ಬೆಂಗಳೂರು: ಕಿವೀಸ್ ವಿರುದ್ದದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತೀಯ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ. ಎರಡನೇ ಇನ್ನಿಂಗ್ಸ್ ನ ಬ್ಯಾಟಿಂಗ್ ವೇಳೆ ಟೆಸ್ಟ್ ಕ್ರಿಕೆಟ್ ನಲ್ಲಿ 9000 ರನ್ ಗಡಿ ದಾಟಿದ ಸಾಧನೆ ಮಾಡಿದ್ದಾರೆ.
ಕಿವೀಸ್ ವಿರುದ್ದ ಬೆಂಗಳೂರು ಪಂದ್ಯದಲ್ಲಿ ವಿರಾಟ್ ಕೊಹ್ಲಿ 53 ರನ್ ಗಳಿಸಿದ್ದ ವೇಳೆ ಈ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಎಂಬ ಹಿರಿಮೆಗೆ ವಿರಾಟ್ ಪಾತ್ರರಾದರು.
2013 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದ ಸಚಿನ್ ತೆಂಡೂಲ್ಕರ್, ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಅವರು 200 ಟೆಸ್ಟ್‌ಗಳಲ್ಲಿ 15,921 ರನ್ ಗಳಿಸಿದ್ದಾರೆ. ದ್ರಾವಿಡ್ ಭಾರತಕ್ಕಾಗಿ 163 ಟೆಸ್ಟ್ ಗಳಲ್ಲಿ 13,265 ರನ್ ಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 125 ಟೆಸ್ಟ್‌ಗಳಲ್ಲಿ ಒಟ್ಟು 10,122 ರನ್ ಗಳನ್ನು ಗಳಿಸಿದ ಸುನೀಲ್ ಗವಾಸ್ಕರ್ ಮೂರನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಅವರು 197 ನೇ ಇನ್ನಿಂಗ್ಸ್ ನಲ್ಲಿ ಈ ಮೈಲಿಗಲ್ಲು ತಲುಪಿದರು.
ಟೆಸ್ಟ್‌ನಲ್ಲಿ 9000 ರನ್ ಗಳಿಸಿದ ಭಾರತದ ನಾಲ್ಕನೇ ಕ್ರಿಕೆಟಿಗನಾಗುವುದರ ಜೊತೆಗೆ, ದ್ರಾವಿಡ್ ಮತ್ತು ತೆಂಡೂಲ್ಕರ್ ನಂತರ ನ್ಯೂಜಿಲ್ಯಾಂಡ್ ವಿರುದ್ಧ ಟೆಸ್ಟ್ ನಲ್ಲಿ 1000 ರನ್ ಗಳಿಸಿದ ಮೂರನೇ ಭಾರತೀಯ ಬ್ಯಾಟರ್ ಆಗುವ ಅವಕಾಶವನ್ನು ಕೊಹ್ಲಿ ಹೊಂದಿದ್ದಾರೆ. 1000 ರನ್ ಗಳ ಗಡಿಯನ್ನು ಸೇರಲು ಕೊಹ್ಲಿ ಅವರಿಗೆ ಈ ಇನ್ನಿಂಗ್ಸ್ ಗೆ ಮೊದಲು 134 ರನ್‌ಗಳ ಅಗತ್ಯವಿತ್ತು.