Advertisement
ಈ ದೃಶ್ಯವನ್ನು ಈಗ ನೆನಪಿಸಿಕೊಂಡರೂ ಹಳೇ ಬಜಾಜ್ ಚೇತಕ್ ಹಾಗೇ ಮನಸ್ಸಿನಲ್ಲಿ ಬಂದು ಹೋಗುತ್ತದೆ. ಹೌದು, ಅದು 1970 ಮತ್ತು 80ರ ದಶಕ. ಆ ಜಮಾನದಲ್ಲಿ ದೇಶದಲ್ಲಿ ಇದ್ದ ಒಟ್ಟಾರೆ ಬೈಕ್‌ಗಳಲ್ಲಿ ಅರ್ಧದಷ್ಟು ಬಜಾಜ್ ಚೇತಕ್ ಇದ್ದವು. ಮಧ್ಯಮ ವರ್ಗದ ಸಂಚಾರ ನಾಡಿಯಾಗಿತ್ತು ಆ ಸ್ಕೂಟರ್. ಆಗಿನಿಂದಲೂ ಇದು ಹಮಾರ ಬಜಾಜ್ ಎಂದೇ ಪ್ರಸಿದ್ಧಿ. ಈ ಸ್ಕೂಟರ್ ಅನ್ನು ದೇಶದಲ್ಲಿ ಪರಿಚಯಿಸಿದ್ದವರು ರಾಹುಲ್ ಬಜಾಜ್. ಬಜಾಜ್ ಕಂಪೆನಿಯ ಮಾಲಕರು.
Related Articles
Advertisement
ಬಜಾಜ್ ಚೇತಕ್ ಅಂತೂ 70 ಮತ್ತು 80ರ ದಶಕದಲ್ಲಿ ದೊಡ್ಡ ಮೋಡಿಯನ್ನೇ ಮಾಡಿದವು. ವಿಶೇಷವೆಂದರೆ, ಮದುವೆಯ ವೇಳೆ ವಧುವಿನ ಕಡೆಯವರು, ವರನಿಗೆ ಪ್ರೀತಿಯಿಂದ ಬಜಾಜ್ ಚೇತಕ್ ನೀಡುತ್ತಿದ್ದ ವಾಡಿಕೆಯೂ ಇತ್ತು. ಅಷ್ಟೇ ಅಲ್ಲ, ಮಕ್ಕಳಿಗೆ ಉಡುಗೊರೆಯಾಗಿ ಚೇತಕ್ ಅನ್ನೇ ನೀಡಲಾಗುತ್ತಿತ್ತು. ಈ ಪ್ರಮಾಣದಲ್ಲಿ ಈ ಸ್ಕೂಟರ್ ಪ್ರಸಿದ್ಧಿ ಪಡೆದುಕೊಂಡಿತ್ತು. ಹಾಗೆಯೇ ಬಜಾಜ್ ಗ್ರೂಪ್ ಕೂಡ ಬಿಲಿಯನೇರ್‌ಗಳ ಗುಂಪಿಗೆ ಸೇರಿತು.
ಆದರೆ 2001ರಲ್ಲಿ ಬಜಾಜ್ ಚೇತಕ್‌ಗೆ ದೊಡ್ಡ ಸವಾಲು ಎದುರಾಯಿತು. ವಿದೇಶಿ ಕಂಪೆನಿಗಳಾದ ಹೋಂಡಾ, ಯಮಹಾ, ಸುಜುಕಿ ಭಾರತಕ್ಕೆ ಪ್ರವೇಶಿಸಿದವು. ನಿಧಾನಗತಿಯಲ್ಲಿ ಚೇತಕ್ ಕೂಡ ಮೊದಲಿನ ಪ್ರಸಿದ್ಧಿ ಕಳೆದುಕೊಂಡಿತು. ಆದರೆ ಅನಂತರದ ದಿನಗಳಲ್ಲಿ ಬಜಾಜ್‌ಗೆ ಮತ್ತೆ ಸ್ಫೂರ್ತಿ ನೀಡಿದ್ದು ಬಜಾಜ್ ಪಲ್ಸರ್ ಬೈಕ್.
2008ರಲ್ಲಿ ಬಜಾಜ್ ಗ್ರೂಪ್ ಅನ್ನು ಮೂರು ಭಾಗಗಳನ್ನಾಗಿ ಮಾಡಲಾಯಿತು. ಅಂದರೆ ಬಜಾಜ್ ಆಟೋ, ಬಜಾಜ್ ಫೈನಾನ್ಸ್ ಮತ್ತು ಒಂದು ಹೋಲ್ಡಿಂಗ್ ಕಂಪೆನಿಯನ್ನಾಗಿ ಮಾಡಲಾಯಿತು. ಇದರ ಹೊಣೆಯನ್ನು ತಮ್ಮ ಪುತ್ರರಿಗೆ ವಹಿಸಿದರು.
ರಾಹುಲ್ ಬಜಾಜ್ ಎಂದರೆ, ಕಾರ್ಪೋರೆಟ್ ವಲಯದಲ್ಲಿ ನಿರ್ಭೀತ ವ್ಯಕ್ತಿ ಎಂದೇ ಕರೆಯುತ್ತಿದ್ದರು. ಯಾವ ವಿಚಾರಕ್ಕೂ ಅವರು ಹೆದರುತ್ತಿರಲಿಲ್ಲ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಇದ್ದ ಲೈಸೆನ್ಸ್ ರಾಜ್ ಅನ್ನು ತೆಗೆಯುವಲ್ಲಿಯೂ ರಾಹುಲ್ ಬಜಾಜ್ ಅವರ ಪಾತ್ರ ದೊಡ್ಡದು. ಏಕೆಂದರೆ ವ್ಯಕ್ತಿಯೊಬ್ಬ ಸ್ಕೂಟರ್ ಖರೀದಿಸಿದ ಮೇಲೆ ಇದಕ್ಕೆ ಪರವಾನಿಗೆ ಸಿಗಲು ತಿಂಗಳುಗಟ್ಟಲೆ ಕಾಯಬೇಕಾಗಿತ್ತು. ಅಷ್ಟೇ ಅಲ್ಲದೆ ಕೊರೊನಾ ಮೊದಲ ಅಲೆ ವೇಳೆ ಹೇರಲಾಗಿದ್ದ ಲಾಕ್‌ಡೌನ್ ವಿರುದ್ಧವೂ ಕಿಡಿಕಾರಿದ್ದಲ್ಲದೆ, ಈಗಿನ ಸರಕಾರದ ವಿರುದ್ಧವೂ ಟೀಕೆ ಮಾಡುತ್ತಿದ್ದರು.
ರಾಹುಲ್ ಬಜಾಜ್ ಅವರು 1986ರಲ್ಲಿ ಇಂಡಿಯನ್ ಏರ್‌ಲೈನ್ಸ್‌ನ ಅಧ್ಯಕ್ಷರಾಗಿದ್ದರು. 2001ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿ, 2006ರಲ್ಲಿ ರಾಜ್ಯಸಭೆಗೆ ಮಹಾರಾಷ್ಟ್ರದಿಂದ ಕಳುಹಿಸಲಾಗಿತ್ತು. 2005ರಲ್ಲಿ ಇವರು ಬಜಾಜ್ ಗ್ರೂಪ್‌ನ ಮುಖ್ಯಸ್ಥ ಸ್ಥಾನದಿಂದ ಇಳಿದರು. ಬಳಿಕ ಪುತ್ರ ರಾಜೀವ್ ಬಜಾಜ್ ಈ ಸ್ಥಾನ ವಹಿಸಿಕೊಂಡರು. ಕಳೆದ ವರ್ಷವಷ್ಟೇ ನಾನ್-ಎಕ್ಸಿಕ್ಯೂಟಿವ್ ನಿರ್ದೇಶಕ ಸ್ಥಾನದಿಂದಲೂ ಕೆಳಗಿಳಿದಿದ್ದರು.