ಸುರತ್ಕಲ್: ದಕ್ಷಿಣ ಕನ್ನಡ ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾಗಿರುವ ಸುರತ್ಕಲ್, ಬೈಕಂಪಾಡಿ, ಪಣಂಬೂರು ಕೈಗಾರಿಕಾ ಪ್ರಾಂಗಣದಲ್ಲಿ ಕಳೆದ ಒಂದು ವರುಷದ ಅವಧಿಯಲ್ಲಿ ಹಲವು ವಿಪತ್ತುಗಳು ಸಂಭವಿ ಸಿವೆ. ಹಲವಾರು ಕಾರ್ಮಿಕರು ಗಾಯಗೊಂಡು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆದಿದ್ದಾರೆ.
ಇದಕ್ಕೆ ಇತ್ತೀಚೆಗಿನ ಸೇರ್ಪಡೆ ಪೆರ್ಮುದೆಯ ಮೀನು ಸಂಸ್ಕರಣ ಘಟಕದಲ್ಲಿ ತ್ಯಾಜ್ಯ ಟ್ಯಾಂಕ್ ಸ್ವತ್ಛಗೊಳಿಸಲು ಇಳಿದ ಪಶ್ಚಿಮ ಬಂಗಾಲ ಮೂಲದ ಕಾರ್ಮಿಕರಲ್ಲಿ ಐವರು ಸಾವಿಗೀಡಾಗಿರುವುದು.
ವಿಶೇಷ ಆರ್ಥಿಕ ವಲಯದಲ್ಲಿ ಈ ಹಿಂದೆ ಸುಗಂಧ ದ್ರವ್ಯ ತಯಾರಿ ಘಟಕದಲ್ಲಿ ಅಗ್ನಿ ಅನಾಹುತ ವಾಗಿತ್ತು. ಆದರೆ ಕಾರ್ಮಿಕರಿಗೆ ಅಪಾಯವಾಗಿರಲಿಲ್ಲ. ಈಗ ಮೀನು ಸಂಸ್ಕರಣ ಘಟಕದಲ್ಲಿ ದುರಂತ ಸಂಭವಿಸಿದೆ.
ಇದೇ ಜನವರಿಯಲ್ಲಿ ಬೈಕಂಪಾಡಿ ಕೈಗಾರಿಕ ಪ್ರದೇಶದಲ್ಲಿರುವ ಮೀನು ಸಂಸ್ಕರಣೆ ಘಟಕದಲ್ಲಿ ರಾಸಾಯನಿಕ ಸೋರಿಕೆಯಾಗಿ 20 ಉದ್ಯೋಗಿಗಳು ಉಸಿರಾಟದ ತೊಂದರೆ ಅನುಭವಿಸಿದ್ದು, ಆಸ್ಪತ್ರೆಗೆ ಸೇರಿಸಿ ತುರ್ತು ಚಿಕಿತ್ಸೆ ಕೊಡಿಸಬೇಕಾಯಿತು. ಅಲ್ಲಿದ್ದ ಬಹು ತೇಕರು ಅನ್ಯ ರಾಜ್ಯದ ವಲಸೆ ಕಾರ್ಮಿಕರು. ಇದೇ ತಿಂಗಳಲ್ಲಿ ಖಾಸಗೀ ಸ್ಪ್ರಿಂಗ್ ಉತ್ಪಾದನ ಘಟಕದಲ್ಲಿದ್ದ ಫರ್ನೇಸ್ ಆಯಿಲ್‌ಗೆ ಬೆಂಕಿ ತಗುಲಿ ಅನಾಹುತ ಸಂಭವಿಸಿ ಕೋಟ್ಯಂತರ ರೂ. ನಷ್ಟವಾಗಿತ್ತು. ಕಾರ್ಮಿಕರು ಜೀವಾಪಾಯದಿಂದ ಪಾರಾಗಿದ್ದರು. ವಾರಗಳ ಹಿಂದೆ ಪಣಂಬೂರು ಬಂದರು ಮುಂಭಾಗದಲ್ಲಿ ಸರಕು ಹೇರಿಕೊಂಡು ಬಂದ ಕಂಟೈನರ್‌ನಲ್ಲಿ ಅಗ್ನಿ ಅನಾಹುತ ಸಂಭವಿಸಿ ಲಕ್ಷಾಂತರ ರೂ. ನಷ್ಟವಾಗಿತ್ತು.
ಉಡುಪಿ ಜಿಲ್ಲೆಯ ಕಾಪುವಿನ ಗುಜರಿ ದಾಸ್ತಾನು ಮಳಿಗೆಯಲ್ಲೂ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಇಬ್ಬರನ್ನು ಸಾವನ್ನಪ್ಪಿದ್ದನ್ನು ಸ್ಮರಿಸಬಹುದಾಗಿದೆ.