ಚೆನ್ನೈ: ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ದ ಏಕೈಕ ಟೆಸ್ಟ್ ಪಂದ್ಯದಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಿಗಿ ಮಾಡಿರುವ ಭಾರತ ತಂಡ ಸುಲಭ ಗೆಲುವಿನತ್ತ ಸಾಗಿದೆ. ಸ್ಪಿನ್ನರ್ ಸ್ನೇಹ್ ರಾಣಾ ಬೌಲಿಂಗ್ ದಾಳಿಗೆ ಬೆಚ್ಚಿದ ದಕ್ಷಿಣ ಆಫ್ರಿಕಾ ದಿಢೀರ್ ಕುಸಿತ ಕಂಡಿದೆ.
ಎರಡನೇ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿದ್ದ ಆಫ್ರಿಕಾ ಇಂದು ಕೇವಲ 30 ರನ್ ಒಟ್ಟುಗೂಡಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಭರ್ಜರಿ ದಾಳಿ ಸಂಘಟಿಸಿದ ಸ್ನೇಹ್ ರಾಣಾ ಎಂಟು ವಿಕೆಟ್ ಕಿತ್ತರು. ದಕ್ಷಿಣ ಆಫ್ರಿಕಾ ಫಾಲೋ ಆನ್ ಗೆ ಒಳಗಾಗಿದೆ.
69 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಮರಿಜಾನೆ ಕಪ್ಪ್ ಇಂದು 74 ರನ್ ಗಳಿಸಿದ್ದ ವೇಳೆ ವಿಕೆಟ್ ಒಪ್ಪಿಸಿದರು. ಕ್ಲರ್ಕ್ 39 ರನ್ ಗಳಿಸಿದರು. ಇಂದು ಬೇರೆ ಯಾವ ಬ್ಯಾಟರ್ ಕೂಡಾ ಕ್ರೀಸ್ ನಲ್ಲಿ ನಿಲ್ಲುವ ಧೈರ್ಯ ತೋರಲಿಲ್ಲ. ದ.ಆಫ್ರಿಕಾ ತಂಡವು 266 ರನ್ ಗಳಿಗೆ ಆಲೌಟಾಯಿತು.
ಭಾರತದ ಪರ ಸ್ನೇಹ್ ರಾಣಾ ಎಂಟು ವಿಕೆಟ್ ಪಡೆದರು. ಎರಡು ವಿಕೆಟ್ ದೀಪ್ತಿ ಶರ್ಮಾ ಪಾಲಾಯಿತು.
ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಆರು ವಿಕೆಟ್ ನಷ್ಟಕ್ಕೆ 603 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ದಕ್ಷಿಣ ಆಫ್ರಿಕಾ 266 ರನ್ ಗೆ ಆಲೌಟಾಗಿ 337 ರನ್ ಹಿನ್ನಡೆ ಅನುಭವಿಸಿದೆ. ಭಾರತವು ಫಾಲೋ ಆನ್ ಹೇರಿದ್ದು, ದ.ಆಫ್ರಿಕಾ ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಆರಂಭಿಸಿದೆ.