ಪುಣೆ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯವು ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ (MCA Stadium Pune) ಆರಂಭವಾಗಿದೆ. ಟಾಸ್ ಗೆದ್ದ ಕಿವೀಸ್ ನಾಯಕ ಟಾಮ್ ಲ್ಯಾಥಂ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಈ ಪಂದ್ಯಕ್ಕೆ ಭಾರತವು ಮೂರು ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿದೆ. ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಆಡಿದ್ದ ಕೆಎಲ್ ರಾಹುಲ್, ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋಲನುಭವಿಸಿದ ಕಾರಣದಿಂದ ತಂಡದಲ್ಲಿ ಬದಲಾವಣೆ ನಿರೀಕ್ಷಿಸಲಾಗಿತ್ತು.
ಇಂದಿನ ಪಂದ್ಯಕ್ಕೆ ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ಆಕಾಶ್ ದೀಪ್ ಅವರನ್ನು ಸೇರ್ಪಡೆಗೊಳಿಸಲಾಗಿದೆ. ಗಿಲ್ ಅವರು ಗಾಯಗೊಂಡಿದ್ದ ಕಾರಣ ಬೆಂಗಳೂರು ಪಂದ್ಯ ತಪ್ಪಿಸಿಕೊಂಡಿದ್ದರು. ಅಲ್ಲಿ ಗಿಲ್ ಬದಲಿಗೆ ಸರ್ಫರಾಜ್ ಖಾನ್ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಸರ್ಫರಾಜ್ ಭರ್ಜರಿ ಶತಕ ಬಾರಿಸಿದ ಕಾರಣ ಸ್ಥಾನ ಉಳಿಸಿಕೊಂಡಿದ್ದಾರೆ. ಲಯದಲ್ಲಿ ಇರದ ಕೆ ಎಲ್ ರಾಹುಲ್ ಸ್ಥಾನಕ್ಕೆ ಕುತ್ತು ಬಂದಿದೆ.
ಪುಣೆ ಪಂದ್ಯ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ಉದ್ದೇಶದಿಂದ ಆಡಲು ಇಳಿದಿರುವ ಟೀಂ ಇಂಡಿಯಾ ಕಠಿಣ ನಿರ್ಧಾರ ಕೈಗೊಂಡಿದೆ. ಮತ್ತೊಂದೆಡೆ ಇತ್ತೀಚಿನ ದಿನಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರದ ಮೊಹಮ್ಮದ್ ಸಿರಾಜ್ ಕೂಡಾ ಆಡುವ ಬಳಗದಿಂದ ಹೊರ ಬಿದ್ದಿದ್ದಾರೆ. ಬೌಲಿಂಗ್ ವಿಭಾಗ ಗಟ್ಟಿಗೊಳಿಸುವ ಕಾರಣದಿಂದ ಆಕಾಶ್ ದೀಪ್ ಅವಕಾಶ ಪಡೆದಿದ್ದಾರೆ.
ಈತನ್ಮಧ್ಯೆ, ಕುಲದೀಪ್ ಯಾದವ್ ಪ್ರಮುಖ ಸ್ಪಿನ್ನರ್ ಆಗಿದ್ದರೂ, ರಣಜಿ ಟ್ರೋಫಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದ ವಾಷಿಂಗ್ಟನ್ ಸುಂದರ್ ಅವರನ್ನು ಸರಣಿಯ ಮಧ್ಯೆ ಕರೆಸಿ ತಂಡದಲ್ಲಿ ಅವಕಾಶ ನೀಡಲಾಗಿದೆ. ಡೆಲ್ಲಿ ವಿರುದ್ಧ ಸುಂದರ್ ಅವರು 152 ರನ್ ಗಳಿಸಿ ಆಲ್ ರೌಂಡ್ ಪ್ರದರ್ಶನ ನೀಡಿದ್ದರು. ಬ್ಯಾಟಿಂಗ್ ವಿಭಾಗ ಗಟ್ಟಿಗೊಳಿಸುವ ಕಾರಣದಿಂದ ಕುಲದೀಪ್ ಅವಕಾಶ ವಂಚಿತರಾಗಿದ್ದಾರೆ.