ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ಮತದಾನ ನಡೆಯುತ್ತಿರುವ ಈ ಹೊತ್ತಿನಲ್ಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪೌರತ್ವದ ಕುರಿತ ಚರ್ಚೆಯು ಮತ್ತೆ ಮುನ್ನೆಲೆಗೆ ಬಂದಿದೆ. ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಅವರು ರಾಹುಲ್ ಪೌರತ್ವದ ಕುರಿತು ಪ್ರಶ್ನೆಯೆತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಕೇಂದ್ರ ಗೃಹ ಸಚಿವಾಲಯವು ಮಂಗಳವಾರ ರಾಹುಲ್‌ಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೇಳಿದೆ.
ನಿಮ್ಮ ಪೌರತ್ವಕ್ಕೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೂ ಸ್ಪಷ್ಟವಾದ ಉತ್ತರವನ್ನು 15 ದಿನಗಳೊಳಗಾಗಿ ಸಲ್ಲಿಸಬೇಕು ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಈ ನೋಟಿಸ್ ಜಾರಿಯಾಗುತ್ತಿದ್ದಂತೆಯೇ ಒಂದು ಕಡೆ ರಾಹುಲ್ ಲಂಡನ್‌ನವರಾ, ಲ್ಯುಟೆನ್ಸ್‌ನವರಾ ಎಂದು ಬಿಜೆಪಿ ವ್ಯಂಗ್ಯವಾಡಿದರೆ, ಮತ್ತೂಂದು ಕಡೆ ಕೆಂಡಾಮಂಡಲವಾಗಿರುವ ಕಾಂಗ್ರೆಸ್, ಇದು ರಾಜಕೀಯಪ್ರೇರಿತ ಕುತಂತ್ರ ಎಂದು ಹೇಳಿದೆ. ಇನ್ನೊಂದೆಡೆ, ರಾಹುಲ್ ಭಾರತದ ಮಣ್ಣಲ್ಲೇ ಹುಟ್ಟಿ, ಬೆಳೆದವರು ಎಂಬುದು ಇಡೀ ದೇಶಕ್ಕೇ ಗೊತ್ತು ಎಂದು ಸಹೋದರಿ ಪ್ರಿಯಾಂಕಾ ವಾದ್ರಾ ಪ್ರತಿಕ್ರಿಯಿಸಿದ್ದಾರೆ.
ಪ್ರಶ್ನೆ ಎದ್ದಿದ್ದು ಏಕೆ?: 2003ರಲ್ಲಿ ಯುಕೆಯಲ್ಲಿ ಬ್ಯಾಕಾಪ್ಸ್ ಲಿಮಿಟೆಡ್ ಎಂಬ ಕಂಪೆನಿಯನ್ನು ಸ್ಥಾಪಿಸಲಾಗಿದ್ದು, ರಾಹುಲ್ ಗಾಂಧಿ ಅವರೂ ಈ ಕಂಪೆನಿಯ ನಿರ್ದೇಶಕರಲ್ಲಿ ಒಬ್ಬರು ಎಂದು ನಮೂದಿಸಲಾಗಿತ್ತು. ಈ ಬ್ರಿಟಿಷ್ ಕಂಪೆನಿಯು 2005ರ ಅಕ್ಟೋಬರ್ 10 ಮತ್ತು 2006ರ ಅ.31ರಂದು ಸಲ್ಲಿಸಿರುವ ವಾರ್ಷಿಕ ರಿಟರ್ನ್ಸ್ನಲ್ಲಿ, ರಾಹುಲ್ ಗಾಂಧಿ ಅವರ ಜನ್ಮದಿನಾಂಕವನ್ನು ಜೂನ್ 19, 1970 ಎಂದೂ, ಅವರ ಪೌರತ್ವವನ್ನು “ಬ್ರಿಟಿಷ್’ ಎಂದೂ ನಮೂದಿಸಲಾಗಿತ್ತು. ಅಷ್ಟೇ ಅಲ್ಲದೆ, 2009ರ ಫೆ.17ರಂದು ಕಂಪೆನಿಯು ಮುಚ್ಚಿಹೋಗಿದ್ದು, ಆಗ ಸಲ್ಲಿಸುವ ರಾಹುಲ್ ಪೌರತ್ವವನ್ನು ಬ್ರಿಟಿಷ್ ಎಂದೇ ಉಲ್ಲೇಖೀಸಲಾಗಿತ್ತು ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಆರೋಪಿಸಿದ್ದಾರೆ. ಈ ಎಲ್ಲ ಆರೋಪಗಳಿಗೆ ಸಂಬಂಧಿಸಿ ನೀವು ಸ್ಪಷ್ಟವಾದ ಹಾಗೂ ಸತ್ಯವಾದ ಮಾಹಿತಿಯನ್ನು 15 ದಿನಗಳ ಒಳಗೆ ಸಲ್ಲಿಸಬೇಕು ಎಂದು ರಾಹುಲ್‌ಗೆ ಜಾರಿ ಮಾಡಿರುವ ನೋಟಿಸ್‌ನಲ್ಲಿ ಸೂಚಿಸಲಾಗಿದೆ.
2015ರ ನವೆಂಬರ್‌ನಲ್ಲಿ ರಾಹುಲ್ ಪೌರತ್ವ ಕುರಿತು ಸಿಬಿಐ ತನಿಖೆಯಾಗಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಪಿಐ ಎಲ್ ಅನ್ನು ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಬಳಿಕ ಸಂಸದೀಯ ನೈತಿಕ ಸಮಿತಿಗೂ ಈ ಬಗ್ಗೆ ಸ್ವಾಮಿ ದೂರು ಸಲ್ಲಿಸಿದ್ದರು. ಇದು ರಾಹುಲ್ ಅವರಿಗೆ ಅವಹೇಳನ ಮಾಡಲು ಸಲ್ಲಿಸಿರುವ ದೂರು ಎಂದು ಹೇಳಿ ಸಮಿತಿ ಕೂಡ ಅರ್ಜಿಯನ್ನು ವಜಾ ಮಾಡಿತ್ತು.
ಮಂಗಳವಾರದ ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರಾಜ ನಾಥ್ ಸಿಂಗ್, ಇದು ದೊಡ್ಡ ಬೆಳವಣಿಗೆಯೇನೂ ಅಲ್ಲ. ಇದೊಂದು ಸಾಮಾನ್ಯ ಪ್ರಕ್ರಿಯೆ. ಲೋಕಸಭೆ ಚುನಾವಣೆಯ ಹೊತ್ತಲ್ಲೇ ನೋಟಿಸ್ ನೀಡಲಾಗಿದೆ ಎಂಬ ಮಾತ್ರಕ್ಕೆ ಸಮಯದ ಬಗ್ಗೆ ಪ್ರಶ್ನಿಸುವುದು ಸರಿಯಲ್ಲ ಎಂದಿದ್ದಾರೆ.
ಭಾರತೀಯರ ಕಣ್ಣೆದುರೇ ಹುಟ್ಟಿ, ಬೆಳೆದವರು
ನೋಟಿಸ್ ಕುರಿತು ಪ್ರತಿಕ್ರಿಯೆ ನೀಡಿದ ಪ್ರಿಯಾಂಕಾ ವಾದ್ರಾ, “ಇಂಥ ಮೂರ್ಖತನವನ್ನು ನಾನೆಂದೂ ಕೇಳಿಲ್ಲ, ನೋಡಿಲ್ಲ. ರಾಹುಲ್ ಇಲ್ಲೇ ಹುಟ್ಟಿ, ಇಲ್ಲೇ ಬೆಳೆದವರು. ಅವರೊಬ್ಬ ಹಿಂದೂಸ್ಥಾನಿ ಎಂಬುದು ಇಡೀ ಹಿಂದೂಸ್ಥಾನಕ್ಕೇ ಗೊತ್ತು. ಭಾರತದ ಜನರ ಮುಂದೆಯೇ ರಾಹುಲ್ ಹುಟ್ಟಿದ್ದು, ಅವರ ಕಣ್ಣೆದುರೇ ಬೆಳೆದಿದ್ದು. ಸೋಲಿನ ಭೀತಿಯಿಂದ ಈ ರೀತಿಯ ಆರೋಪ ಮಾಡಲಾಗುತ್ತಿದೆ ಎಂದು ನನಗನಿಸುತ್ತಿದೆ’ ಎಂದು ಆಕ್ರೋಶಭರಿತರಾಗಿ ನುಡಿದಿದ್ದಾರೆ.