವವನ್ನು ಕಾಪಾಡಿಕೊಂಡು ಉತ್ತಮ ಬೆಳೆ ಬೆಳೆಯಬೇಕೆಂದು ಕೊಲ್ಲಾಪೂರ ಸಿದ್ದಗಿರಿ ಮಹಾಸಂಸ್ಥಾನ ಕನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಕೆ.ಎನ್.ಮಲ್ಲಾಪೂರ ಗ್ರಾಮದ ಗಾಳೇಶ್ವರಮಠದಲ್ಲಿ ಜಾತ್ರೆ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ,
ಮಣ್ಣಿನೊಂದಿಗೆ ಸಂವಾದ ಮಾಡುವುದನ್ನು ರೈತ ಮರೆತಿದ್ದಾನೆ. ಅಂದು ಮಣ್ಣನ್ನು ದೈವದತ್ತ ಫಲ ಎನ್ನುತ್ತಿದ್ದ ರೈತರು ಈಗ ಅದಕ್ಕೆ ರಾಸಾಯನಿಕ ಬೆರೆಸಿ ಕಲಬೆರಕೆ ಮಾಡುತ್ತಿದ್ದಾರೆ. ಇದರಿಂದ ಮಣ್ಣಿನ ಜೀವ ಸರಪಳಿ ಹಾಳಾಗುತ್ತಿದೆ ಎಂದರು.
ಸರಕಾರ ಸಹ ಮಣ್ಣನ್ನು ಉಳಿಸುವ ಬದಲಿಗೆ ಸಾವಿರಾರು ಕೋಟಿ ಖರ್ಚು ಮಾಡಿ ಮಣ್ಣನ್ನು ಕೊಲ್ಲುವ ಕಾರ್ಯ ಮಾಡುತ್ತಿದೆ. ಮಳೆ ಸಹ ಇಂದು ತಿಳಿದಾಗ ಬರುತ್ತಿದೆ. ಮಳೆ ಬರಲು ಒಂದು ನಿರ್ದಿಷ್ಟ ವೇಳೆ ಇಲ್ಲದಂತಾಗಿದೆ. ಮನುಷ್ಯರ ಕಾರ್ಯದಿಂದ ಪ್ರಕೃತಿ ಮುನಿದು ಬೇಕಾದಾಗ ಮಳೆಯಾಗುತ್ತಿದೆ. ಸರಕಾರ ಅಥವಾ ವಿಜ್ಞಾನಿಗಳು ನಮ್ಮ ಉದ್ಧಾರ ಮಾಡುತ್ತಾರೆಂದು ರೈತ ನಂಬಿದ್ದಾನೆ. ನಮ್ಮ ಉದ್ಧಾರ ನಾವೇ ಮಾಡಿಕೊಳ್ಳಬೇಕು. ಸಾವಯವ ಬೆಳೆಗೆ ಮಹತ್ವ ನೀಡಿ ಸಾವಯವ ಬೆಳೆಯಿಂದ ನಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕೆಂದರು.
ಹಂಪಿ ವಿದ್ಯಾನಂದ ಭಾರತಿ ಸ್ವಾಮೀಜಿ, ಹುಣಶ್ಯಾಳ ನಿಜಗುಣ ದೇವರು, ಚಿದಾನಂದ ಸ್ವಾಮೀಜಿ, ಕುಳ್ಳೂರ ಬಸವಾನಂದ ಭಾರತಿ ಸ್ವಾಮೀಜಿ, ತೊಂಡಿಕಟ್ಟಿ ಅಭಿನವ ವೆಂಕಟೇಶ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ರಾಜು ಪವಾರ, ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ, ಉಪಾಧ್ಯಕ್ಷ ಸುರೇಶ ಪರವನ್ನವರ, ಈರನಗೌಡ ಪಾಟೀಲ, ಜಯಶಂಕರ ವಣ್ಣೂರ, ದ್ಯಾಮನಗೌಡ ಪಾಟೀಲ, ಮಹಾಂತೇಶ ತೋಟಗಿ, ಮಹಾಂತೇಶ ಹಿರೇಮಠ, ಇನ್ನಿತರರು ಇದ್ದರು.