ಕಾನ್ಪುರ: ಪ್ರವಾಸಿ ಬಾಂಗ್ಲಾದೇಶ ವಿರುದ್ದದ ದ್ವಿತೀಯ ಮತ್ತು ಅಂತಿಮ ಪಂದ್ಯವು ಕೊನೆಗೂ ಪುನರಾರಂಭವಾಗಿದೆ. ಮಳೆಯ ಕಾರಣದಿಂದ ಎರಡೂವರೆ ದಿನಗಳ ಆಟಕ್ಕೆ ಬ್ರೇಕ್ ಬಿದ್ದಿತ್ತು, ಇದೀಗ ಸೋಮವಾರ (ಸೆ.30) ಮತ್ತೆ ಆಟ ಆರಂಭವಾಗಿದೆ.
ಶುಕ್ರವಾರದ ಪ್ರಥಮ ದಿನ ನಡೆದ 35 ಓವರ್‌ಗಳ ಆಟ ಹೊರತುಪಡಿಸಿದರೆ, ಅನಂತರದ ಎರಡು ದಿನ ಒಂದೇ ಒಂದು ಎಸೆತವೂ ಸಾಧ್ಯವಾಗಿಲ್ಲ. ಶನಿವಾರದ ಆಟ ಕೂಡ ವಾಶೌಟ್ ಆಗಿತ್ತು. ಬಾಂಗ್ಲಾದೇಶ 3 ವಿಕೆಟಿಗೆ 107 ರನ್ ಮಾಡಿತ್ತು.
ಅಲ್ಲಿಂದ ಆರಂಭವಾದ ಸೋಮವಾರದ ಆಟದಲ್ಲಿ ಬಾಂಗ್ಲಾ ಕುಸಿತ ಕಂಡಿದೆ. ಪಂದ್ಯ ಆರಂಭವಾದ ಕೆಲವೇ ನಿಮಿಷಗಳಲ್ಲಿ ಮುಶ್ಫೀಕರ್ ರಹೀಂ ಔಟಾದರು. ಅನುಭವಿಗಳಾದ ಲಿಟ್ಟನ್ ದಾಸ್ ಮತ್ತು ಶಕೀಬ್ ಅಲ್ ಹಸನ್ ಕೂಡಾ ಬೇಗನೇ ವಿಕೆಟ್ ಒಪ್ಪಿಸಿದರು.
57 ಓವರ್ ನ ಆಟದ ಬಳಿಕ ಬಾಂಗ್ಲಾ ತಂಡವು ಆರು ವಿಕೆಟ್ ಕಳೆದುಕೊಂಡು 175 ರನ್ ಗಳಿಸಿದೆ. ಮೊಮಿನುಲ್ ಹಕ್ 76 ರನ್ ಗಳಿಸಿ ಆಡುತ್ತಿದ್ದಾರೆ.
ರವಿವಾರ ಕಾನ್ಪುರದಲ್ಲಿ ಸೂರ್ಯ ದರ್ಶನವಾಗಲಿಲ್ಲವಾದರೂ ಮಳೆ ಇರಲಿಲ್ಲ. ಆದರೆ ಒದ್ದೆ ಔಟ್‌ಫೀಲ್ಡ್‌ನಿಂದಾಗಿ ಅಂಗಳವನ್ನು ಆಟಕ್ಕೆ ಸಜ್ಜುಗೊಳಿಸುವುದು ಅಸಾಧ್ಯವಾಗಿತ್ತು. ಅಂತಿಮವಾಗಿ ಅಪರಾಹ್ನ 2 ಗಂಟೆಗೆ ದಿನದಾಟವನ್ನು ರದ್ದುಗೊಳಿಸಲಾಗಿತ್ತು.
ಪಂದ್ಯ ಆರಂಭವಾದರೂ ಈಗಾಗಲೇ 8 ಅವಧಿಗಳ ಆಟ ನಷ್ಟವಾಗಿರುವುದರಿಂದ ಈ ಪಂದ್ಯ ಡ್ರಾ ಹಾದಿ ಹಿಡಿದಿರುವುದು ಸ್ಪಷ್ಟ.