Advertisement

ಇಂಡಿ: ಗ್ರಾಮಗಳಲ್ಲಿ ಉಲ್ಬಣಿಸಿದ ನೀರಿನ ಸಮಸ್ಯೆ

03:43 PM Apr 28, 2022 | Shwetha M |

ಇಂಡಿ: ಬೇಸಿಗೆ ಆರಂಭವಾಗುತ್ತಿದಂತೆ ತಾಲೂಕಿನಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದ್ದು. ಇನ್ನೂ ಬಹಳಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದ್ದು ಜನತೆ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಮನವಿ ಮಾಡುತ್ತಿದ್ದಾರೆ.

Advertisement

ತಾಲೂಕಿನ 5 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯ ಬರುವ 9 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ತಲೆದೋರಿದ್ದು ಕೆಲವೇ ಗ್ರಾಮಗಳಿಗೆ ಸ್ಥಳೀಯ ಪಂಚಾಯತ್‌ನವರು ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದ್ದಾರೆ. ಈ ಬಾರಿ ಮುಂಗಾರು-ಹಿಂಗಾರು ಕೈ ಕೊಟ್ಟ ಪರಿಣಾಮ ಕೆರೆ-ಕಟ್ಟೆ, ಬಾವಿ, ಸಣ್ಣ ಪುಟ್ಟ ಡ್ಯಾಂಗಳು ಸಹ ಭರ್ತಿಯಾಗಿಲ್ಲ. ಹೀಗಾಗಿ ಕುಡಿಯುವ ನೀರಿಗಾಗಿ ಪರದಾಟ ಆರಂಭವಾಗಿದೆ. ಸಣ್ಣ ಪುಟ್ಟ ಕೆರೆಗಳನ್ನು ನಿರ್ಮಿಸಿ ಕಾಲುವೆಗಳಿಗೆ ಬಿಟ್ಟ ನೀರನ್ನು ಹಿಡಿದಿಟ್ಟು ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕಿದೆ.

ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಿದರೆ ಟ್ಯಾಂಕರ್‌ಗಳ ಬಾಡಿಗೆಯೇ ಲಕ್ಷಾಂತರ ರೂ. ಆಗುತ್ತದೆ. ಇದನ್ನು ಅನವಶ್ಯಕವಾಗಿ ಖರ್ಚು ಮಾಡಬೇಕಾಗುತ್ತದೆ. ಆದರೆ, ಅದೇ ನಿಂತು ಹೋಗಿರುವ ಮತ್ತು ಪ್ರಗತಿಯಲ್ಲಿ ಇರುವ ಕಾಮಗಾರಿಗಳನ್ನು ಬೇಗ ಮುಗಿಸಿದರೆ ನೀರಿನ ಹಾಹಾಕಾರದಿಂದ ಮುಕ್ತಿ ಹೊಂದಬಹುದು. ಜತೆಗೆ ತಾಪಂಗೆ ಟ್ಯಾಂಕರ್‌ಗಳಿಗೆ ನೀಡುವ ಬಾಡಿಗೆ ಹಣ ಕೂಡ ಉಳಿಯಲಿದೆ.

3 ವರ್ಷದ ಹಿಂದೆಯೂ ಇದೇ ಸಮಸ್ಯೆ

2019ರ ಸಾಲಿನಲ್ಲಿ ಬೇಸಿಗೆಯಲ್ಲಿ 48 ಹಳ್ಳಿಗಳಿಗೆ 237 ಟ್ಯಾಂಕರ್‌ ಮೂಲಕ 701 ಟ್ರಿಪ್‌ ಪ್ರತಿದಿನ ನೀರು ಸರಬರಾಜು ಮಡಲಾಗಿತ್ತು. ಅಲ್ಲದೆ 2020ರ ಸಾಲಿನಲ್ಲಿ 12 ಹಳ್ಳಿಗಳಿಗೆ 41 ಟ್ಯಾಂಕರ್‌ 103 ಟ್ರಿಪ್‌ ಪ್ರತಿ ದಿನ ನೀರು ಪೂರೈಸಲಾಗಿತ್ತು. ಆದರೆ 2021ರಲ್ಲಿ ಉತ್ತಮ ಹಿಂಗಾರು-ಮುಂಗಾರು ಮಳೆಯಾದ ಕಾರಣ ಯಾವುದೇ ಹಳ್ಳಿಗಳಿಗೆ ನೀರಿನ ಟ್ಯಾಂಕರಗಳು ಆರಂಭಿಸಿಲ್ಲ.

Advertisement

ಪ್ರಸಕ್ತ ವರ್ಷವೂ ನೀರಿನ ಸಮಸ್ಯೆ ಉಂಟಾಗಿದೆ. ಈ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಉದ್ಬವಿಸುವುದು ಸಾಮಾನ್ಯವಾಗಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಟ್ಯಾಂಕರ್‌ಗಳ ಮೊರೆ ಹೋಗಲಾಗಿದೆ. ಬೇಸಿಗೆ ಸಮಯದಲ್ಲಿ ಸಮಸ್ಯೆ ಆಗಬಹುದಾದ ಹಳ್ಳಿಗಳನ್ನು ಗುರುತಿಸಲಾಗಿದ್ದು. ಒಟ್ಟು 9 ಹಳ್ಳಿಗಳು 84 ಜನವಸತಿ ಪ್ರದೇಶಗಳ ಸಮಸ್ಯಾತ್ಮಕ ಎಂದು ಅಂದಾಜಿಸಲಾಗಿದೆ. ಈಗಿನ ಪರಿಸ್ಥಿತಿ ನೋಡಿದರೆ ಇನ್ನಷ್ಟು ಸಂಖ್ಯೆ ಹೆಚ್ಚಳ ಆಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂಬ ಮಾತು ಅಧಿಕಾರಿಗಳ ವಲಯದಿಂದ ಕೇಳಿ ಬರುತ್ತಿದೆ.

ಚೋರಗಿ ಗ್ರಾಮದ ಮೇಡೆದಾರ ಜನವಸತಿ ಪ್ರದೇಶಗಳಲ್ಲಿ ನೀರಿಗಾಗಿ ಹಾಹಾಕಾರ ಶುರುವಾದ ಪರಿಣಾಮ ಜಿಲ್ಲಾ ಅಧಿಕಾರಿಗಳು ಹಾಗೂ ಜಿಪಂ ಅಧಿಕಾರಿಗಳು ಗ್ರಾಮಸ್ಥರ ಕುಡಿಯುವ ನೀರಿನ ಪರಿಸ್ಥಿತಿ ನೋಡಿದ ಅಧಿಕಾರಿಗಳು ಸ್ಥಳಿಯ ಪಿಡಿಒಗಳ ಮುಖಾಂತರ ಜನವಸತಿ ಪ್ರದೇಶಗಳಿಗೆ ಮತ್ತು ಗ್ರಾಮಗಳಿಗೆ‌ ಕುಡಿಯುವ ನೀರಿನ ಟ್ಯಾಂಕರ್‌ ಆರಂಭಿಸಲು ಸೂಚಿಸಿದ್ದರೂ ಸಹಿತ ಇದುವರೆಗೂ ಟ್ಯಾಂಕರ್‌ ಸೇವೆ ಆರಂಭಿಸಿಲ್ಲ.

ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಮುಂಜಾನೆ ಒಂದು ತಾಸು, ಸಂಜೆ ಒಂದು ತಾಸಗಟ್ಟಲೆ ನಿಂತು ನೀರು ತುಂಬಿಕೊಳ್ಳಬೇಕು. ಇಲ್ಲಾಂದರೆ ನೀರೆ ಸಿಗುವುದಿಲ್ಲ. ಕೂಲಿ ನಾಲಿ ಮಾಡಿ ಬದಕುತ್ತಿರುವ ನಾವುಗಳು ಬರೆ ನೀರಿಗಾಗೆ ಕಾಲಹರಣ ಮಾಡುವಂತಹ ಪ್ರಸಂಗ ಬಂದಿದೆ. -ಮಲಕವ್ವ ಮೇಡೆಗಾರ ಚೋರಗಿ ಗ್ರಾಮಸ್ಥೆ

ಚವಡಿಹಾಳ, ಚೋರಗಿ ಗ್ರಾಮ ಹಾಗೂ ಜನವಸತಿ ಪ್ರದೇಶಗಳಲ್ಲಿ ಟ್ಯಾಂಕರ್‌ಗಳ ಮುಲಕ ನೀರು ಸರಬರಾಜು ಮಾಡಲಾಗುತ್ತದೆ. ನೀರಿನ ಸಮಸ್ಯೆ ಇರುವ ಜನವಸತಿ ಪ್ರದೇಶಗಳಿಗೆ ತಕ್ಷಣವೇ ನೀರು ಪೂರೈಕೆ ಮಾಡಲಾಗುವುದು. ಯಾವುದೇ ರೀತಿಯಿಂದ ವಿಳಂಬ ಧೋರಣೆ ಅನುಸರಿಸುವುದಿಲ್ಲ. -ಸಿ.ಜಿ. ಪಾರೆ, ಪಿಡಿಒ ಚವಡಿಹಾಳ ಗ್ರಾಪಂ

Advertisement

Udayavani is now on Telegram. Click here to join our channel and stay updated with the latest news.

Next