Advertisement

ಉಡುಪಿ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿ ಸಭೆ; ಫ‌ರ್ನಿಚರ್‌ ಕ್ಲಸ್ಟರ್‌ಗೆ ಜಾಗ: ಶೆಟ್ಟರ್‌

01:24 AM Nov 07, 2020 | mahesh |

ಉಡುಪಿ: ವ್ಯವಹಾರಕ್ಕೆ ಉತ್ತೇಜನ, ಸ್ಥಳೀಯರಿಗೆ ಉದ್ಯೋಗಾವಕಾಶ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಮರದ ಸಾಮಗ್ರಿಗಳನ್ನು ತಯಾರಿಸುವ “ಫ‌ರ್ನಿಚರ್‌ ಕ್ಲಸ್ಟರ್‌’ ಆರಂಭಿಸಲು ಸೂಕ್ತ ಜಾಗವನ್ನು ಗುರುತಿಸುವಂತೆ ರಾಜ್ಯದ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದರು. ಅವರು ಶುಕ್ರವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಜಿಲ್ಲೆಯ ಕೈಗಾರಿಕಾಭಿವೃದ್ಧಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ರಾಜ್ಯದಲ್ಲಿ ಈಗಾಗಲೇ ಕೈಗಾರಿಕೆ ಅಭಿವೃದ್ಧಿಗಾಗಿ ವಿವಿಧ ಕ್ಲಸ್ಟರ್‌ಗಳನ್ನು ಆರಂಭಿಸಲು ಸೂಚಿಸಲಾಗಿದೆ. ಕೊಪ್ಪಳದಲ್ಲಿ ಆಟಿಕೆ ತಯರಿಕಾ ಕ್ಲಸ್ಟರ್‌ ಮತ್ತು ಯಾದಗಿರಿ-ರಾಯಚೂರಿನಲ್ಲಿ ಫಾರ್ಮಾ ಕ್ಲಸ್ಟರ್‌ ಆರಂಭ ಕುರಿತಂತೆ ಪ್ರಕ್ರಿಯೆಗಳು ನಡೆಯುತ್ತಿವೆ. ಇದರಿಂದ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರೆಯಲಿವೆ. ಕ್ಲಸ್ಟರ್‌ ಆರಂಭಕ್ಕೆ ಸರಕಾರದಿಂದ ಎಲ್ಲ ರೀತಿಯ ಅಗತ್ಯ ನೆರವು ನೀಡಲಾಗುವುದು ಎಂದರು.

ತಜ್ಞರಿಂದ ಪರಿಶೀಲನೆ
ಜಿಲ್ಲೆಯ ನಂದಿಕೂರು ಸೇರಿದಂತೆ ವಿವಿಧ ಕೈಗಾರಿ ಕಾ ಪ್ರದೇಶಗಳಲ್ಲಿ ಉದ್ದಿಮೆ ಆರಂಭಿಸಲು ಕೈಗಾ ರಿಕೆ ಗಳು ಪಡೆದಿರುವ ಭೂಮಿಯು ಸಂಪೂರ್ಣ ಬಳಕೆಯಾಗಿರುವ ಬಗ್ಗೆ ತಜ್ಞರ ತಂಡ ದಿಂದ ಪರಿಶೀಲಿಸಿ, ವರದಿ ಪಡೆಯ ಲಾಗು ವುದು. ಕೈಗಾರಿಕೆ ಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶ ನೀಡುವಂತೆ ಹಾಗೂ ಸರೋಜಿನಿ ಮಹಿಷಿ ವರದಿಯನ್ನು ಸಮರ್ಪಕವಾಗಿ ಅನು ಷ್ಠಾನ ಮಾಡುವಂತೆ ಕೈಗಾರಿಕೋದ್ಯಮಿಗಳಿಗೆ ಸೂಚಿಸಿದರು.

ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕ ವಾತಾವರಣ
ರಾಜ್ಯದಲ್ಲಿ ಕೈಗಾರಿಕೆಗಳು ಒಂದೇ ಕಡೆ ಕೇಂದ್ರೀಕೃತವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಹೊರತುಪಡಿಸಿ ಇತರ ಟೈರ್‌ 1 ಮತ್ತು 2 ನಗರಗಳಲ್ಲಿ ಕೈಗಾರಿಕೆಗಳನ್ನು ಆರಂಭಿಸಲು ಅವಕಾಶ ನೀಡಿದ್ದು, ಅಂತಹ ನಗರಗಳಲ್ಲಿಯೂ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ. ಕಾರವಾರದ ಬೇಲೆಕೇರಿ ಬಂದರನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲಾಗುವುದು. ಕೈಗಾರಿಕಾ ನೀತಿಯಲ್ಲಿ ಹಲವು ಬದಲಾವಣೆ ಮಾಡಿ ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ ಎಂದರು.

ಸಚಿವರಿಗೆ ಮನವಿ
ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಗತ್ಯವಾಗಿರುವ ಕಾಮಗಾರಿಗಳ ಕುರಿತು, ಗೋಡಂಬಿ ಉದ್ಯಮದ ಬೆಳವಣಿಗೆಗೆ ಅಗತ್ಯ ಬೆಂಬಲ ನೀಡುವಂತೆ ಹಾಗೂ ಜಿಲ್ಲೆಯ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕೈಗಾರಿಕೋ ದ್ಯಮಿಗಳು ಸಚಿವರಿಗೆ ಮನವಿ ಸಲ್ಲಿಸಿದರು.

Advertisement

ಮೀನುಗಾರಿಕೆ, ಬಂದರು ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್‌, ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಶಾಸಕ ಕೆ. ರಘುಪತಿ ಭಟ್‌, ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಲ್ಲಾಧಿಕಾರಿ ಜಿ. ಜಗದೀಶ್‌, ಕೆಐಎಡಿಬಿ ಸಿಇಒ ಶಿವಶಂಕರ್‌ ಹಾಗೂ ಜಿಲ್ಲೆಯ ವಿವಿಧ ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.

ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿ
ಸುಜ್ಲಾನ್‌ ಸಂಸ್ಥೆಯು ಸ್ಥಳೀಯರಿಂದ ಕಡಿಮೆ ದರಕ್ಕೆ ಜಾಗ ಖರೀದಿಸಿ ಈಗ ರಿಯಲ್‌ ಎಸ್ಟೇಟ್‌ನಂತೆ ಇತರರಿಗೆ ವ್ಯವಹಾರಕ್ಕೆ ಅವಕಾಶ ಮಾಡಿಕೊಡುತ್ತಿದೆ. ಸುಜ್ಲಾನ್‌, ಯುಪಿಸಿಎಲ್‌ ಕಂಪೆನಿಗಳು ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುತ್ತೇವೆ ಎಂದು ತಿಳಿಸಿ ಈಗ ಎಲ್ಲರನ್ನೂ ಕೆಲಸದಿಂದ ತೆಗೆಯುತ್ತಿದ್ದಾರೆ. ಭೂಮಿ ಕಳೆದುಕೊಂಡ ಕುಟುಂಬದವರಿಗೂ ಉದ್ಯೋಗಾವಕಾಶ ನೀಡುತ್ತಿಲ್ಲ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ ಹಾಗೂ ಶಾಸಕ ಕೆ. ರಘುಪತಿ ಭಟ್‌ ಅವರು ಸಚಿವರ ಗಮನಕ್ಕೆ ತಂದರು. ಸಂಸ್ಥೆಯ ಅಧಿಕಾರಿಗಳಿಂದ ಈ ಬಗ್ಗೆ ವಿವರಣೆ ಕೇಳಿದ ಸಚಿವರು ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಸೂಚಿಸಿದರು. ಅಧಿಕಾರಿಗಳು ಈ ಬಗ್ಗೆ ಕಣ್ಣಿಡುವಂತೆಯೂ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next