ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆಗಳಿಗೆ ಉಪ ಯೋಗಿಸಿರುವ ಜಮೀನಿನ ಬಗ್ಗೆ ಸಮೀಕ್ಷೆ ಮತ್ತು ಪರಿಶೋಧನೆ ನಡೆಸಲಾಗುವುದು ಎಂದು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನೆ ಸಭೆ ಬಳಿಕ ಮಾತನಾಡಿ, ರಾಜ್ಯದ ಒಟ್ಟು ಭೂಮಿ ಪ್ರಮಾಣ, ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಇದು ವರೆಗೂ ಸ್ವಾಧೀನ ಪಡಿಸಿಕೊಂಡಿರುವ ಭೂಮಿ ಮಾಹಿತಿ, ಅದರಲ್ಲಿ ಕೈಗಾರಿಕೆಗಳಿಗೆ ಎಷ್ಟು ಹಂಚಿಕೆ ಮಾಡಲಾಗಿದೆ ಎನ್ನುವ ವಿವರ ಸಂಗ್ರಹಕ್ಕೆ ಸಮೀಕ್ಷೆಗೆ ಮುಂದಾಗಿದ್ದೇವೆಂದರು.
ಇದುವರೆಗೂ ಹಂಚಿಕೆ ಮಾಡಿರುವ ಭೂಮಿಯಲ್ಲಿ ಕೈಗಾರಿಕೆ ಪ್ರಾರಂಭ ವಾಗಿರುವ ಬಗ್ಗೆ ಹಾಗೂ ಆಗದೇ ಇರುವ ಬಗ್ಗೆ ಮಾಹಿತಿ, ಕೈಗಾರಿಕಾ ಭೂ ಪ್ರದೇಶಗಳಲ್ಲಿ ಭೂ ಹಂಚಿಕೆ ನಂತರ ಇನ್ನೂ ಕೈಗಾರಿಕೆಗಳ ಪ್ರಾರಂಭ ಮಾಡದೇ ಇರು ವುದಕ್ಕೆ ಕಾರಣ, ಅದರ ಮೇಲೆ ಕೈಗೊ ಳ್ಳಬಹು ದಾದ ಕ್ರಮಗಳ ಬಗ್ಗೆ ವಿಸ್ತೃತವಾದ ಅಧ್ಯಯನ ಕೈಗೊಳ್ಳುವಂತೆ ಅಧಿಕಾರಿಗಳಿಗೆಸೂಚನೆ ನೀಡ ಲಾಗಿದೆ ಎಂದರು.
ಹೊಸ ನೀತಿ: ಈಗಾಗಲೇ ಜಮೀನು ಹಂಚಿಕೆ ಮಾಡಿರುವ ಹಳೆ ಪ್ರಕರಣಗಳಿಗೆ ಅನ್ವಯವಾಗುವಂತಹ ಹಾಗೂ ಮುಂದಿನ ಹೊಸ ಹಂಚಿಕೆಗೂ ಅನ್ವಯ ವಾಗುವ ಪ್ರತ್ಯೇಕ ನೀತಿ ತರುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಿಯಮಾವಳಿ ರೂಪಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಕೆಲ ಪ್ರಕರಣಗಳಲ್ಲಿ ಭೂ ಮಾಲಿಕರು ವರ್ಷಗಳ ಕಾಲ ಪರಿಹಾರ ಪಡೆಯಲು ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿಯಿದೆ. ಇದನ್ನು ತಡೆ ಯುವ ನಿಟ್ಟಿನಲ್ಲಿ ಕಾಲಮಿತಿಯೊಳಗೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವುದು, ಪರಿಹಾರ ನೀಡುವ ವ್ಯವಸ್ಥೆ ಮಾರ್ಗಸೂಚಿ ರೂಪಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಇದುವರೆಗೂ ಭೂಮಿ ಹಂಚಿಕೆ ಮಾಡುವ ಸಮಯದಲ್ಲಿ ಒಂದು ದರ ಹಾಗೂ ಸೇಲ್ ಡೀಡ್ ನೀಡುವ ಸಮ ಯದಲ್ಲಿ ಮತ್ತೂಂದು ದರದ ನಿಗದಿ ಮಾಡಲಾಗುತ್ತಿದೆ. ಇದು ಶೇ.50 ಕ್ಕಿಂತ ಹೆಚ್ಚಾಗಿರುತ್ತ ದೆ. ಹೀಗಾಗಿ, ಈ ನಿಯಮಗಳಲ್ಲಿ ಏಕರೂಪತೆ ತರಲು ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು. ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾ ಇಲಾಖೆ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣ, ಕೆಐಎಡಿಬಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎಚ್.ಶಿವಶಂಕರ್ ಇದ್ದರು.
ಮಾಹಿತಿ ನಮೂದಿಸಿ: ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ರಾಜ್ಯದ ಹಲವೆಡೆ ಭೂಮಿ ಲಭ್ಯತೆ ಇದೆ. ಅಲ್ಲದೆ ಸಾಕಷ್ಟು ಪ್ರಮಾಣ ದಲ್ಲಿ ಇದರ ಅಭಿವೃದ್ಧಿಯೂ ಆಗಿದೆ. ಆದರೆ, ಇದರ ಬಗ್ಗೆ ಕೈಗಾರಿಕೋದ್ಯಮಿಗಳಿಗೆ ಸರಿಯಾಗಿ ಮಾಹಿತಿ ನೀಡುವ ಕಾರ್ಯ ಮಾಡಲಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕೈಗಾರಿಕಾ ಪ್ರದೇಶಗಳ ಬಗ್ಗೆ ಛಾಯಾಚಿತ್ರ, ವಿಡಿಯೋ, ಮುಖ್ಯ ರಸ್ತೆಯಿಂದ ಅಲ್ಲಿಗೆ ಇರುವ ಸಂಪರ್ಕ ಹೀಗೆ ಎಲ್ಲ ಅಂಶ ಒಳಗೊಂಡ ಮಾಹಿತಿಯನ್ನು ವೆಬ್ ಸೈಟ್‌ನಲ್ಲಿ ನಮೂದಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.
ಹಲವಾರು ಸಂಘ ಸಂಸ್ಥೆಗಳು ಕೆಐಎಡಿಬಿ ಪ್ರದೇಶದಲ್ಲಿ ವಸತಿಗಾಗಿ ಭೂಮಿ ನೀಡುವಂತೆ ಅರ್ಜಿ ಸಲ್ಲಿಸಿವೆ. ಆದರೆ, ಇದುವರೆಗೂ ಆ ಸಂಸ್ಥೆಗಳಿಗೆ ಸೈಟ್‌ಗಳ ಹಂಚಿಕೆ ಆಗಿಲ್ಲ. ಈ ಬಗ್ಗೆ ಈಗಾಗಲೇ ಒಂದು ಸಮಿತಿ ರಚನೆಯಾಗಿದ್ದು, ಹಂಚಿಕೆ ಕ್ರಮ ಚುರುಕುಗೊಳಿಸಲಾಗುವುದು.
-ಜಗದೀಶ್ ಶೆಟ್ಟರ್, ಸಚಿವ