Advertisement

ಇಂದ್ರಾಳಿ ಜಂಕ್ಷನ್‌: ವಾಹನ ಸವಾರರ ಪರದಾಟ

06:34 PM Dec 22, 2021 | Team Udayavani |

ಉಡುಪಿ: ಉಡುಪಿ ಮತ್ತು ಮಣಿಪಾಲ ಸದಾ ವಾಹನ ನಿಬಿಡತೆಯಿಂದ ಕೂಡಿದ ಒಂದು ಜೀವನಾಡಿ ರಸ್ತೆ. ಇದರ ನಡುವಿರುವ ಇಂದ್ರಾಳಿ ಜಂಕ್ಷನ್‌ನ ರೈಲ್ವೇ ಮೇಲ್ಸೇತುವೆಯಲ್ಲಿ ಸವಾರರು ತತ್ತರಿಸಿ ಹೋಗುತ್ತಿದ್ದಾರೆ.

Advertisement

ಕಳೆದ ಎರಡು ವರ್ಷಗಳಿಂದ ಇಲ್ಲಿನ ಸೇತುವೆ, ರಸ್ತೆ ಸಹಿತ 90 ಮೀಟರ್‌ ಉದ್ದದ ಸಂಚಾರ ಜನರನ್ನು ಹೈರಾಣಾಗಿಸಿದೆ. ರೈಲ್ವೇ ಮೇಲ್ಸೇತುವೆ ಮತ್ತು ರಸ್ತೆ ವಿಸ್ತ ರ ಣೆ ಕಾಮಗಾರಿ ಹಿನ್ನೆಲೆಯಲ್ಲಿ ಸವಾರರು ರೋಸಿ ಹೋಗಿದ್ದು, ಉತ್ತಮ ಗುಣಮಟ್ಟದ ರಸ್ತೆಗೆ ಹಲವಾರು ವರ್ಷಗಳಿಂದ ಕಾಯುವಂಥ ದುಃಸ್ಥಿತಿ ಜನರದ್ದಾಗಿದೆ. ಇಂದ್ರಾಳಿ ಜಂಕ್ಷನ್‌ ಹೊಂಡ, ಗುಂಡಿಗಳಿಂದ ಕೂಡಿದ್ದು, ಸವಾರರು ಜೀವ ಭಯದಿಂದಲೇ ಸಂಚರಿಸಬೇಕಿದೆ.

ವಿಳಂಬಕ್ಕೆ ಏನು ಕಾರಣ ?
ಹೆದ್ದಾರಿ ಇಲಾಖೆ ಮೂಲಗಳು ತಿಳಿಸುವ ಪ್ರಕಾರ ಈಗಿರುವ ಸೇತುವೆ 33 ಮೀಟರ್‌ ಉದ್ದ ಇದ್ದು 12 ಮೀಟರ್‌ ಅಗಲವಿದೆ. ಇದೇ ರೀತಿ 5 ಮೀಟರ್‌ಗೆ ಹೆಚ್ಚಿಸಿ ಹೊಸ ಸೇತುವೆ ನಿರ್ಮಾಣಕ್ಕೆ ಅನುಮೋದನೆಗಾಗಿ ಕೊಂಕಣ ರೈಲ್ವೇಗೆ ಹೆದ್ದಾರಿ ಇಲಾಖೆ ಪ್ರಸ್ತಾವ ನೀಡಿತ್ತು. ನಮ್ಮ ಜಾಗದಲ್ಲಿರುವ 48 ಮೀಟರ್‌ ವ್ಯಾಪ್ತಿ ಹೊರಗಡೆ ಸೇತುವೆ ನಿರ್ಮಿಸಬೇಕು ಎಂದು ಕೊಂಕಣ ರೈಲ್ವೇ ತಿಳಿಸಿತ್ತು. “ಒಟ್ಟಾರೆ ಅನುಮೋದನೆ ಸಹಿತ ಇನ್ನಿತರ ಪ್ರಕ್ರಿಯೆಗೆ ಎರಡೂವರೆ ವರ್ಷ ನಮ್ಮನ್ನು ಕಾಯಿಸಿದ್ದಾರೆ. ಕೊನೆಗೆ 52 ಮೀಟರ್‌ ಸೇತುವೆ ನಿರ್ಮಾಣಕ್ಕೆ ಅನುಮೋದನೆ ದೊರ ಕಿ ದೆ. ಇದಕ್ಕೆ 6 ಕೋಟಿ ರೂ. ಹೆಚ್ಚುವರಿ ಅನುದಾನ ಅಗತ್ಯವಿದ್ದು, ಮತ್ತೆ ಇದು ಕೇಂದ್ರ ಸಚಿವಾಲಯದಲ್ಲಿ ಪರಿಶೀಲನೆ, ಹಣಕಾಸು ಅನು ಮೋದನೆ ಪಡೆಯಬೇಕು. ಈ ಎಲ್ಲ ಹಂತಗಳಲ್ಲಿ ಮತ್ತಷ್ಟು ವಿಳಂಬಕ್ಕೆ ಕಾರಣವಾಯಿತು’ ಎಂದು ಹೆದ್ದಾರಿ ಇಲಾಖೆ ಎಂಜಿನಿಯರ್‌ಗಳು ತಿಳಿಸಿದ್ದಾರೆ.

ತಿಂಗಳೊಳಗೆ ಕಾಮಗಾರಿ ಪೂರ್ಣ
ಈಗಿರುವ ಹಳೆ ಸೇತುವೆ, ಎರಡು ಬದಿ ಕೊನೆಯಲ್ಲಿ ಸೇರಿಸಿ ಒಂದು ಲೇನ್‌ ಸಂಪೂರ್ಣ ವ್ಯವಸ್ಥಿತವಾಗಿ ಜೋಡಿಸಲಾಗುವುದು. ಇನ್ನೊಂದು ಬದಿಯ ಸೇತುವೆ ನಿರ್ಮಾಣವಾಗುವ ವರೆಗೆ ಇದನ್ನೇ ತಾತ್ಕಾಲಿಕ ದ್ವಿಪಥ ರಸ್ತೆಯಾಗಿ ಮಾಡಲಾಗುತ್ತದೆ. ಇದರಿಂದ ಇಂದ್ರಾಳಿ ಜಂಕ್ಷನ್‌ ಸಮಸ್ಯೆಗೆ ಮುಕ್ತಿ ಸಿಗಲಿದೆ. ಒಂದು ತಿಂಗಳ ಒಳಗೆ ಕಾಮಗಾರಿ ಮುಗಿಸುತ್ತೇವೆ ಎಂದು ಹೆದ್ದಾರಿ ಇಲಾಖೆ ಎಂಜಿನಿಯರ್‌ ಭರವಸೆ ನೀಡಿದ್ದಾರೆ.

ಹೊರ ಬಂದ ಸೇತುವೆ ಸರಳು
ಈಗಿನ ಇಂದ್ರಾಳಿ ಸೇತುವೆ ಎರಡು ಬದಿ ರೈಲ್ವೇ ಸೇತುವೆ ಕಾಂಕ್ರೀಟ್‌ನ ಮೇಲ್ಪದರ ಕಿತ್ತು ಹೋಗಿ ಹೊಂಡದ ನಡುವೆ ಸರಳುಗಳು ಕಾಣುತ್ತಿವೆ. ಈ ಸರಳಿನ ಮೇಲೆ ವಾಹನಗಳು ಅಡ್ಡಾದಿಡ್ಡಿ ಸಂಚರಿಸಬೇಕು. ಇಂದ್ರಾಳಿ ಕಡೆಯಿಂದ ಬರುವಾಗ ಕಲ್ಲುಗಳ ರಾಶಿ ತುಂಬಿರುವ ಇಳಿಕೆ ರಸ್ತೆಯಾಗಿದೆ. ಇದೇ ರೀತಿ ಎಡಬದಿಗೆ ಸಂಪರ್ಕ ಕಲ್ಪಿಸುವ ಏಳೆಂಟು ಅಡಿ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಈ ಎರಡು ಜಾಗದಲ್ಲಿ ಸಂಚರಿಸುವುದು ಸವಾರರಿಗೆ ಸಂಕಷ್ಟವಾಗಿದೆ. ಒಂದು ಬದಿಯಲ್ಲಿ ಘನವಾಹನಗಳ ಓಡಾಟ, ಇನ್ನೊಂದೆಡೆ ಈ ಕಚ್ಚಾ ರಸ್ತೆಯಲ್ಲಿ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ.

Advertisement

ಬೆಳಗ್ಗೆ-ಸಂಜೆ ಸವಾರರು ಹೈರಾಣ
ಮಣಿಪಾಲ-ಉಡುಪಿ ಕಡೆಗೆ ಸಂಚರಿಸುವ ಎಲ್ಲ ವಾಹನಗಳ ಸವಾರರಿಗೂ ಈ ಜಂಕ್ಷನ್‌ನಿಂದ ಪಾರಾಗಿ ಸಾಗುವುದು ಸಾಹಸಯಾತ್ರೆ ಅನುಭವ. ಬೆಳಗ್ಗೆ ಮತ್ತು ಸಂಜೆ ಅವಧಿಯಲ್ಲಿ ಶಾಲೆ, ಕಾಲೇಜು ವಿದ್ಯಾ ರ್ಥಿ ಗ ಳು, ಉದ್ಯೋಗಸ್ಥರ ಓಡಾಟ ಹೆಚ್ಚಿರುವ ವೇಳೆ ವಾಹನ ದಟ್ಟ ಣೆಯೂ ಹೆಚ್ಚಿ ರುತ್ತದೆ. ಬೆಳಗ್ಗೆ 8ರಿಂದ 10.30ರ ವರೆಗೆ ಮತ್ತು ಸಂಜೆ 4ರಿಂದ 6.30ರ ವರೆಗೆ ಪ್ರವಾಸಿ ವಾಹನಗಳು ಸೇರಿದಂತೆ ಲಘು ಮತ್ತು ಘನ ವಾಹನಗಳ ವಿಪರೀತ ಓಡಾಟ ಇರುತ್ತದೆ. ಸ್ಕೂಟರ್‌, ದ್ವಿಚಕ್ರ ವಾಹನ ಸವಾರರಂತೂ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕು. ಗುಂಡಿ, ಉಬ್ಬು, ತಗ್ಗು ನಿಯಂತ್ರಿಸಲಾಗದೆ ಸಾಕಷ್ಟು ಮಂದಿ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಪೆಟ್ಟು ಮಾಡಿಕೊಂಡಿದ್ದಾರೆ. ಅಲ್ಲದೆ ಗುಂಡಿಗಳಿಂದ ಸಂಚಾರ ಸಮಸ್ಯೆ ಉದ್ಭವಿಸಿದೆ.

ಶಾಲಾ ಮಕ್ಕಳಿಗೆ ತೊಂದರೆ
ಒಟ್ಟಾರೆ ಅರೆಬರೆ ಕಾಮಗಾರಿಯಿಂದ ವಾಹನ ಸವಾರರಿಗೆ ಅಷ್ಟೇ ಅಲ್ಲದೆ ಸಮೀಪದ ಶಾಲೆಯ ನೂರಾರು ವಿದ್ಯಾರ್ಥಿಗಳಿಗೂ ಇದು ಸಮಸ್ಯೆಯಾಗಿ ಪರಿಣಮಿಸಿದೆ. ಬಸ್‌ಗೆ, ಸಂಚಾರಕ್ಕೆ, ಆಚೀಚೆ ನಡೆದಾಡುವಾಗಲೂ ಇದೇ ಜಂಕ್ಷನ್‌ ಬಳ ಸಬೇಕು. ಈ ಪರಿಸರದಲ್ಲಿ ಬೆಳಗ್ಗೆ, ಸಂಜೆ ವಿಪರೀತ ಧೂಳಿನ ವಾತಾವರಣದಿಂದ ಕೂಡಿರುತ್ತದೆ.
ಮಕ್ಕಳು ನಿತ್ಯ ಶಾಲೆಯಿಂದ ಮನೆಗೆ, ಮನೆಯಿಂದ ಶಾಲೆಗೆ ಹೋಗುವಾಗ ಧೂಳಿನ ಅಭಿಷೇಕವಾಗುತ್ತದೆ ಎಂದು ಹೆತ್ತವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.

ಅಧಿಕಾರಿಗಳಿಗೆ ಸೂಚನೆ
ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಅರ್ಧದಲ್ಲಿ ನಿಂತಿದ್ದು, ಇನ್ನೊಂದು ಅನುಮೋದನೆಗೆ ಬಾಕಿ ಇದೆ. ರೈಲ್ವೇ ಸೇತುವೆ ಕಾಮಗಾರಿ ಮತ್ತು ಈಗಿರುವ ರಸ್ತೆ ವ್ಯವಸ್ಥಿತವಾಗಿಸಲು ಹೆದ್ದಾರಿ ಅಧಿಕಾರಿಗಳಿಗೆ ಶೀಘ್ರ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದೇವೆ.
– ಕೂರ್ಮಾರಾವ್‌ ಎಂ.,ಜಿಲ್ಲಾಧಿಕಾರಿ, ಉಡುಪಿ

ಆಯುಕ್ತರ ಅನುಮೋದನೆ
ಇಂದ್ರಾಳಿ ರೈಲ್ವೇ ಸೇತುವೆ ಬಗ್ಗೆ ರೈಲ್ವೇ ಸುರಕ್ಷತಾ ಆಯುಕ್ತರು ಯೋಜನೆಯನ್ನು ಪರಿಶೀಲಿಸಿ ವರ್ಷದ ಹಿಂದೆಯೇ ಅನುಮೋದನೆ ನೀಡಿದ್ದಾರೆ. ಈ ಬಗ್ಗೆ ರೈಲ್ವೇ ಇಲಾಖೆ ಕಡೆಯಿಂದ ವಿಳಂಬ ವಾಗಿಲ್ಲ.
– ಸುಧಾ ಕೃಷ್ಣಮೂರ್ತಿ, ಸಾರ್ವಜನಿಕ ಸಂಪರ್ಕ ಅಧಿಕಾರಿ, ಕೊಂಕಣ ರೈಲ್ವೇ

– ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next