Advertisement

ಸಂಕಷ್ಟದಲ್ಲಿ ಗುಡಿ ಕೈಗಾರಿಕೆಗಳು

12:08 PM Jun 02, 2018 | |

ಬೆಂಗಳೂರು: ದೇಶದಲ್ಲಿ ಸಣ್ಣ, ಅತಿ ಸಣ್ಣ ಹಾಗೂ ಗುಡಿ ಕೈಗಾರಿಕೆ‌ ಇಂದು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದ್ದು, ಪಾರಂಪರಿಕ ವೃತ್ತಿಯಲ್ಲಿ ತೊಡಗಿರುವವರು ಬೀದಿಗೆ ಬಂದಿದ್ದಾರೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ವತಿಯಿಂದ ಶುಕ್ರವಾರ ಸರ್‌.ಎಂ.ವಿ. ಸಭಾಂಗಣದಲ್ಲಿ ಆಯೋಜಿಸಿದ್ದ “10ನೇ ಆವೃತ್ತಿಯ ಎಫ್ಕೆಸಿಸಿಐ ಮಂಥನ್‌’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೃಹತ್‌ ಉದ್ಯಮಗಳಿಂದ ಗ್ರಾಮೀಣ ಭಾಗದ ಉದ್ಯಮಗಳಿಗೆ ತೀವ್ರ ತೊಂದರೆಯಾಗುತ್ತಿದ್ದು, ಅದನ್ನೇ ನಂಬಿ ಜೀವನ ನಡೆಸುವವರು ದುಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದರು. 

ವ್ಯಾಪಾರದಲ್ಲಿ ನಷ್ಟವಾಗಿ ಆತ್ಮಹತ್ಯೆಗೆ ನಿರ್ಧರಿಸಿದ ಸಣ್ಣ ಉದ್ಯಮಿಗಳು, ವ್ಯಾಪಾರಿಗಳು ಧರ್ಮಸ್ಥಳಕ್ಕೆ ಭೇಟಿ ನೀಡುತ್ತಾರೆ. ತಮ್ಮನ್ನು ಭೇಟಿ ಮಾಡಿ ಕಷ್ಟ ಹೇಳಿ, ಯಾರೋ ಮಾಟ ಮಾಡಿದ್ದಾರೆ ಎನ್ನುತ್ತಾರೆ.ಆ ಸಂದರ್ಭದಲ್ಲಿ ನಾವು,  ಗುಡಿ ಕೈಗಾರಿಕೆಗಳಲ್ಲಿ ತಯಾರಿಸಿದ ಆಹಾರ ಪದಾರ್ಥಗಳು ಕೆಲವೇ ದಿನಗಳಲ್ಲಿ ಹಾಳಾಗುತ್ತವೆ.

ಆದರೆ, ಪ್ಯಾಕೆಟ್‌ಗಳಲ್ಲಿ ಹಾಕಿರುವ ಪದಾರ್ಥಗಳು 6 ತಿಂಗಳು ಬರುತ್ತವೆ. ನಿಮಗೆ ನಷ್ಟವಾಗುತ್ತಿರುವುದು ಇವುಗಳನ್ನು ತಯಾರಿಸುವುದರಿಂದಲೇ ಹೊರತು, ಮಾಟದಿಂದಲ್ಲ ಎಂದು ಮನವರಿಕೆ ಮಾಡಿಕೊಟ್ಟಾಗ ಪ್ರಾಣ ಕಳೆದುಕೊಳ್ಳುವ ನಿರ್ಧಾರ ಕೈಬಿಟ್ಟು ಊರಿಗೆ ಮರಳುತ್ತಾರೆ ಎಂದು ಹೇಳಿದರು. 

ಯುವಕರು ಸಂಶೋಧನೆಗಳಿಗೆ ಹೆಚ್ಚಿನ ಒತ್ತು ನೀಡುವ ಜತೆಗೆ, ಸ್ವಯಂ ಉದ್ಯೋಗಿಗಳಾಗಲು ಆದ್ಯತೆ ನೀಡಬೇಕು. 1969ರಲ್ಲಿ ಉಡುಪಿಯಲ್ಲಿ ಶೇ.59ರಷ್ಟು ಪಡೆದ ವಿದ್ಯಾರ್ಥಿ ಕಾಲೇಜಿನ ಟಾಪರ್‌ ಆಗಿದ್ದರು. ಆದರೆ, ಇತ್ತೀಚೆಗೆ ಶಾಲೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಸುಮಾರು 300 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ.

Advertisement

ಇಂದು ದೇಶದ ಅತ್ಯುತ್ತಮ ವ್ಯಾಪಾರಿಗಳಲ್ಲಿ ಹೆಚ್ಚಿವರು ಫೇಲಾದವರಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ, ಅವಕಾಶ ಹಾಗೂ ಹಣಕಾಸು ಪ್ರೋತ್ಸಾಹ ಸಿಕ್ಕರೆ ಏನು ಬೇಕಾದರೂ ಸಾಧಿಸುತ್ತಾರೆ ಎಂದು ಹೇಳಿದರು. ಧರ್ಮಸ್ಥಳದ ರುಡ್‌ಸೆಟ್‌ ಸಂಸ್ಥೆಯ ಮೂಲಕ ಕಳೆದ 26 ವರ್ಷಗಳಲ್ಲಿ 23 ಲಕ್ಷ ಜನರಿಗೆ ವಿವಿಧ ಕೌಶಲ್ಯ ತರಬೇತಿ ನೀಡಲಾಗಿದೆ.

ಕಳೆದ ಆರು ವರ್ಷಗಳಲ್ಲಿ ರುಡ್‌ಸೆಟ್‌ ಶಾಖೆಗಳ ಸಂಖ್ಯೆ 26 ರಿಂದ 560ಕ್ಕೆ ಏರಿಕೆಯಾಗಿದೆ. ಇಲ್ಲಿ ತರಬೇತಿ ಪಡೆದವರು ಯಾರೂ ಪದವಿ ಪಡೆದಿಲ್ಲ. ಆದರೆ, ತರಬೇತಿ ಪಡೆದ 23 ಲಕ್ಷ ಜನರ ಪೈಕಿ ಶೇ.70ರಷ್ಟು ಜನರು ಸ್ವಯಂ ಉದ್ಯೋಗಿಗಳಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. 

ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆಯ ನಿರ್ದೇಶಕರೂ ಆದ ಕೈಗಾರಿಕಾಭಿವೃದ್ಧಿ ಆಯುಕ್ತ ದರ್ಪಣ್‌ ಜೈನ್‌ ಮಾತನಾಡಿ, ಉದ್ಯಮ ಆರಂಭಿಸಲು ಮುಂದಾಗುವ ಯುವಕರು ಬಂಡವಾಳ ಹೂಡಿಕೆ, ಹೂಡಿಕೆ ಕ್ಷೇತ್ರ, ಉದ್ಯೋಗ ಸೃಷ್ಟಿಯಂತಹ ವಿಷಯಗಳ ಕುರಿತು ಗಂಭೀರವಾಗಿ ಯೋಚಿಸಬೇಕು.

ಆಸ್ತಿಗಳಲ್ಲಿ ಹೆಚ್ಚು ಹೂಡಿಕೆ ಮಾಡದೆ, ಹತ್ತಾರು ಉದ್ಯೋಗ ಸೃಷ್ಟಿಸುವ ಕ್ಷೇತ್ರಗಳ್ಲಲಿ ಬಂಡವಾಳ ಹೂಡುವುದರಿಂದ ಹತ್ತಾರು ಜನರಿಗೆ ಉದ್ಯೋಗ ಸಿಕ್ಕಿ ಅವರ ತಲಾದಾಯ ಹೆಚ್ಚುತ್ತದೆ. ಆ ಮೂಲಕ ರಾಷ್ಟ್ರೀಯ ಒಟ್ಟು ಆದಾಯ (ಜಿಡಿಪಿ) ಹೆಚ್ಚಲು ಸಹಕಾರಿಯಾಗುತ್ತಾರೆ ಎಂದರು. 

ಕಾರ್ಯಕ್ರಮದಲ್ಲಿ ಮಂಥನ್‌ ಸ್ಮಾರ್ಟ್‌ಅಪ್‌ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ವೇಳೆ ಎಫ್ಕೆಸಿಸಿಐ ಅಧ್ಯಕ್ಷ ಕೆ.ರವಿ, ಸದಸ್ಯರಾದ ಸುಧಾಕರ್‌ ಎಸ್‌ ಶೆಟ್ಟಿ, ಎಚ್‌.ಎ.ಕಿರಣ್‌, ಸಿ.ಆರ್‌.ಜನಾರ್ಧನ, ಜೆ.ಆರ್‌.ಬಂಗೇರ ಸೇರಿದಂತೆ ಪ್ರಮುಖರು ಹಾಜರಿದ್ದರು. 

ಕೇಳಿದ ತಕ್ಷಣ ಸಾಲ ಕೊಟ್ಟರೆ ನೀರವ್‌, ಮಲ್ಯ ಆಗ್ತಾರೆ!: ಯುವ ಉದ್ಯಮಿಗಳಿಗೆ ಬ್ಯಾಂಕ್‌ಗಳಿಂದ ಸೂಕ್ತ ಹಣಕಾಸು ನೆರವಿನ ಕುರಿತು ಮಾತನಾಡುವ ವೇಳೆ, ಬ್ಯಾಂಕ್‌ಗಳು ಕೇಳಿದ ತಕ್ಷಣ ಸಾಲ ನೀಡಿದರೆ, ನೀರವ್‌ ಮೋದಿ ಹಾಗೂ ಮಲ್ಯರಂತೆ ಆಗ್ತಾರೆ ಎಂದು ವೀರೇಂದ್ರ ಹೆಗ್ಗಡೆಯವರು ಹಾಸ್ಯ ಚಟಾಕಿ ಹಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next