Advertisement

ನೋಡುಗರಿಗೆ ಇಲ್ಲುಂಟು ಸಮ್‌-ಆಹಾರ

04:45 PM Feb 09, 2018 | |

ಹಾಗಾದರೆ, ಇಷ್ಟು ದಿನ ನನ್ನನ್ನು ಬಕ್ರಾ ಮಾಡಿದರಾ? ಹಾಗಂತ ಅನಿಸೋಕೆ ಶುರುವಾಗುತ್ತದೆ ಅವನಿಗೆ. ಏಕೆಂದರೆ, ಇಷ್ಟು ದಿನಗಳ ಕಾಲ ಅವನು, ತನ್ನಿಂದ ಆ ಹುಡುಗಿಗೆ ತೊಂದರೆಯಾಗಿದೆ ಅಂತಲೇ ಅಂದುಕೊಂಡಿರುತ್ತಾನೆ. ಆದರೆ, ಕ್ರಮೇಣ ಆ ಪ್ರಕರಣವನ್ನು ಬೆನ್ನತ್ತಿ ಹೋಗುತ್ತಿದ್ದಂತೆಯೇ ಅವನಿಗೆ ಏನೇನೋ ಸತ್ಯಗಳು ಗೊತ್ತಾಗುತ್ತಾ ಹೋಗುತ್ತದೆ. ಒಂದು ದೊಡ್ಡ ಷಡ್ಯಂತ್ರದಲ್ಲಿ ತಾನು ಸಿಕ್ಕಿಕೊಂಡಿದ್ದೀನಿ ಅಂತ ಅನಿಸುವುದರ ಜೊತೆಗೆ, ತಾನು ಬಕ್ರ ಆಗಿದ್ದೀನಿ ಅಂತ ಸ್ಪಷ್ಟವಾಗುತ್ತದೆ.

Advertisement

ಅಲ್ಲಿಂದ ಶುರು. ತನ್ನಂತೆ ಷಡ್ಯಂತ್ರಕ್ಕೆ ಸಿಲುಕಿದವರನ್ನು ಬಚಾವ್‌ ಮಾಡುವುದರ ಜೊತೆಗೆ ತನ್ನನ್ನು ಷಡ್ಯಂತ್ರಕ್ಕೆ ಸಿಲುಕಿಸಿದವರನ್ನು ಬಯಲು ಮಾಡುವುದಕ್ಕೆ ಹೊರಡುತ್ತಾನೆ. “ಸಂಹಾರ’ ತರಹದ ಕಥೆಗಳನ್ನು ಹೇಳಬಾರದು. ಇಂತಹ ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಗಳನ್ನು ಓದಬೇಕು ಅಥವಾ ನೋಡಬೇಕು. ಏಕೆಂದರೆ, ಇಲ್ಲಿ ಕಥೆಯೇ ಹಾಗಿದೆ. ಒಂದೂರಲ್ಲಿ ಒಬ್ಬ ಅಂಧ ಇದ್ದ, ಅವನಿಗೊಬ್ಬ ಹುಡುಗಿ ಸಿಕ್ಕಳು, ಅವರಿಬ್ಬರ ಮಧ್ಯೆ ಲವ್‌ ಆಯಿತು,

ಅಷ್ಟರಲ್ಲಿ ಅವಳೊಂದು ಸಮಸ್ಯೆಗೆ ಸಿಕ್ಕಿಕೊಂಡಳು, ಅವಳ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಹೋಗಿ ಅವನು ಇನ್ನಾವುದೋ ಸಮಸ್ಯೆಗೆ ಸಿಕ್ಕಿಕೊಂಡ … ಅಂತೆಲ್ಲಾ ಹೇಳುತ್ತಾ ಹೋಗುವುದು ಕಷ್ಟ. ಇಲ್ಲಿ 10-20 ನಿಮಿಷಕ್ಕೊಮ್ಮೆ ಕಥೆಗೊಂದು ಟ್ವಿಸ್ಟ್‌ ಸಿಗುತ್ತಿರುತ್ತದೆ. ಹಾಗಾಗಿ ಒಂದೇ ಉಸಿರನಲ್ಲಿ ಚಿತ್ರದ ಕಥೆ ಹೀಗಾಗುತ್ತದೆ ಎಂದು ಹೇಳುವುದು ಕಷ್ಟವೇ. ಹಾಗಾಗಿ ಈ ತರಹದ ಕಥೆಗಳನ್ನು ಓದಬೇಕು ಅಥವಾ ನೋಡಬೇಕು.

ಇನ್ನೂ ಸರಿಯಾಗಿ ಹೇಳಬೇಕೆಂದರೆ, ಇದೊಂದು ಇಂಗ್ಲೀಷ್‌ ಥ್ರಿಲ್ಲರ್‌ ಕಾದಂಬರಿಗಳ ಶೈಲಿಯ ಚಿತ್ರ. ಸಿಡ್ನಿ ಶೆಲ್ಡಾನ್‌ ಮುಂತಾದವರ ಕೃತಿಗಳನ್ನು ಓದಿದ್ದರೆ, ಚಿತ್ರ ಹೇಗಿರಬಹುದು ಎಂಬ ಕಲ್ಪನೆ ಸಿಗುತ್ತದೆ. ಆ ಮಟ್ಟಿನಲ್ಲಿ ಈ ಚಿತ್ರದ ನಿಜವಾದ ಹೀರೋ ಎಂದರೆ ಅದು ಕಥೆ. ತಮಿಳಿನ “ಅದೇ ಕಂಗಳ್‌’ ಎಂಬ ಚಿತ್ರದ ರೀಮೇಕ್‌ ಈ “ಸಂಹಾರ’. “ಅದೇ ಕಂಗಳ್‌’ ದೊಡ್ಡ ಹಿಟ್‌ ಚಿತ್ರವೇನಲ್ಲ. ಆದರೆ, ಮೆಚ್ಚುಗೆ ಪಡೆದ ಸಿನಿಮಾ.

ಆ ಚಿತ್ರವನ್ನು ಹೆಚ್ಚು ಬದಲಾಯಿಸದೇ, ಕನ್ನಡಕ್ಕೆ ತಂದಿದ್ದಾರೆ ಗುರು ದೇಶಪಾಂಡೆ. ಮೊದಲೇ ಹೇಳಿದಂತೆ ಇಲ್ಲಿ ಕಥೆ ಮತ್ತು ಚಿತ್ರಕಥೆಯೇ ಈ ಚಿತ್ರದ ಜೀವಾಳ ಮತ್ತು ಪ್ರೇಕ್ಷಕರನ್ನು ಹಿಡಿದು ಕೂರಿಸುವುದಕ್ಕೆ ಆ ಟ್ವಿಸ್ಟುಗಳೇ ಸಾಕು. ಹಾಗಾಗಿ ಆ ಚಿತ್ರವನ್ನು ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಕನ್ನಡದ ನೇಟಿವಿಟಿಗೆ ಕೂರಿಸಿದ್ದಾರೆ ಅವರು. ಒಳ್ಳೆಯ ಕಥೆ ಪ್ಲಸ್‌ ಈಗಾಗಲೇ ಆ ಕಥೆಯನ್ನಿಟ್ಟುಕೊಂಡು ಒಂದು ಚಿತ್ರ ಬಂದಿರುವುದರಿಂದ, ಗುರುಗೆ ಹೆಚ್ಚು ಕೆಲಸವಿಲ್ಲ.

Advertisement

ಇಲ್ಲಿ ಅವರಿಗಿಂಥ ಹೆಚ್ಚು ಜವಾಬ್ದಾರಿ ಇರುವುದು ಸಂಕಲನಕಾರ ಕೆ.ಎಂ. ಪ್ರಕಾಶ್‌ ಅವರ ಹೆಗಲ ಮೇಲೆ. ಪ್ರಕಾಶ್‌ ಎಂದಿನಂತೆ ಚಿತ್ರವನ್ನು ಅಚ್ಚುಕಟ್ಟಾಗಿ ಎಡಿಟ್‌ ಮಾಡಿ ಕೊಟ್ಟಿದ್ದಾರೆ. ಅದರಲ್ಲೂ ಕೊನೆಯ 20 ನಿಮಿಷಗಳು ಚಿತ್ರದ ಹೈಲೈಟ್‌ ಎಂದರೆ ತಪ್ಪಿಲ್ಲ. ಅದಕ್ಕೂ ಮುನ್ನ ಏನೇ ಅದ್ಭುತ ಟ್ವಿಸ್ಟುಗಳು ಇದ್ದರೂ, ಎಷ್ಟೇ ಚುರುಕಾಗಿ ಚಿತ್ರದ ಸಂಕಲನ ಮಾಡಿದ್ದರೂ, ಚಿತ್ರ ಸ್ವಲ್ಪ ನಿಧಾನವೇ.

ಕಥೆಗಾರ, ಸಂಕಲನಕಾರರ ಜೊತೆಗೆ ಹೇಳಲೇಬೇಕಾದ ಇನ್ನೊಬ್ಬರೆಂದರೆ, ಅದು ಹರಿಪ್ರಿಯಾ. ಇದುವರೆಗೂ ನೋಡದ ಒಂದು ಪಾತ್ರದಲ್ಲಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಇಂಥದ್ದೊಂದು ಪಾತ್ರವನ್ನು ಬಹಳಷ್ಟು ನಟಿಯರು ಒಪ್ಪುವುದಿಲ್ಲ. ಹರಿಪ್ರಿಯಾ ಒಪ್ಪಿರುವುದಷ್ಟೇ ಅಲ್ಲ, ಬಹಳ ಚೆನ್ನಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಕೊನೆಯ ಅರ್ಧ ಗಂಟೆಯಲ್ಲಿ ಹರಿಪ್ರಿಯಾ ಮಿಕ್ಕೆಲ್ಲರನ್ನೂ ಸೈಡ್‌ ಮಾಡಿಬಿಡುತ್ತಾರೆ.

ಚಿರು ಎಂದಿನಂತೆ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರಾಜಾ ಹುಲಿಯಾಗಿ ಚಿಕ್ಕಣ್ಣ ಅಲ್ಲಲ್ಲಿ ಕಚುಗುಳಿ ಇಡುತ್ತಲೇ ಪಾತ್ರವನ್ನು ಸರಿದೂಗಿಸಿದ್ದಾರೆ. ಕಾವ್ಯಾ ಶೆಟ್ಟಿ, ತಬಲಾ ನಾಣಿ, ಅರುಣ ಬಾಲರಾಜ್‌ ಎಲ್ಲರೂ ತಮ್ಮ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ಒಂದೆರೆಡು ಅರ್ಧ ಹಾಡುಗಳು ಬಿಟ್ಟರೆ ಮಿಕ್ಕಂತೆ ಹಾಡುಗಳಿಲ್ಲ. ಆದರೆ, ರವಿ ಬಸ್ರೂರು ಎಂದಿನಂತೆ ಹಿನ್ನೆಲೆ ಸಂಗೀತದಲ್ಲಿ ಗೆಲ್ಲುತ್ತಾರೆ. ಜಗದೀಶ್‌ ವಾಲಿ ಛಾಯಾಗ್ರಹಣದಲ್ಲಿ ತಪ್ಪು ಹುಡುಕುವುದು ಕಷ್ಟ.

ಚಿತ್ರ: ಸಂಹಾರ
ನಿರ್ದೇಶನ: ಗುರು ದೇಶಪಾಂಡೆ
ನಿರ್ಮಾಣ: ವೆಂಕಟೇಶ್‌ ಮತ್ತು ಸುಂದರ್‌ ಕಾಮರಾಜ್‌
ತಾರಾಗಣ: ಚಿರಂಜೀವಿ ಸರ್ಜಾ, ಹರಿಪ್ರಿಯಾ, ಕಾವ್ಯಾ ಶೆಟ್ಟಿ, ಚಿಕ್ಕಣ್ಣ, ತಬಲಾ ನಾಣಿ, ಯಶ್‌ ಶೆಟ್ಟಿ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next