Advertisement

Industrial ಪ್ರದೇಶಗಳಿಗೆ 290 ದಶಲಕ್ಷ ಲೀಟರ್‌ ನೀರು ಅಗತ್ಯ: ಎಂ.ಬಿ. ಪಾಟೀಲ್‌

10:12 PM Feb 05, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿರುವ ಕೈಗಾರಿಕಾ ಪ್ರದೇಶಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಇದನ್ನು ಬಗೆಹರಿಸಲು ನಿತ್ಯ 290 ದಶಲಕ್ಷ ಲೀಟರ್‌ (ಎಂಎಲ್‌ಡಿ) ನೀರಿನ ಅಗತ್ಯವಿದೆ ಎಂದು ಸಚಿವ ಎಂ.ಬಿ.ಪಾಟೀಲ್‌ ಅಭಿಪ್ರಾಯಪಟ್ಟರು.

Advertisement

ಕೈಗಾರಿಕಾ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಖನಿಜ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾರ್ಯಸಾಧುವಾದ ಪರಿಹಾರೋಪಾಯಗಳ ಬಗ್ಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪಾಟೀಲ್‌, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಜಿಲ್ಲೆಗಳ ಕೈಗಾರಿಕಾ ಪ್ರದೇಶಗಳು ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿವೆ ಎಂದರು.

ಇದಲ್ಲದೆ, ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಪ್ರತಿದಿನ 45 ಎಂಎಲ್‌ಡಿಯಷ್ಟು ಕುಡಿಯುವ ನೀರು ಅಗತ್ಯವಿದೆ. ಇದನ್ನು ಹಿಡಕಲ್‌ ಜಲಾಶಯದಿಂದ ಪೂರೈಸಬಹುದು. ಹಾಗೆಯೇ, ವಿಜಯಪುರ ಕೈಗಾರಿಕಾ ಪ್ರದೇಶಕ್ಕೆ ಕೂಡ ಕೃಷ್ಣಾ ಜಲಾಶಯದಿಂದ ನಿತ್ಯವೂ ಇಷ್ಟೇ ಪ್ರಮಾಣದ ಕುಡಿಯುವ ನೀರು ಪೂರೈಸಬೇಕಾಗಿದೆ.

ಕಲಬುರಗಿ ಕೈಗಾರಿಕಾ ಪ್ರದೇಶಕ್ಕೆ ಕೃಷ್ಣಾ ಮತ್ತು ಭೀಮಾ ನದಿಗಳಿಂದ ದಿನವೂ 7 ಎಂಎಲ್‌ ಡಿ, ಬಳ್ಳಾರಿ ಕೈಗಾರಿಕಾ ಪ್ರದೇಶಕ್ಕೆ ತುಂಗಭದ್ರಾ ಅಣೆಕಟ್ಟೆಯಿಂದ 13 ಎಂಎಲ್‌ ಡಿ, ರಾಯಚೂರು ಕೈಗಾರಿಕಾ ಪ್ರದೇಶಕ್ಕೆ ಕೃಷ್ಣಾ ನದಿಯಿಂದ 13 ಎಂಎಲ್‌ ಡಿಯಷ್ಟು ಕುಡಿಯುವ ನೀರು ಅಗತ್ಯವಿದೆ. ಒಟ್ಟಾರೆ ಪ್ರತಿನಿತ್ಯ 290 ಎಂ.ಎಲ್.ಡಿ ನೀರು ಈ ಜಿಲ್ಲೆಗಳಿಗೆ ಬೇಕಾಗಿದೆ. ಇದನ್ನು ಬಗೆಹರಿಸದೆ ಹಾಗೆಯೇ ಬಿಟ್ಟರೆ ರಾಜ್ಯದ ಕೈಗಾರಿಕಾ ಬೆಳವಣಿಗೆಯೇ ಹಿನ್ನಡೆ ಕಾಣಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

Advertisement

ಹಳೆ ಮೈಸೂರು ಭಾಗದಲ್ಲಿರುವ ತುಮಕೂರು, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಕೈಗಾರಿಕಾ ಪ್ರದೇಶಗಳಲ್ಲಿ ಈಗಾಗಲೇ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಅದನ್ನು ಕೈಗಾರಿಕಾ ಉದ್ದೇಶಕ್ಕೆ ಬಳಸಲಾಗುತ್ತಿದೆ. ಆದರೆ, ಇಲ್ಲೆಲ್ಲ ಕುಡಿಯುವ ನೀರಿನ ವಿಪರೀತ ಅಭಾವವಿದೆ. ಆದ್ದರಿಂದ, ಎಲ್ಲೆಲ್ಲಿ ಎಷ್ಟು ನೀರಿನ ಲಭ್ಯತೆ ಇದೆ, ಇಲ್ಲಿಗೆಲ್ಲ ಯಾವ್ಯಾವ ಮೂಲಗಳಿಂದ ಕುಡಿಯುವ ನೀರನ್ನು ಪೂರೈಸಬಹುದು ಎಂದು ಕಂಡುಕೊಳ್ಳಬೇಕು. ಈ ಸಂಬಂಧವಾಗಿ ಇನ್ನೊಂದು ವಾರದಲ್ಲಿ ಮತ್ತೂಂದು ಸಭೆ ನಡೆಸಲಾಗುವುದು ಎಂದು ಅವರು ನುಡಿದರು.
ಕೈಗಾರಿಕೆಗಳಿಗೆ ಕುಡಿಯುವ ನೀರು ಪೂರೈಕೆ ಪ್ರಾಥಮಿಕ ಜವಾಬ್ದಾರಿಯಾಗಿದೆ. ರಾಜ್ಯದ ಉದ್ಯಮಗಳ ಬೆಳವಣಿಗೆಯ ದೃಷ್ಟಿಯಿಂದ ಇದು ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿದೆ. ಇದನ್ನು ವಿವಿಧ ಇಲಾಖೆಗಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಪಾಟೀಲ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next