Advertisement
ಕೋಳಿ ಕೂಗುವ ಮೊದಲೇ ಎದ್ದು, ಪೇಸ್ಟ್ ಸವರಿದ ಬ್ರಶ್ಶನ್ನ ಬಾಯಿಗಿಟ್ಟುಕೊಂಡು, ವೆಸ್ಟರ್ನ್ ಕಮೋಡ್ ಮೇಲೆ ಕುಳಿತು, ಜಗತ್ತೇಕೆ ಹಿಂಗಿದೆ? ನಾವೇಕೆ ಹಿಂಗಾಗಿದೇವೆ? ಎಂದು ಯೋಚಿಸುವಷ್ಟರಲ್ಲಿ ಬಚ್ಚಲುಮನೆಯಲ್ಲಿನ ಗೀಸರ್ ಕೂಗಿ ಕರೆಯುತ್ತೆ; ನೀರು ಕಾದಿವೆ ಬನ್ನಿ ಎಂದು. ಕುಳಿತ ಕೆಲಸ ಇನ್ನೂ ಪೂರ್ತಿ ಆಗಿಲ್ಲ. ಆದರೆ ಟೈಮಾಗಿದೆ!
Related Articles
Advertisement
ಬೆಂಗಳೂರಿನ ಬಹುತೇಕ ವೃತ್ತಿಪರರ ದಿನಚರಿ ಇರುವುದು ಹೀಗೇ. ಈ ನಗರದ ಬ್ಯುಸಿ ಬದುಕಿನಲ್ಲಿ ಯಾರಿಗೂ ಸಮಯವಿಲ್ಲ. ಹಣದ ಬೆನ್ನುಬಿಧ್ದೋ, ವೃತ್ತಿಬದುಕಿಗೆ ಬದ್ಧರಾಗ್ಯೋ ತಮ್ಮನ್ನು ತಾವು ಅಗತ್ಯಕ್ಕಿಂತಲೂ ಹೆಚ್ಚು ಬ್ಯುಸಿ ಮಾಡಿಕೊಂಡಿರುವ ಜನ, “ಆರೋಗ್ಯ ಭಾಗ್ಯ’ವನ್ನೇ ಮರೆತಿದ್ದಾರೆ. ಬೆಂಗಳೂರಿನಲ್ಲಿ ವಾಸವಿರುವ ಅರ್ಧದಷ್ಟು ಮಂದಿ ದೈಹಿಕ ಚಟುವಟಿಕೆಗಳನ್ನೇ ಮರೆತಿದ್ದಾರೆ.
ಅಂದರೆ ಶೇ. 50ರಷ್ಟು ಬೆಂಗಳೂರಿಗರು ದೈಹಿಕವಾಗಿ ನಿಷ್ಕ್ರಿಯರಾಗಿದ್ದಾರೆ ಎಂದು ನಗರದ ಖಾಸಗಿ ಆಸ್ಪತ್ರೆಯೊಂದರ ಸಮೀಕ್ಷೆ ಹೇಳುತ್ತಿದೆ. ಹೀಗಂತ ಸಮೀಕ್ಷೆ ಹೇಳಿರುವುದಷ್ಟೇ ಅಲ್ಲ, ಈ ಕುರಿತು ವಿವಿಧ ಕ್ಷೇತ್ರಗಳ ವೃತ್ತಿಪರರನ್ನು ಕೇಳಿದಾಗ ಅವರಿಂದ ಬಂದದ್ದೂ ಇದೇ ಉತ್ತರ. ಕೆಲ ಸದ ಒತ್ತಡ, ಕಿಕ್ಕಿರಿದ ಟ್ರಾಫಿಕ್ ನಡುವೆ ಮನೆಯಿಂದ ಕಚೇರಿ, ಕಚೇರಿಯಿಂದ ಮನೆ ತಲುಪಲು ಹೆಚ್ಚು ಸಮಯ ತಗುಲುವುದು,
ಎಣ್ಣೆ ಪದಾರ್ಥ, ಫಾಸ್ಟ್‌ಫುಡ್, ಇನ್‌ಸ್ಟಂಟ್ ಆಹಾರ ಸೇವಿಸಿ ದೇಹ ಅಕ್ಷರಶಃ ಮೂಳೆ-ಮಾಂಸದ ಗೂಡಾಗಿರುವುದು ಇವೆಲ್ಲವೂ ಸೇರಿಕೊಂಡು ವ್ಯಕ್ತಿಯನ್ನು ನಿಷ್ಕ್ರಿಯನನ್ನಾಗಿಸಿವೆ. ಆಫೀಸ್‌ನಲ್ಲಿ ಕನಿಷ್ಠ 10 ಗಂಟೆ, ಟ್ರಾಫಿಕ್ ಮಧ್ಯೆ ಕನಿಷ್ಠ 4 ತಾಸು ಹೊರಟುಹೋದರೆ ಉಳಿದ ಸಮಯ ನಿದ್ದೆ, ನಿತ್ಯಕರ್ಮ, ಆಹಾರ ಸೇವನೆಗೂ ಸಾಲುವುದಿಲ್ಲ. ಕಡೆಗೆ ಮನೆ ಸದಸ್ಯರ ಜತೆ ಮಾತನಾಡಲೂ ಟೈಮಿರುವುದಿಲ್ಲ. ಹೀಗಿರುವಾಗ ವ್ಯಾಯಾಮಕ್ಕೆ ಎಲ್ಲಿಂದ ಟೈಮ್ ಮಾಡಿಕೊಳ್ಳೋದು? ಎಂಬುದು ಬಹುತೇಕರ ಪ್ರಶ್ನೆ.
ಜಡವಾದ ಜೀವನಶೈಲಿನಗರದ ಪೀಪಲ್ ಟ್ರೀ ಆಸ್ಪತ್ರೆ ನಡೆಸಿದ ಸಮೀಕ್ಷೆ ಕೆಲ ಆಘಾತಕಾರಿ ಅಂಶಗಳನ್ನು ತೆರೆದಿಟ್ಟಿದೆ. ನಗರದಾದ್ಯಂತ ಎಲ್ಲ ವಯೋಮಾನದವರನ್ನೂ ಒಳಗೊಂಡಂತೆ ನಡೆಸಿದ ಸಮೀಕ್ಷೆ ಪ್ರಕಾರ, ಬೆಂಗಳೂರಿನ ಅರ್ಧದಷ್ಟು ಜನ ದೈಹಿಕ ಚಟುವಟಿಕೆ ಮರೆತು ಜಡ ಜೀವನಶೈಲಿಗೆ ಅಳವಡಿಸಿಕೊಂಡಿದ್ದಾರೆ. ದೇಹವನ್ನು ದಂಡಿಸದೆ, ಜಡವಾಗಲು ಬಿಟ್ಟರೆ ಹಲವು ಕಾಯಿಲೆಗಳು ದೇಹ ಸೇರುತ್ತವೆ. ಜತೆಗೆ, ಅಕಾಲಿಕ ಮರಣಕ್ಕೂ ಈ ಜಡತ್ವ ಕಾರಣವಾಗಬಹುದು. ಅಲ್ಲದೆ ದೈಹಿಕ ನಿಷ್ಕ್ರಿಯತೆಯಿಂದ ವ್ಯಕ್ತಿಯ ಆಯಸ್ಸು ಕೂಡ ಕಡಿಮೆಯಾಗುತ್ತದೆ ಎಂದು ಸಮೀಕ್ಷೆ ಹೇಳಿದೆ. ಇತ್ತೀಚೆಗೆ ಆರೋಗ್ಯ ಮತ್ತು ಫಿಟ್‌ನೆಸ್ ಅನ್ನು ಜನ ಗಂಭೀರವಾಗಿ ಪರಿಗಣಿಸಿದ್ದಾರೆ. ಆದರೂ ಅರ್ಧ ಬೆಂಗಳೂರಿಗರು ದೈಹಿಕವಾಗಿ ನಿಷ್ಕ್ರಿಯರಾಗಿದ್ದಾರೆ. ಇಂಥ ದೈಹಿಕ ಜಡತ್ವ ಸಾಂಕ್ರಾಮಿಕವಲ್ಲದ ರೋಗಗಳು, ಹೃದಯ ಸಂಬಂಧಿ ಕಾಯಿಲೆ, ಟೈಪ್ 2 ಮಧುಮೇಹ, ಸ್ತನ ಮತ್ತು ಕರುಳಿನ ಕ್ಯಾನ್ಸರ್ ರೀತಿಯ ಅಪಾಯಕಾರಿ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ದೈಹಿಕ ಜಡತ್ವದ ಕಾರಣದಿಂದಾಗೆ 2008ರಲ್ಲಿ ಜಗತ್ತಿನಾದ್ಯಂತ 57 ಮಿಲಿಯನ್ ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಬೆಂಗಳೂರಿನಂತಹ ಬ್ಯುಸಿ ನಗರಗಳಲ್ಲಿ ದೈಹಿಕ ಚಟುವಟಿಕೆ ಕಡೆಗಣಿಸುವವರು ಸಾಕಷ್ಟು ಅನಾರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಪೀಪಲ್ ಟ್ರೀ ಆಸ್ಪತ್ರೆಯ ಫಿಸಿಯೋಥೆರಪಿಸ್ಟ್ ಡಾ.ಅರುಣ್ ರಾವಲ್. ವಿಶ್ವ ಆರೋಗ್ಯ ಸಂಸ್ಥೆ ಹೇಳುವುದೇನು?
ಜನ ವೃತ್ತಿಗೆ ನೀಡಿದಷ್ಟು ಆದ್ಯತೆಯನ್ನು ವ್ಯಾಯಾಮಕ್ಕೆ ನೀಡಿಲ್ಲ. ಮುಖ್ಯವಾಗಿ ಅವರ ಸುತ್ತ ದೈಹಿಕ ಚಟುವಟಿಕೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿಲ್ಲ. ಒತ್ತಡದ ವೃತ್ತಿ ಜೀವನ ಜನರನ್ನು ದೈಹಿಕವಾಗಿ ಜಡವಾಗಿಸಿದೆ. ಆಧುನಿಕ ಸಾರಿಗೆ ಸಾಧನಗಳು ಜನರನ್ನು ನಿಷ್ಕ್ರಿಯಗೊಳಿಸಿವೆ. ನಗರೀಕರಣದ ಪರಿಣಾಮದಿಂದಾಗಿ ಮಾಲಿನ್ಯ ಪ್ರಮಾಣ ಹೆಚ್ಚಿರುವ ಕಾರಣ, ಜನ ಮನೆಯಿಂದ ಹೊರಬಂದು ವ್ಯಾಯಾಮ ಮತ್ತಿತರ ದೈಹಿಕ ಶ್ರಮಗಳಲ್ಲಿ ತೊಡಗಿಸಿಕೊಳ್ಳಲು ಬಯಸುವುದಿಲ್ಲ. ಇದರೊಂದಿಗೆ ಅತಿಯಾದ ವಾಹನ ದಟ್ಟಣೆ, ಕಳಪೆ ಗುಣಮಟ್ಟದ ಗಾಳಿ, ತೀವ್ರ ಸ್ವರೂಪದ ಮಾಲಿನ್ಯ, ಪಾರ್ಕ್, ಫುಟ್‌ಪಾತ್, ಸಮರ್ಪಕ ಮೈದಾನಗಳು ಇಲ್ಲದಿರುವುದು ಜನರು ದೈಹಿಕವಾಗಿ ನಿಷ್ಕ್ರಿಯರಾಗಲು ಪ್ರಮುಖ ಕಾರಣವಾಗಿದೆ. ಜತೆಗೆ ಅಸುರಕ್ಷಿತ ವಾತಾವರಣವೂ ಜನರ ವ್ಯಾಯಾಮ ವಿಮುಖತೆಗೆ ಕಾರಣವಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಡುತ್ತದೆ. ಬೆಂಗ್ಳೂರಲ್ಲಿ ಈ ಕಾಯಿಲೆ ಕಾಮನ್ನು
ಬಹುತೇಕ ಬೆಂಗಳೂರಿಗರನ್ನು ಕಾಡುವುದು ಅಸ್ತಮಾ. ಜತೆಗೆ ಶೀತ, ನೆಗಡಿಯಂಥ ಅಲರ್ಜಿಗಳು. ಕುಳಿತಲ್ಲೇ ಹೆಚ್ಚು ಹೊತ್ತು ಕೂರುವುದರಿಂದ ಮಂಡಿ, ಕೀಲು ನೋವು, ಬೆನ್ನು ನೋವು ಕೂಡ ಹೆಚ್ಚು ಜನರನ್ನು ಕಾಡುತ್ತದೆ. ಸಮಯದ ಪರಿವಿಲ್ಲದೆ ಕೆಲಸ ಮಾಡುವುದರಿಂದ ಅಧಿಕ ರಕ್ತದೊತ್ತಡ ಬಹು ಮಂದಿಯನ್ನು ಬಾಧಿಸುತ್ತದೆ. ಇದರೊಂದಿಗೆ ಮಲಬದ್ಧತೆ, ತಲೆ ನೋವು, ಖನ್ನತೆಯಂತಹ ಸಮಸ್ಯೆಗಳು ಬೆಂಗಳೂರಿಗರಲ್ಲಿ ಕಾಮನ್ನಾಗಿವೆ. ಇತ್ತೀಚೆಗೆ ದೈಹಿಕ ಚಟುವಟಿಕೆ ಕಡಿಮೆಯಾಗಿರುವ ಕಾರಣ ಮಧುಮೇಹಿಗಳ ಪ್ರಮಾಣ ವೃದ್ಧಿಸಿದೆ. ಕಿಡ್ನಿ ಕಲ್ಲು, ಅಪೆಂಡಿಕ್ಸ್ ರೀತಿಯ ಸಮಸ್ಯೆಗಳು ವ್ಯಾಪಕವಾಗಿವೆ. ಆಹಾರ ಪದ್ಧತಿಯಲ್ಲಿ ಜಂಕ್ ಫುಡ್‌ಗೆ ಜಾಗ ಕೊಟ್ಟು ಹಸಿರು ಸೊಪ್ಪು, ಹಣ್ಣು, ತರಕಾರಿಗಳನ್ನು ತ್ಯಜಿಸಿರುವುದರಿಂದ ರಕ್ತ ಹೀನತೆ, ನರದೌರ್ಬಲ್ಯದಂತಹ ತೊಂದರೆಗಳು ಹೆಚ್ಚಾಗಿವೆ. ಹಾಗೇ ತುಂಬಾ ಜನರಿಗೆ ನಿದ್ರಾ ಹೀನತೆ ಸಮಸ್ಯೆಯಿದೆ. ಗರ್ಭಧಾರಣೆಗೂ ತೊಡಕಾಗಬಹುದು
“ಲೈಂಗಿಕ ಜೀವನಕ್ಕೆ ದೈಹಿಕ ಚಟುವಟಿಕೆ ಅತಿ ಮುಖ್ಯ. ದೇಹ ನಿಷ್ಕ್ರಿಯವಾದಾಗ ಬೊಜ್ಜು ಅಥವಾ ಸ್ಥೂಲಕಾಯ ಹೊಂದುವ ಅಪಾಯ ಹೆಚ್ಚಿರುತ್ತದೆ. ಮಹಿಳೆಯರಲ್ಲಿ ಗರ್ಭಧಾರಣೆ ಸಾಧ್ಯತೆಗಳನ್ನು ಕ್ಷೀಣಗೊಳಿಸುವ ಕೆಲ ಅಂಶಗಳಲ್ಲಿ ಬೊಜ್ಜು ದೇಹದ ಸಮಸ್ಯೆ ಪ್ರಮುಖವಾದದ್ದು. ಹೀಗಾಗಿ ಮಹಿಳೆಯರು ದೈಹಿಕ ಚಟುವಟಿಕೆ, ವ್ಯಾಯಾಮಕ್ಕೆ ಆದ್ಯತೆ ನೀಡಬೇಕು. ಗರ್ಭವತಿಯರು ಸೋಮಾರಿಗಳಾಗಿದ್ದರೆ ಹುಟ್ಟಲಿರುವ ಮಗುವಿನ ಮೇಲೆ ಅದರ ಪರಿಣಾಮ ಉಂಟಾಗುತ್ತದೆ. ಮಗು ಕೂಡ ಸೋಮಾರಿಯಾಗಬಹುದು. ಅನುವಂಶಿಕ ಸಮಸ್ಯೆಗಳು ಮಗುವಿಗೆ ಅಂಟಬಹುದು,’ ಎನ್ನುತ್ತಾರೆ ಸ್ತ್ರೀರೋಗ ತಜ್ಞರಾಗಿರುವ ಡಾ.ಶಿವಾನಂದ್ ಅವರು. “ದೇಹಕ್ಕೆ ವ್ಯಾಯಾಮ ಇಲ್ಲದಂತಾದಾಗ ಪಾಲಿಸಿಸ್ಟಿಕ್ ಓವರೈನ್ ಸಿಂಡ್ರಮ್ (ಪಿಸಿಒಎಸ್) ರೀತಿಯ ಸಮಸ್ಯೆ ತಲೆದೋರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಪಿಸಿಒಎಸ್ ತೊಂದರೆಗೆ ಒಳಗಾದವರಿಗೆ ಬಂಜೆತನ ಕಾಡುವ ಸಾಧ್ಯತೆ ಹೆಚ್ಚು. ಇನ್ನು ದಂಪತಿಯ ಸೆಕ್ಸ್ ಲೈಫ್ ಮೇಲೆ ದೈಹಿಕ ನಿಷ್ಕ್ರಿಯತೆ ಅಷ್ಟೇನೂ ಪರಿಣಾಮ ಬೀರದು. ಒಂದೊಮ್ಮೆ ಪತಿ-ಪತ್ನಿ ಇಬ್ಬರೂ ವೃತ್ತಿನಿರತರಾಗಿದ್ದರೆ ಅವರ ಸೆಕ್ಸ್ ಲೈಫ್ ಅಷ್ಟೇನೂ ಉತ್ತಮವಾಗಿರದು. ಏಕೆಂದರೆ ಇಬ್ಬರೂ ಹೆಚ್ಚು ಕಾಲ ಕಚೇರಿಯಲ್ಲೇ ಕಳೆಯುತ್ತಾರೆ. ಮನೆಗೆ ಬಂದಮೇಲೂ ಕಚೇರಿ ಕೆಲಸವಿರುತ್ತದೆ. ಹೀಗಾಗಿ ಅವರಿಗೆ ಪ್ರೀತಿಯ ಕ್ಷಣಗಳನ್ನು ಕಳೆಯಲು ಹೆಚ್ಚು ಸಮಯ ಸಿಗುವುದಿಲ್ಲ. ದೈಹಿಕ ನಿಷ್ಕ್ರಿಯತೆ ಕೆಲವರಲ್ಲಿ ಲೈಂಗಿಕ ನಿರಾಸಕ್ತಿಗೆ ಕಾರಣವಾಗಬಹುದು. ಆದರೆ ಅಂಥ ಪ್ರಕರಣಗಳು ವಿರಳ, ಎಂಬುದು ಡಾ. ಶಿವಾನಂದ್ ಅವರ ಅಭಿಪ್ರಾಯ. ಹಾರ್ಟ್ ಅಟ್ಯಾಕ್ ಗ್ಯಾರಂಟಿ!
ದೈಹಿಕ ಚಟುವಟಿಕೆಗೂ ಹೃದಯಕ್ಕೂ ತುಂಬಾ ಹತ್ತಿರದ ನಂಟು. ದೇಹ ನಿಷ್ಕ್ರಿಯವಾದರೆ ಹೃದಯ ಅಪಾಯದಲ್ಲಿದೆ ಅಂತಲೇ ಅರ್ಥ. ವ್ಯಾಯಾಮವಿಲ್ಲದ ದೇಹ ಅಧಿಕ ರಕ್ತದೊತ್ತಡ, ರಕ್ತ ಹೆಪ್ಪುಗಟ್ಟುವಿಕೆ, ಹೃದಯಾಘಾತ, ಪಾರ್ಶ್ವವಾಯು ರೀತಿಯ ಹಲವು ಹೃದಯ ಸಂಬಂಧಿ ತೊಂದರೆಗಳನ್ನು ಆಕರ್ಷಿಸುತ್ತದೆ. ಚಟುವಟಿಕೆ ಇಲ್ಲದ ವ್ಯಕ್ತಿಗಳಿಗೆ ಯಾವುದೇ ಸಂದರ್ಭದಲ್ಲೂ ಹೃದಯಾಘಾತ ಸಂಭವಿಸಬಹುದು. ನಗರಗಳಲ್ಲಿ ಇಂದು ಹೃದಯಾಘಾತ ಹಾಗೂ ಅಕಾಲಿಕ ಮರಣಗಳು ಹೆಚ್ಚಲು ದೈಹಿಕ ನಿಷ್ಕ್ರಿಯತೆಯೇ ಪ್ರಮುಖ ಕಾರಣ ಎಂಬುದು ಡಾ.ಕನಕ ಹೊನ್ನಾವರ ಅವರ ಅಭಿಪ್ರಾಯ. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೃದಯದ ಆರೋಗ್ಯಕ್ಕಾಗಿ ದೇಹಕ್ಕೆ ವ್ಯಾಯಾಮ ಬೇಕೇಬೇಕು ಎಂದು ಹೇಳಿದೆ. ಇನ್ನೊಂದೆಡೆ ವ್ಯಾಯಾಮರಹಿತ ಜೀವನಶೈಲಿ ಧೂಮಪಾನದಷ್ಟೇ ಅಪಾಯಕಾರಿ ಎಂದು ಹೃದಯ ತಜ್ಞರು ಎಚ್ಚರಿಸುತ್ತಾರೆ. ಎರಡು ಕಾಲು ಬೇಡ, ಒಂದು ಬೆರಳಿದ್ದರೆ ಸಾಕು
“ಈಗಿನ ಜಗತ್ತಿನಲ್ಲಿ ನೆಲೆ ನಿಲ್ಲಲು ಎರಡು ಕಾಲು ಬೇಡ, ಒಂದು ಬೆರಳಿದ್ದರೆ ಸಾಕು,’ ಎನ್ನುತ್ತಾರೆ ಖ್ಯಾತ ಮನೋವಿಜ್ಞಾನಿ ಡಾ. ಅ.ಶ್ರೀಧರ. “ಎಲ್ಲವೂ ಕಂಪ್ಯೂಟರೈಸ್ ಆಗಿದ್ದು, ಜನ ತಾವೂ ಕಂಪ್ಯೂಟರ್‌ನ ಒಂದು ಭಾಗವೆಂಬಂತೆ ಅದಕ್ಕೆ ಅಂಟಿಕೊಂಡಿರುತ್ತಾರೆ. ಹಿಂದಾದರೆ ದಿನಸಿ ಸಾಮಗ್ರಿ, ತರಕಾರಿ ತರುವ ನೆಪದಲ್ಲಾದರೂ ಜನ ಮನೆಯಿಂದ ಹೊರ ಹೋಗುತ್ತಿದ್ದರು. ಸ್ವಲ್ಪ ನಡಿಗೆಯಾಗುತ್ತಿತ್ತು. ಆದರೆ ಈಗ ಎಲ್ಲವೂ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್ ಬಳಸಿ ಕುಳಿತ ಸ್ಥಳದಿಂದಲೇ ತಮಗೆ ಬೇಕಾದ್ದನ್ನೆಲ್ಲ ತರಿಸಿಕೊಳ್ಳುವುದು ರೂಢಿಯಾಗಿದೆ. ಹೀಗಾಗಿ ದೇಹಕ್ಕೆ ಎಳ್ಳಷ್ಟೂ ವ್ಯಾಯಾಮ ಸಿಗುತ್ತಿಲ್ಲ. ಕಚೇರಿಯಲ್ಲಿ ಕಂಪ್ಯೂಟರ್ ಮುಂಧೆ, ಮನೆಯಲ್ಲಿ ಟಿವಿ ಮುಂದೆ ಕೂರುವುದರಿಂದ ದೇಹದ ಅಂಗಾಂಗಗಳಿಗೆ ಕೆಲಸವೇ ಇಲ್ಲದಂತಾಗಿದೆ.’ “ದೇಹ ಆರೋಗ್ಯದಿಂದಿದ್ದರೆ ಮನಸು ಕೂಡ ಆರೋಗ್ಯದಿಂದಿರುತ್ತದೆ. ಆದರೆ ದೇಹವೇ ನಿಷ್ಕ್ರಿಯವಾದಾಗ ಮನಸೂ ಸಪ್ಪಗಾಗುತ್ತದೆ. ಸದಾ ಮೊಬೈಲ್ ನೋಡುವವರು ಕತ್ತು ಸೊಟ್ಟ ಮಾಡಿಕೊಂಡಿರುತ್ತಾರೆ. ಕೀ ಬೋರ್ಡ್ ಇಲ್ಲದಿದ್ದರೂ ಬೆರಳು ಆಡುತ್ತಿರುತ್ತವೆ. ದೇಹ ನಿಷ್ಕ್ರಿಯವಾದಾಗ ಮನಸ್ಸು ಖನ್ನವಾಗಿ ವ್ಯಕ್ತಿ, ಕುಡಿತ, ಮಾದಕ ದ್ರವ್ಯಗಳ ಮೊರೆ ಹೋಗುತ್ತಾನೆ. ಕೋಪ, ತಾಳ್ಮೆ ಕಳೆದುಕೊಳ್ಳುವಿಕೆ ಸೇರಿದಂತೆ ಹಲವು ಮಾನಸಿಕ ಸಮಸ್ಯೆಗಳು ತಲೆದೋರುತ್ತವೆ,’ ಎಂಬುದು ಡಾ. ಶ್ರೀಧರ ಅವರ ಅಭಿಪ್ರಾಯ. -ಶೇ.1.73: ವಾರದ ಒಂದು ದಿನ ದೈಹಿಕ ಚಟುವಟಿಕೆ ಹೊಂದಿರುವವರು -ಶೇ.5.56: ವಾರದ ಎರಡು ದಿನ ಮಾತ್ರ ದೈಹಿಕ ಶ್ರಮ ವಹಿಸುವವರು -ಶೇ.7.71: ವಾರದ ಮೂರು ದಿನ ದೈಹಿಕವಾಗಿ ಸಕ್ರಿಯರಾಗಿರುವವರು -ಶೇ.8.43: ವಾರದಲ್ಲಿ ನಾಲ್ಕು ದಿನಗಳ ಕಾಲ ವಕೌìಟ್ ಮಾಡುವವರು -ಶೇ.8.42: ಮಂದಿ ವಾರಕ್ಕೆ ಐದು ದಿನ ದೇಹಕ್ಕೆ ವ್ಯಾಯಾಮ ನೀಡುತ್ತಾರೆ
-ಶೇ.10.59: ಮಂದಿ ವಾರದ ಆರು ದಿನ ರನ್ನಿಂಗ್, ಜಾಗಿಂಗ್ ಮಾಡುವವರು -ಶೇ.1.97: ವಾರದ ಎಲ್ಲ ದಿನವೂ ದೈಹಿಕ ಚಟುವಟಿಕೆಗೆ ಆದ್ಯತೆ ನೀಡುವವರು ವಯಸ್ಸಿಗೆ ತಕ್ಕಂತೆ ಇರಬೇಕಾದ ಕನಿಷ್ಠ ದೈಹಿಕ ಚಟುವಟಿಕೆ
18ರಿಂದ 65 ವಯಸ್ಸಿನ ವಯಸ್ಕರು: ದಿನಕ್ಕೆ 30 ನಿಮಿಷದಂತೆ, ವಾರದಲ್ಲಿ 5 ದಿನ ಮಿತ ತೀವ್ರತೆ ಅಥವಾ ಹೆಚ್ಚು ಒತ್ತಡವಿಲ್ಲದ ವ್ಯಾಯಾಮ, ಇಲ್ಲವೇ ವಾರದ 3 ದಿನ, ದಿನಕ್ಕೆ 20 ನಿಮಿಷ ಕೊಂಚ ವೇಗದ, ಸ್ವಲ್ಪ ಒತ್ತಡದ ದೈಹಿಕ ಪರಿಶ್ರಮ -ವಾರಕ್ಕೆ ಕನಿಷ್ಠ ಎರಡು ದಿನ ಸ್ನಾಯುಗಳನ್ನು ಬಲಪಡಿಸುವ 8ರಿಂದ 10 ವಿಧದ ವ್ಯಾಯಾಮ ಮಾಡಿ. ಒಂದೊಂದು ವ್ಯಾಯಾಮವನ್ನೂ 10-12 ಬಾರಿ ರಿಪೀಟ್ ಮಾಡಿ. -ವಾರದ ಎಲ್ಲ ದಿನ, ದಿನಕ್ಕೆ ಕನಿಷ್ಠ 10ರಿಂದ 15 ನಿಮಿಷ ಏರೋಬಿಕ್ಸ್ ಮಾಡುವುದು ಅತ್ಯುತ್ತಮ ಆಯ್ಕೆ 65 ವರ್ಷ ಮೇಲ್ಪಟ್ಟ ವೃದ್ಧರು: ಈ ವಯೋಮಾನದಲ್ಲಿ ದೇಹ ಚುರುಕಾಗಿದ್ದಷ್ಟೂ ಒಳ್ಳೆಯದು. ಪ್ರತಿದಿನ ಬೆಳಗ್ಗೆ ಕನಿಷ್ಠ 20 ನಿಮಿಷ ವಾಕ್, ಹುಮ್ಮಸ್ಸಿದ್ದರೆ, ದೇಹ ಬೆಂಬಲಿಸಿದರೆ ವೇಗವಾದ ನಡಿಗೆ -ವಾರದಲ್ಲಿ 5 ದಿನ ಲಘು ವ್ಯಾಯಾಮ, ಸಾಧ್ಯವಾದರೆ ವಾರಕ್ಕೆ ಎರಡು ದಿನ ಕೊಂಚ ಹೆಚ್ಚು ದೈಹಿಕ ಶ್ರಮ ಬಯಸುವ ವ್ಯಾಯಾಮಗಳನ್ನೂ ಪ್ರಯತ್ನಿಸಬಹುದು -ದೇಹವನ್ನು ಆದಷ್ಟು ಸ್ಟ್ರೆಚ್ ಮಾಡಿ, ಫ್ಲೆಕ್ಸಿಬಲಿಟಿ ಕಾಪಾಡಿಕೊಳ್ಳಿ. ಮುಖ್ಯವಾಗಿ ಬ್ಯಾಲೆನ್ಸ್ ಎಕ್ಸಸೈಸ್‌ಗಳತ್ತ ಗಮನಹರಿಸಿ
5ರಿಂದ 17 ವರ್ಷದ ಮಕ್ಕಳು: ಈ ವಯಸ್ಸಿನಲ್ಲಿ ದೇಹ ಹೆಚ್ಚು ಆಕ್ಟಿವ್ ಆಗಿರಬೇಕು. ಹೀಗಾಗಿ ವಾರದ ಏಳೂ ದಿನ, ದಿನವೊಂದಕ್ಕೆ ಕನಿಷ್ಠ 60 ನಿಮಿಷಗಳ ಕಾಲ ವ್ಯಾಯಾಮ ಮಾಡಲೇಬೇಕು -ಲಘು ಹಾಗೂ ಶ್ರಮ ಬಯಸುವ ವ್ಯಾಯಾಮಗಳೆರಡೂ ಇದ್ದರೆ ಉತ್ತಮ. ಹೆಚ್ಚು ಸಮಯ ದೈಹಿಕ ಶ್ರಮ ವಹಿಸಿದಷ್ಟೂ ಆರೋಗ್ಯದ ಲಾಭಗಳು ಹೆಚ್ಚು -ಈ ನಡುವೆ ವಾರದಲ್ಲಿ ಮೂರು ದಿನ ಸ್ನಾಯುಗಳು ಮತ್ತು ಮೂಳೆಗಳನ್ನು ಗಟ್ಟಿಯಾಗಿಸಲು ನೆರವಾಗುವ ವ್ಯಾಯಾಮಗಳಿಗೆ ಪ್ರಾಶಸ್ತ ನೀತಿ. ಸೈಕ್ಲಿಂಗ್ ಮಾಡುವುದು ಉತ್ತಮ ಆಯ್ಕೆ 5 ವರ್ಷದೊಳಗಿನ ಮಕ್ಕಳು: -ಎಲ್ಲರಿಗಿಂತ ಹೆಚ್ಚು ದೈಹಿಕ ಚಟುವಟಿಕೆ ಅಗತ್ಯವಿರುವುದು ಮಕ್ಕಳಿಗೆ. ಮಕ್ಕಳು ದಿನವೊಂದಕ್ಕೆ ಕನಿಷ್ಠ 180 ನಿಮಿಷಗಳ ಕಾಲ ದೈಹಿಕವಾಗಿ ಚುರುಕಾಗಿರಬೇಕು -ನಡೆಯಲು ಕಲಿತ ಮಕ್ಕಳು ಸಾಮಾನ್ಯವಾಗಿ ಇಷ್ಟು ಅವಧಿ ಚುರುಕಾಗಿರುತ್ತಾರೆ. ಒಂದೊಮ್ಮೆ ಮಗು ಡಲ್ಲಾಗಿದ್ದರೆ ಹೆಚ್ಚು ನಡೆದಾಡಲು ಪ್ರೇರೇಪಿಸಿ
-ಹೆಚ್ಚು ಆಕ್ಟಿವ್ ಇದ್ದರೆ, ನಡೆದರೆ ಮಕ್ಕಳ ಅಂಗಾಂಗಗಳು ನೋವಾಗುವುದಿಲ್ಲ, ಬದಲಿಗೆ ಬಲ ಹೆಚ್ಚುತ್ತದೆ ಬೆಂಗಳೂರಿನ ಜನಸಂಖ್ಯೆ ಮಿತಿ ಮೀರಿದೆ. ಜನರಿಗೆ ಉಸಿರಾಡಲು ಶುದ್ಧ ಗಾಳಿಯಿಲ್ಲ. ಸುತ್ತಾಡಲು ಪ್ರಶಸ್ತ ಸ್ಥಳವಿಲ್ಲ. ಎಲ್ಲ ಕೆಲಸ, ಹಣದ ಹಿಂದೆ ಬಿದ್ದಿದ್ದು, ಟಾರ್ಗೆಟ್ ತಲುಪುವ ನಿಟ್ಟಿನಲ್ಲಿ ನಿಷ್ಕಿ$›ಯ ಓಟ ಮುಂದುವರಿದಿದೆ. ಇದೇ ಸಮಯ ನೋಡಿಕೊಂಡು ಅನಾರೋಗ್ಯ ಅವರನ್ನು ಟಾರ್ಗೆಟ್ ಮಾಡಿದೆ. ಐಟಿ-ಬಿಟಿ ವೃತ್ತಿಪರರಲ್ಲಿ ಶೇ.90 ಮಂದಿ ಬೇಕರಿ ಪದಾರ್ಥ, ಜಂಕ್ ಫುಡ್ ಪ್ರಿಯರಾಗಿದ್ದು, ಇಂಥವರ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿದೆ. ಕೊಲೆಸ್ಟ್ರಾಲ್ ಹೆಚ್ಚಾದಾಗ ಸ್ವಾಭಾವಿಕವಾಗಿ ದೇಹ ನಿಷ್ಕಿ$›ಯವಾಗುತ್ತದೆ. ಆಲಸ್ಯ ಮೈಗಂಟಿಕೊಳ್ಳುತ್ತದೆ.
-ಡಾ.ಜಿ.ಎಂ.ಕಂಬಾರ, ವೈದ್ಯರು ನಾನು ಜರ್ಮನಿಯಲ್ಲಿದ್ದಾಗ ಕಂಡಂತೆ ಅಲ್ಲಿನ ಜನ ಯಾವಾಗ ಫ್ರೀ ಇರ್ತಾರೋ ಆಗ ವಕೌìಟ್ ಮಾಡ್ತಾರೆ. ಆದರೆ ನಮ್ಮಲ್ಲಿ ಹಾಗಲ್ಲ. ಬೆಳಗ್ಗೆಯೇ ಜಿಮ್‌ಗೆ ಹೋಗಬೇಕು ಅನ್ನೋ ಮನೋಭಾವವಿದೆ. ಜತೆಗೆ ಇಲ್ಲಿನ ಕೆಲಸದ ತಲೆಬಿಸಿ ನಡುವೆ ವ್ಯಾಯಾಮ ಮಾಡಲು ಮನಸು ಒಪ್ಪುವುದಿಲ್ಲ.
-ಅಜಿತ್ ಎಸ್. ಕಡೂರ್, ಐಟಿ ಉದ್ಯೋಗಿ ಸಂಜೆ ಆಫೀಸ್‌ನಿಂದ ಬಂದ್ಮೇಲೆ, ಮ್ಯಾನೇಜರಿಂದ ಕಂಪ್ಲೇಂಟ್ ಬರದಿದ್ರೆ ಸಾಕು ಅನ್ನೋ ಪರಿಸ್ಥಿತೀಲಿ ಸರ್ಯಾಗಿ ಊಟ, ನಿದ್ದೆ ಮಾಡೋಕಾಗೋಲ್ಲ. ಕೆಲವೊಮ್ಮೆ ಮನೆಯವ್ರ ಜತೆ ಕಳೆಯೋಕೂ ಟೈಮಿರೋಲ್ಲ. ಇಂಥ ಸಾಫ್ಟ್ವೇರ್ ಬಾಳಲ್ಲಿ ವ್ಯಾಯಾಮಕ್ಕೆ ಪ್ರಿಯಾರಿಟಿ ಕೊಡೋದು ಕಷ್ಟಾನೇ.
-ಸುನೀಲ್ ಕಡೂರ್ ರಾಜು, ಸಾಫ್ಟ್ವೇರ್ ಉದ್ಯೋಗಿ ಮನೆಯಲ್ಲಿ ಹೆಂಡತಿ, ಮಕ್ಕಳು ಸೇರಿ ಎಲ್ಲರನ್ನೂ ಚನ್ನಾಗಿ ನೋಡಿಕೊಳ್ಳಬೇಕಂದ್ರೆ ಚನ್ನಾಗಿ ದುಡಿಯಬೇಕು. ಬೆಳಗ್ಗೆ ಆಟೋ ಸ್ಟಾರ್ಟ್ ಮಾಡಿಕೊಂಡು ಹೊರಟರೆ ರಾತ್ರಿ 10 ಗಂಟೆವರೆಗೂ ಬಾಡಿಗೆ ಹಿಡಿದು ದುಡಿಯುವುದೇ ಆಗುತ್ತದೆ. ದುಡಿಮೆ ಭರದಲ್ಲಿ ವ್ಯಾಯಾಮಕ್ಕೆ ಟೈಮ್ ಕೊಡೋಕೆ ಆಗೋದೇ ಇಲ್ಲ.
-ಎಸ್.ಪುಟ್ಟರಾವ್, ಆಟೋ ಚಾಲಕ ದೈಹಿಕ ಚಟುವಟಿಕೆಗಳಿಗೆ ಸಮಯವಿಲ್ಲ ಎಂದೇನಿಲ್ಲ. ಆದರೆ ಬೆಳಗ್ಗೆ ಅಷ್ಟೊತ್ತಿಗೇ ಎದ್ದು ವಾಕಿಂಗ್, ವ್ಯಾಯಾಮ ಮಾಡಬೇಕಂದ್ರೆ ಸ್ವಲ್ಪ ಕಷ್ಟ. ಕೆಲವೊಮ್ಮೆ ವ್ಯಾಯಾಮ ಮಾಡಲೇಬೇಕಂತ ಬೆಳಗ್ಗೆ 5 ಗಂಟೆಗೆ ಎದ್ದೇಳುತ್ತೇವೆ. ಆದರೆ ದೆಲ್ಲ ಎರಡು ದಿನ ಮಾತ್ರ. ಮೂರನೆ ದಿನ ಹಾಸಿಗೆ ಬಿಟ್ಟು ಏಳಲಾಗುವುದಿಲ್ಲ.
-ಪ್ರಸನ್ನ ಹೊಲ್ತಿಹಾಳ್, ಜಾಹಿರಾತು ಏಜೆನ್ಸಿ ಉದ್ಯೋಗಿ ಉದ್ಯೋಗ ಪ್ರಿಂಟಿಂಗ್ ಉದ್ಯಮದಲ್ಲಿ. ದೈಹಿಕ ಚಟುವಟಿಕೆಗೇನೂ ಕೊರತೆಯಿಲ್ಲ. ಪ್ರತಿವಾರ ಸಹೋದ್ಯೋಗಿಗಳ ಜತೆ ಕ್ರಿಕೆಟ್ ಆಡ್ತೇನೆ. ಕೂತಲ್ಲೇ ಹೆಚ್ಚು ಹೊತ್ತು ಕುಳಿತುಕೊಳ್ಳುವುದಿಲ್ಲ. ಬದಲಿಗೆ ಕೆಲಸದ ನಿಮಿತ್ತ ಅತ್ತಿತ್ತ ಓಡಾಡುತ್ತಿರುತ್ತೇನೆ. ಹೀಗಾಗಿ ವ್ಯಾಯಾಮ ಮಾಡಲೇಬೇಕೆಂಬ ಅನಿವಾರ್ಯತೆಯಿಲ್ಲ.
-ನವೀನ್, ಬಿಡದಿ ನಿವಾಸಿ ದಿನವಿಡೀ ಕಾರು ಚಾಲನೆ ಮಾಡಿ ಆಯಾಸವಾಗಿರುತ್ತದೆ. ಕೆಲವೊಮ್ಮೆ ಸಿಟಿ ಬಿಟ್ಟು ಹೊರಗೆ ಬಾಡಿಗೆಗೆ ಹೋದರೆ ರಾತ್ರಿಯಿಡೀ ಕಾರು ಓಡಿಸಬೇಕು. ಗ್ರಾಹಕರು ಯಾವುದಾದರೂ ಸ್ಥಳ ವೀಕ್ಷಣೇಗೆ ಹೋದಾಗ ಕಾರಲ್ಲೇ ಸ್ವಲ್ಪ ಹೊತ್ತು ನಿದ್ರಿಸಿದರೆ ಅದೇ ಹೆಚ್ಚು. ಹೀಗಿರುವಾಗ ದೈಹಿಕ ಚಟುವಟಿಕೆಗೆ ಸಮಯ ಎಲ್ಲಿಂದ?
-ಅರುಣ್, ಕಾರು ಮಾಲೀಕ-ಚಾಲಕ * ಬಸವರಾಜ್ ಕೆ.ಜಿ