Advertisement
ಕೆಐಎಡಿಬಿಗೆ ವಾರ್ಷಿಕವಾಗಿ ಹಣ ಪಾವತಿ ಮಾಡುತ್ತಿದ್ದ ಕೈಗಾರಿಕೆಗಳು ಇದೀಗ ಖಾತಾ ಪಡೆಯಲು ಪಾಲಿಕೆ ಯನ್ನು ವಿಚಾರಿಸಿದರೆ 2008ರಿಂದ ತಮ್ಮ ಸ್ವಯಂಘೋಷಿತ ಆಸ್ತಿ ತೆರಿಗೆ ಬಾಕಿ ಉಳಿಸಿ ಕೊಂಡ ಸಂಗತಿ ಮುನ್ನೆಲೆಗೆ ಬಂದಿದೆ. ಬ್ಯಾಂಕ್ ಲೋನ್, ಕೈಗಾರಿಕೆ ಮಾರಾಟ ಸಹಿತ ಕೆಲವು ಸಂದರ್ಭಕ್ಕೆ ಅಗತ್ಯವಾಗಿರುವ ಖಾತಾ ಪಡೆಯಲು ಇದೀಗ ಕೈಗಾರಿಕೆಯವರು ತೆರಿಗೆ ಹೊರೆ ಎದುರಿಸುತ್ತಿದ್ದಾರೆ.
Related Articles
Advertisement
2008ರಿಂದ ತೆರಿಗೆ ಪಾವತಿಸುವುದಾದರೆ ಕೈಗಾರಿಕೆಗಳು ಲಕ್ಷಾಂತರ ರೂ. ಪಾವತಿಸ ಬೇಕು; ಸದ್ಯ ಕೈಗಾರಿಕೆಗಳು ಸಂಕಷ್ಟ ಕಾಲ ದಿಂದ ಚೇತರಿಕೆಗೆ ಬರುವ ಹಂತದಲ್ಲಿವೆ. ಈ ವೇಳೆ ತೆರಿಗೆ ಹೊರೆ ಸರಿಯಲ್ಲ. ಸರಕಾರದ ಅಂಗ ಸಂಸ್ಥೆ ಕೆಐಎಡಿಬಿಗೆ ವಾರ್ಷಿಕವಾಗಿ ಕೈಗಾರಿಕೆಯಿಂದ ಹಣ ನೀಡಲಾಗುತ್ತಿದೆ. ಇಷ್ಟಿದ್ದರೂ 2 ವರ್ಷಗಳ ತೆರಿಗೆ ಪಾವತಿಸಿದರೆ ಖಾತಾ ನೀಡುವಂತೆ ಎಂದು ಕೈಗಾರಿಕೆಯವರು ಪಾಲಿಕೆಯನ್ನು ಕೋರಿದ್ದಾರೆ.
ಬಂದ್ ಮಾಡಬೇಕಾದ ಪರಿಸ್ಥಿತಿ
ಭಾರತೀಯ ಕೈಗಾರಿಕೆ ಒಕ್ಕೂಟದ ಮಂಗಳೂರು ಘಟಕದ ಅಧ್ಯಕ್ಷ ಗೌರವ್ ಹೆಗ್ಡೆ ಅವರು ‘ಸುದಿನ’ ಜತೆಗೆ ಮಾತನಾಡಿ, ಬೈಕಂಪಾಡಿಯಲ್ಲಿ ಕೆಐಎಡಿಬಿ ವ್ಯಾಪ್ತಿಯ ಕೈಗಾರಿಕೆ ಪ್ರದೇಶದ ಎಲ್ಲ ನಿರ್ವಹಣೆಯನ್ನು ಕೆಐಎಡಿಬಿಯೇ ನಡೆಸುತ್ತಿದೆ. ಅನುಮೋದನೆ ಕೂಡ ಅಲ್ಲಿಂದಲೇ ಪಡೆಯಲಾಗುತ್ತಿದೆ. ಪಾಲಿಕೆ ಡೋರ್ ನಂಬರ್ ಕೂಡ ನೀಡಿಲ್ಲ. ಹೀಗಾಗಿ ಪಾಲಿಕೆಗೆ ತೆರಿಗೆ ಪಾವತಿ ವಿಚಾರ ಬಂದಿಲ್ಲ. ಆದರೆ ಪಾಲಿಕೆಗೆ ಗರಿಷ್ಠ ನೀರಿನ, ತ್ಯಾಜ್ಯ ತೆರಿಗೆಯನ್ನು ಕೈಗಾರಿಕೆಗಳು ಪಾವತಿ ಸುತ್ತಿವೆ. ಇದೀಗ ಖಾತಾ ಪಡೆಯುವ ಸಂದರ್ಭ ಪಾಲಿಕೆಯಿಂದ ತೆರಿಗೆ ಪಾವತಿಸುವ ಬಗ್ಗೆ ಸೂಚನೆ ಬಂದಿದೆ. 2008ರಿಂದ ಇಲ್ಲಿಯವರೆಗೆ ದಂಡ ಸಹಿತ ತೆರಿಗೆ ಪಾವತಿಸಿದರೆ ಕೋಟ್ಯಂತರ ರೂ. ನೀಡಿ ಬೈಕಂಪಾಡಿಯ ಕೈಗಾರಿಕೆಗಳು ಮುಚ್ಚಬೇಕಾಗುತ್ತದೆ. 20 ಸಾವಿರ ಉದ್ಯೋಗಿಗಳು ಬೀದಿಗೆ ಬರುವ ಪರಿಸ್ಥಿತಿ ಇದೆ. ಹೀಗಾಗಿ ಕೈಗಾರಿಕೆಗಳಿಗೆ ತೆರಿಗೆಯಲ್ಲಿ ರಿಯಾಯಿತಿ ನೀಡಿ 2 ವರ್ಷಗಳ ತೆರಿಗೆ ಪಾವತಿಸಿದರೆ ಖಾತಾ ನೀಡಲು ಅನುಕೂಲ ಕಲ್ಪಿಸಬೇಕಾಗಿದೆ’ ಎಂದರು.
ತೆರಿಗೆ ರಿಯಾಯಿತಿಗೆ ಮನವಿ
ಕೈಗಾರಿಕೆಗಳು ಈಗತಾನೆ ಚೇತರಿಕೆಯ ಹಂತಕ್ಕೆ ಬರುತ್ತಿವೆ. ಈ ಸಂದರ್ಭ ಖಾತಾ ಪಡೆಯುವ ಕಾರಣದಿಂದ ಪಾಲಿಕೆಯನ್ನು ಸಂಪರ್ಕಿಸಿದರೆ ಎಸ್‌ಎಎಸ್ ಬಾಕಿ ಇರುವುದನ್ನು ಪಾವತಿಸಲು ತಿಳಿಸಿರುವುದು, ಕೈಗಾರಿಕೆಯವರಿಗೆ ದೊಡ್ಡ ಹೊಡೆತ ನೀಡಿದೆ. ಕೆಐಎಡಿಬಿಗೆ ನಿಯಮಿತವಾಗಿ ನಾವು ಹಣ ಪಾವತಿ ಮಾಡಿದ್ದೇವೆ. ಆದರೆ ಈಗ ಪಾಲಿಕೆಯಿಂದ ತೆರಿಗೆ ಹೊರೆ ಬಿದ್ದಿದೆ. ಸಾವಿರಾರು ಉದ್ಯೋಗಿಗಳಿಗೆ ಅವಕಾಶ ಕಲ್ಪಿಸಿದ ಕೈಗಾರಿಕೆಗಳ ರಕ್ಷಣೆಗಾಗಿ ತೆರಿಗೆಯಲ್ಲಿ ರಿಯಾಯಿತಿ ಪ್ರಕಟಿಸಬೇಕಾಗಿದೆ. 2 ವರ್ಷಗಳ ತೆರಿಗೆ ಪಾವತಿಸಲು ನಾವು ಬದ್ಧರಾಗಿದ್ದೇವೆ. -ಐಸಾಕ್ ವಾಜ್, ಅಧ್ಯಕ್ಷರು, ಕೆನರಾ ಇಂಡಸ್ಟ್ರೀಸ್ ಅಸೋಸಿಯೇಶನ್