Advertisement

Politics; ರಾಹುಲ್ ಸುಳ್ಳು ಮಾತಿನಿಂದ ಭಾರತ ವಿರೋಧಿಗಳಿಗೆ ಹೊಸ ಶಕ್ತಿ: ತೇಜಸ್ವಿ ಸೂರ್ಯ

04:35 PM Sep 13, 2024 | Team Udayavani |

ಬೆಂಗಳೂರು: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು (Rahul Gandhi) ಅಮೆರಿಕದಲ್ಲಿ ಭಾರತದ ವಿರುದ್ಧ ಮಾತನಾಡಿದ್ದು, ಇದನ್ನು ದೇಶ ಗಂಭೀರವಾಗಿ ಪರಿಗಣಿಸುತ್ತಿದೆ. ರಾಹುಲ್ ಗಾಂಧಿಯವರ ಮಾತುಗಳು ಸುಳ್ಳಿನಿಂದ ಕೂಡಿರುವುದಷ್ಟೇ ಅಲ್ಲದೆ, ಭಾರತವನ್ನು ವಿರೋಧಿಸುವ ಶಕ್ತಿಗಳಿಗೆ ಹೊಸ ಜೀವ ನೀಡಿ ಹೊಸ ಶಕ್ತಿ ಕೊಟ್ಟಂತೆ ಕಾಣಿಸುತ್ತಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿಸೂರ್ಯ (Tejasvi Surya) ಹೇಳಿದ್ದಾರೆ.

Advertisement

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ (ಸೆ.13) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶದಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ ವ್ಯಕ್ತಿಗಳ ಹಿನ್ನೆಲೆಯನ್ನು ಗಮನಿಸಿದರೆ, ಯಾರು ಭಾರತದ ವಿರೋಧಿಗಳಿದ್ದಾರೋ ಅವರ ಜೊತೆ ರಾಹುಲ್ ಗಾಂಧಿಯವರು ಸ್ನೇಹಿತರಾಗಿರುವುದು ಸ್ಪಷ್ಟವಾಗುತ್ತಿದೆ ಎಂದರು.

ದೇಶದ ಒಳಗಡೆ ರಾಹುಲ್ ಗಾಂಧಿಯವರು, ಬಿಜೆಪಿ ಮೀಸಲಾತಿಯನ್ನು ರದ್ದು ಮಾಡುತ್ತದೆ; ಜಾತಿ ಆಧಾರದ ಗಣತಿ ಮಾಡಿ, ಒಬಿಸಿ, ಎಸ್‍ಸಿ, ಎಸ್‍ಟಿಗಳಿಗೆ ಅನ್ಯಾಯ ಆಗುತ್ತಿದೆ ಎಂದು ಭಾಷಣ ಮಾಡುತ್ತಾರೆ. ಆದರೆ, ವಿದೇಶದಲ್ಲಿ ಹೋದ ತಕ್ಷಣವೇ ಅಮೆರಿಕದಲ್ಲಿ ಇದ್ದ ತಕ್ಷಣ ಇಂಗ್ಲಿ ಷ್‍ನಲ್ಲಿ ಮಾತನಾಡುವುದರಿಂದ ಇಲ್ಲಿನವರು ಕೇಳಿಸಿಕೊಳ್ಳಲಾರರು ಅಂದುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಸಿಕ್ಕಿದಾಗ ಮೀಸಲಾತಿ ರದ್ದು ಮಾಡುವುದಾಗಿ ಭಾಷಣ ಮಾಡುತ್ತಾರೆ ಎಂದರು.

ಈ ಆಷಾಡಭೂತಿತನ (ಹಿಪೋಕ್ರಸಿ) ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಾರ್ಟಿಯ ರಾಜಕೀಯವನ್ನು ಜನರಿಗೆ ತೋರಿಸುತ್ತಿದೆ. ರಾಹುಲ್ ಗಾಂಧಿಯವರು ಮೀಸಲಾತಿ ರದ್ದು ಮಾಡುವುದಾಗಿ ಅಮೆರಿಕದಲ್ಲಿ ಭಾಷಣ ಮಾಡಿದ್ದು ನನಗಂತೂ ಆಶ್ಚರ್ಯಕ್ಕೆ ಕಾರಣವಾಗಿಲ್ಲ. ರಾಹುಲ್ ಗಾಂಧಿಯ ಕಾಂಗ್ರೆಸ್ ಪಾರ್ಟಿ ತನ್ನ ಇತಿಹಾಸದಲ್ಲಿ ನೆಹರೂ ಅವರಿಂದ ಪ್ರಾರಂಭಿಸಿ ರಾಜೀವ್ ಗಾಂಧಿ ವರೆಗೆ ಮೀಸಲಾತಿಯನ್ನು ವಿರೋಧಿಸಿತ್ತು ಎಂದು ತೇಜಸ್ವಿಸೂರ್ಯ ಎಂದರು.

ರಾಹುಲ್ ಗಾಂಧಿಯವರು ಅಮೆರಿಕದಲ್ಲಿ ಭೇಟಿ ಮಾಡಿದ ವ್ಯಕ್ತಿಗಳ ಚಾರಿತ್ರ್ಯ, ಹಿನ್ನೆಲೆ ಕೇಳಿದರೆ ಆಶ್ಚರ್ಯಪಡುವಂತಿದೆ. ಭಾರತದ ವಿರುದ್ಧ ಅಮೆರಿಕದಲ್ಲಿ, ಅಮೆರಿಕದ ಸಂಸತ್ತಿನಲ್ಲಿ ನಿರಂತರವಾಗಿ ಮಾತನಾಡಿದ, ಭಾರತ ವಿರೋಧಿ ಕಾರ್ಯಕರ್ತ ಇಲ್ಹನ್ ಒಮರ್ ರನ್ನು ರಾಹುಲ್ ಗಾಂಧಿ ಭೇಟಿ ಮಾಡಿದ್ದಾರೆ. ಜಮ್ಮು- ಕಾಶ್ಮೀರದಲ್ಲಿ ಭಾರತವು ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾಗಿ ಪ್ರಸ್ತಾಪಿಸಿದ ವ್ಯಕ್ತಿ ಅವರು. ಭಾರತೀಯ ಪ್ರಜೆಗಳಿಗೆ ಅಮೆರಿಕದಲ್ಲಿ ಫಾಸ್ಟ್ ಟ್ರ್ಯಾಕ್‍ನಲ್ಲಿ ಪೌರತ್ವ- ಗ್ರೀನ್ ಕಾರ್ಡ್ ಕೊಡಬೇಕೆಂಬ ಪ್ರಸ್ತಾವವನ್ನು ಅಮೆರಿಕದ ಕಾಂಗ್ರೆಸ್‍ನಲ್ಲಿ (ಸದನದಲ್ಲಿ) ವಿರೋಧಿಸಿದವರು ಇದೇ ಇಲ್ಹನ್ ಒಮರ್. ಇದೇ ಇಲ್ಹನ್ ಒಮರ್ ಅನ್ನು ಭೇಟಿ ಮಾಡಿ, ಅವರ ಜೊತೆ ವೇದಿಕೆ ಹಂಚಿಕೊಂಡು, ರಾಹುಲ್ ಗಾಂಧಿಯವರ ಮಾತುಗಳಿಗೆ ಇಲ್ಹನ್ ಒಮರ್ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದರೆ, ಇದಕ್ಕಿಂತ ಅಸಹ್ಯಕರ ನಡವಳಿಕೆ ವಿಪಕ್ಷ ನಾಯಕನದ್ದಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

Advertisement

ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವವರೆಗೆ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ದರ್ಜೆ ಲಭಿಸಿರಲಿಲ್ಲ. ಕೇಂದ್ರೀಯ ವಿದ್ಯಾಲಯ, ನವೋದಯ ಶಾಲೆಗಳಲ್ಲಿ, ಮೆಡಿಕಲ್ ಕಾಲೇಜ್, ನೀಟ್ ಪರೀಕ್ಷೆಯಲ್ಲಿ ಒಬಿಸಿಗಳಿಗೆ ಶೇ 27 ಮೀಸಲಾತಿ ಕೊಟ್ಟಿರಲಿಲ್ಲ. ಈ ಎಲ್ಲ ಸತ್ಯ ಒಂದೆಡೆ ಇದ್ದರೂ ಕೂಡ ಭಾರತದ ಒಳಗಡೆ ಬಂದಾಗ ಮೀಸಲಾತಿ ಪರವಾಗಿ, ಜಾತಿ ಗಣತಿ ಮಾಡಿ ಎಂಬ ಭಾಷಣ ಮಾಡಿ, ಅಮೆರಿಕಕ್ಕೆ ಹೋದ ತಕ್ಷಣವೇ ನಾವು ಮೀಸಲಾತಿ ತೆಗೆದುಹಾಕುವುದಾಗಿ ಮಾತನಾಡುವ ರಾಹುಲ್ ಗಾಂಧಿಯ ಆಷಾಡಭೂತಿತನವನ್ನು ಇವತ್ತು ದೇಶದ ಜನರು ಪ್ರಶ್ನಿಸುತ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next