Advertisement

ಕೈಗಾರಿಕಾ ನಗರ ಪ್ರಾಧಿಕಾರ ರಚನೆಗೆ ಕ್ರಮ: ಸಚಿವ

11:04 AM Jun 11, 2019 | keerthan |

ಮಂಗಳೂರು: ರಾಜ್ಯದಲ್ಲಿರುವ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಪೂರಕವಾಗಿ ಕೈಗಾರಿಕಾ ನಗರ ಪ್ರಾಧಿಕಾರಗಳ (ಇಂಡಸ್ಟ್ರಿಯಲ್‌ ಟೌನ್‌ಶಿಪ್‌ ಅಥಾರಿಟಿ) ರಚನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಖಾತೆ ಸಚಿವ ಯು.ಟಿ. ಖಾದರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಕೈಗಾರಿಕಾ ಪ್ರಾಧಿಕಾರಗಳ ರಚನೆಗೆ ಅವಕಾಶವಾಗುವ ನಿಟ್ಟಿನಲ್ಲಿ 1976ರ ಪೌರಾಡಳಿತ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಈ ನಿಟ್ಟಿನಲ್ಲಿ ಸೋಮವಾರ ನಗರಾ ಭಿವೃದ್ಧಿ ಸಚಿವರು ಹಾಗೂ ಕೈಗಾರಿಕಾ ಸಚಿವರ ಜತೆ ಚರ್ಚೆ ನಡೆಸಿ ಮುಂದಿನ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ ಮಂಡಿಸಲಾಗುವುದು ಎಂದರು.

ಪ್ರಸ್ತುತ ಕೈಗಾರಿಕಾ ಪ್ರದೇಶಗಳು ಪೌರಾಡಳಿತ ಸಂಸ್ಥೆಗಳ ಅಧೀನದಲ್ಲಿ ಬರುತ್ತಿದ್ದು ಕೈಗಾರಿಕೆಗಳು ಪೌರಾಡಳಿತ ಸಂಸ್ಥೆಗಳಿಗೆ ತೆರಿಗೆ ಪಾವತಿಸುತ್ತವೆ. ಅಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಪೌರಾಡಳಿತ ಸಂಸ್ಥೆಗಳ ಜವಾಬ್ದಾರಿ. ಈ ಕಾರ್ಯ ಆಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಪ್ರಾಧಿಕಾರ ರಚನೆಯಿಂದ ಈ ಗೊಂದಲವನ್ನು ನಿವಾರಣೆಯಾಗಲಿದೆ ಎಂದು ವಿವರಿಸಿದರು.

ಗಡಿಪ್ರದೇಶಗಳ ರಸ್ತೆಗಳಲ್ಲಿ, ಚೆಕ್‌ಪೋಸ್ಟ್‌, ಸಿಸಿಟಿವಿ
ಬೇರೆ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿ ಅಪರಾಧ ಎಸಗಿ ಪರಾರಿಯಾಗುವುದು, ಜಿಲ್ಲೆಯಲ್ಲಿ ಅಪರಾಧ ಎಸಗಿ ಬೇರೆ ರಾಜ್ಯಗಳಿಗೆ ಪರಾರಿಯಾಗುವ ಘಟನೆಗಳು ಹೆಚ್ಚುತ್ತಿವೆ. ಇದನ್ನು ನಿಯಂತ್ರಿಸುವ ಮತ್ತು ದುಷ್ಕರ್ಮಿಗಳನ್ನು ಗುರುತಿಸಿ ಶೀಘ್ರ ಬಂಧನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಗಡಿಪ್ರದೇಶಗಳ ಒಳರಸ್ತೆಗಳಲ್ಲಿ ಚೆಕ್‌ಪೋಸ್ಟ್‌ ಹಾಗೂ ಸಿಸಿ ಕೆಮರಾ ಅಳವಡಿಸಲು ನಿರ್ಧರಿಸಲಾಗಿದೆ. ಚೆಕ್‌ಪೋಸ್ಟ್‌ ಸ್ಥಾಪಿಸಲು 6 ತಿಂಗಳ ಹಿಂದೆಯೇ ಡಿಸಿಗೆ ಸೂಚನೆ ನೀಡಿದ್ದು ಅವರು ಈ ದಿಸೆಯಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಚೆಕ್‌ಪೋಸ್ಟ್‌ ಹಾಗೂ ಸಿಸಿಟಿವಿಗಳನ್ನು ಅಳವಡಿಸಲು ಈಗಾಗಲೇ ಗಡಿಪ್ರದೇಶದ ಒಳರಸ್ತೆಗಳನ್ನು ಗುರುತಿಸುವ ಕಾರ್ಯ ನಡೆದಿದೆ ಎಂದು ಸಚಿವರು ತಿಳಿಸಿದರು.

ಕೈಗಾರಿಕಾ ನಗರ ಪ್ರಾಧಿಕಾರ ಸ್ವಾಯತ್ತ ಸಂಸ್ಥೆ
ಕೈಗಾರಿಕಾ ನಗರ ಪ್ರಾಧಿಕಾರ ಒಟ್ಟು 8 ಸದಸ್ಯರನ್ನು ಒಳಗೊಂಡ ಒಂದು ಸ್ವಾಯತ್ತ ಸಂಸ್ಥೆಯಾಗಿರುತ್ತದೆ. ಐವರು ಸದಸ್ಯರನ್ನು ಕೈಗಾರಿಕೆಗಳು ನೇಮಕ ಮಾಡುತ್ತವೆ. ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರಗಳ ತಲಾ ಓರ್ವ ಸದಸ್ಯರಿರುತ್ತಾರೆ. ಪೌರಾಡಳಿತ ಸಂಸ್ಥೆಗಳಿಂದ, ಕೈಗಾರಿಕಾ ಇಲಾಖೆಯಿಂದ ತಲಾ ಓರ್ವ ಸದಸ್ಯರನ್ನು ನೇಮಕ ಮಾಡಲಾಗುವುದು. ಕೈಗಾರಿಕಾ ಪ್ರದೇಶದಲ್ಲಿ ಸಂಗ್ರಹವಾಗುವ ತೆರಿಗೆಗಳಲ್ಲಿ ಶೇ. 30 ಭಾಗ ಸಂಬಂಧಪಟ್ಟ ಪೌರಾಡಳಿತ, ಸ್ಥಳೀಯಾಡಳಿತ ಸಂಸ್ಥೆಗಳಿಗೆ ಹಾಗೂ ಶೇ. 70 ಭಾಗ ಕೈಗಾರಿಕಾ ನಗರ ಪ್ರಾಧಿಕಾರಕ್ಕೆ ಹೋಗುತ್ತದೆ ಎಂದು ಸಚಿವ ಯು.ಟಿ. ಖಾದರ್‌ ವಿವರಿಸಿದರು.

Advertisement

ಮಳೆಗಾಲ ಎದುರಿಸಲು ಸಿದ್ಧ
ಮಂಗಳೂರು: ಮಳೆಗಾಲದಲ್ಲಿ ಕಡಲ್ಕೊರೆತ, ಭೂಕುಸಿತ,  ಕೃತಕ ನೆರೆ ಮತ್ತು ಇತರ ಪರಿಸ್ಥಿತಿ ನಿಭಾಯಿಸಲು ದ.ಕ. ಜಿಲ್ಲಾಡಳಿತ ಸಜ್ಜಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ತಿಳಿಸಿದರು. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆಗಾಲ ಸಿದ್ಧತೆಗೆ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಗೆ ಈಗಾಗಲೇ ಎನ್‌ಡಿಆರ್‌ಎಫ್‌ ತಂಡ ಆಗಮಿಸಿದ್ದು, ಸದ್ಯದ ಮಟ್ಟಿಗೆ ಎನ್‌ಎಂಪಿಟಿಯಲ್ಲಿ ತಂಡದ ಸದಸ್ಯರು ಇದ್ದಾರೆ. ಮಳೆಗಾಲದಲ್ಲಿ ಅಗತ್ಯ ಇರುವ ಕಡೆಗೆ ಅವರನ್ನು ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಮಾಹಿತಿ ನೀಡಿದರು.

ಗೃಹ ರಕ್ಷಕ ದಳದ ಜಿಲ್ಲಾ ಕಮಾಡೆಂಟ್‌ ಡಾ| ಮುರಳೀ ಮೋಹನ ಚೂಂತಾರು ಮಾತನಾಡಿ, ಜಿಲ್ಲೆಯಲ್ಲಿ ಗೃಹರಕ್ಷಕ ದಳದ 14 ಯೂನಿಟ್‌ಗಳಿದ್ದು, 1 ಸಾವಿರ ಗೃಹರಕ್ಷಕರು ಇದ್ದಾರೆ. ಈ ಪೈಕಿ 650 ಮಂದಿ ಪ್ರತಿ ದಿನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಳೆಗಾಲದಲ್ಲಿ ಸಂಭಾವ್ಯ ವಿಪತ್ತು ಎದುರಿಸಲು ಗೃಹರಕ್ಷಕರು ಸಿದ್ಧರಾಗಿದ್ದಾರೆ. 24 ಮಂದಿ ಬೀಚ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಉಪ್ಪಿನಂಗಡಿ ಸಹಿತ ನೆರೆ ಸಂಭವಿಸಬಹುದಾದ ಪ್ರದೇಶಗಳಿಗೆ ಗೃಹರಕ್ಷಕರನ್ನು ನಿಯೋಜಿಸಲಾಗುವುದು ಎಂದರು.

ಮೆಸ್ಕಾಂ ಮತ್ತು ಲೋಕೋಪಯೋಗಿ ಇಲಾಖೆ ಮರ ಕಡಿಯಲು ಅನುಮತಿ ಕೇಳಿದರೆ ತತ್‌ಕ್ಷಣ ಪರವಾನಿಗೆ ನೀಡಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಚಿವ ಖಾದರ್‌ ಸೂಚಿಸಿದರು. ಉಳ್ಳಾಲದ ಸಮ್ಮರ್‌ಸ್ಯಾಂಡ್‌ ಬೀಚ್‌ ಬಳಿ ಕಡಲು ಕೊರೆತ ತಡೆಗೆ ಕ್ರಮ ಕೈಗೊಳ್ಳುವಂತೆ ಬಂದರು ಇಲಾಖೆ ಅಧಿಕಾರಿಗೆ ಆದೇಶ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next