ಹೊಸದಿಲ್ಲಿ: ಶೀನಾ ಬೋರಾ ಮರ್ಡರ್ ಕೇಸಿನಲ್ಲಿ ಜೈಲು ಪಾಲಾಗಿರುವ ಮುಖ್ಯ ಆರೋಪಿ ಇಂದ್ರಾಣಿ ಮುಖರ್ಜಿ, ಪ್ರಕರಣದ ಸಹ-ಆರೋಪಿಯಾಗಿರುವ ಪತಿ ಪೀಟರ್ ಮುಖರ್ಜಿ ಜತೆಗಿನ ತನ್ನ ಹದಿನಾರು ವರ್ಷಗಳ ದಾಂಪತ್ಯವನ್ನು ಪರಸ್ಪರ ಒಪ್ಪಿಗೆಯೊಂದಿಗೆ ಸೌಹಾರ್ದಯುತವಾಗಿ ಕೊನೆಗೊಳಿಸುವ ಸಲುವಾಗಿ ಡೈವೋರ್ಸ್ ನೊಟೀಸ್ ಕೊಟ್ಟಿರುವುದಾಗಿ ವರದಿಯಾಗಿದೆ.
ಮುಂಬಯಿಯ ಆರ್ಥರ್ ರೋಡ್ ಜೈಲಿನಲ್ಲಿರುವ ಪೀಟರ್ ಮುಖರ್ಜಿಗೆ ಡೈವೋರ್ಸ್ ನೊಟೀಸನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಲಾಗಿದೆ. ಪೀಟರ್ ಮುಖರ್ಜಿ ಅವರು ಈ ನೊಟೀಸನ್ನು ಕೋರ್ಟ್ ಆವರಣದಲ್ಲಿ ಕೈಯಾರೆ ಪಡೆದುಕೊಳ್ಳಲು ನಿರಾಕರಿಸಿದ್ದರು ಎನ್ನಲಾಗಿದೆ.
ಎ.25ರಂದು ಕಳುಹಿಸಲ್ಪಟ್ಟಿರುವ ಈ ನೊಟೀಸಿನಲ್ಲಿ ಇಂದ್ರಾಣಿ ಮುಖರ್ಜಿ ಅವರು ಇದೇ ಎ.30ರೊಳಗಾಗಿ ಪರಸ್ಪರ ಒಪ್ಪಿತವಾಗಿರುವ ಪೂರ್ವ ಶರತ್ತುಗಳ ಪ್ರಕಾರ ದಾಂಪತ್ಯವನ್ನು ಸೌಹಾರ್ದಯುತವಾಗಿ ಕೊನೆಗೊಳಿಸಲು ಕೋರಿದ್ದಾರೆ.
ಪರಸ್ಪರರ ದಾಂಪತ್ಯವನ್ನು ಉಳಿಸಿಕೊಳ್ಳುವ ಸಂಧಾನ ಯತ್ನಗಳು ವಿಫಲವಾಗಿರುವುದರಿಂದ ಪರಸ್ಪರರು ತಮ್ಮ ಜೀವನದಲ್ಲಿನ್ನು ಯಾವುದೇ ಹಸ್ತಕ್ಷೇಪ ನಡೆಸುವುದಿಲ್ಲವೆಂತಲೂ ಉಭಯತರ ಯಾವುದೇ ಸ್ಥಿರ-ಚರಾಸ್ತಿಗಳ ಮೇಲೆ ಯಾರೊಬ್ಬರೂ ತಮ್ಮ ಹಕ್ಕನ್ನು ಪ್ರತಿಪಾದಿಸುವುದಿಲ್ಲವೆಂತಲೂ ಒಪ್ಪಿಕೊಂಡಿದ್ದಾರೆ.
ಇಂದ್ರಾಣಿ ಮುಖರ್ಜಿ ಅವರು ತಮ್ಮ ಈ ಡೈವೋರ್ಸ್ ನೊಟೀಸನ್ನು ತಮ್ಮ ವಕೀಲರಾಗಿರುವ ಎಡಿತ್ ಡೇ ಮೂಲಕ ಕಳುಹಿಸಿದ್ದಾರೆ. ಪೀಟರ್ ಅವರ ವಕೀಲ ಅಮಿತ್ ಘಾಗ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಇಂದ್ರಾಣಿ ಮತ್ತು ಪೀಟರ್ ಮುಖರ್ಜಿ ಅವರಿಗೆ ಸ್ಪೇನ್ ಮತ್ತು ಲಂಡನ್‌ನಲ್ಲಿ ಸ್ಥಿರಾಸ್ತಿ ಇದ್ದು ಅನೇಕ ಬ್ಯಾಂಕುಗಳಲ್ಲಿ ನಿರಖು ಠೇವಣಿ ಮತ್ತು ಹೂಡಿಕೆಗಳು ಇವೆ.