Advertisement

ಶಕೀಲ ಕುರಿತು ಇಂದ್ರಜಿತ್‌ ಬಯೋಪಿಕ್‌

11:46 AM Aug 29, 2018 | |

ಶಕೀಲ ಕುರಿತು ಇಂದ್ರಜಿತ್‌ ಲಂಕೇಶ್‌ ಹಿಂದಿ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಕಳೆದ ಒಂದು ತಿಂಗಳಲ್ಲಿ ತೀರ್ಥಹಳ್ಳಿ ಮತ್ತು ಬೆಂಗಳೂರಿನಲ್ಲಿ ಸದ್ದಿಲ್ಲದೆ ಅರ್ಧ ಚಿತ್ರದ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ ಇಂದ್ರಜಿತ್‌. ಸದ್ಯಕ್ಕೆ ನಗರದ ಟೌನ್‌ ಹಾಲ್‌ನಲ್ಲಿ ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣ ಮಾಡುತ್ತಿದ್ದಾರೆ ಇಂದ್ರಜಿತ್‌ ಲಂಕೇಶ್‌. ಈ ಭಾಗದ ಚಿತ್ರೀಕರಣದಲ್ಲಿ ರಿಚಾ ಚಡ್ಡಾ, ಪಂಕಜ್‌ ತ್ರಿಪಾಠಿ, ಎಸ್ತರ್‌ ನರೋನ್ಹಾ ಮುಂತಾದವರು ಅಭಿನಯಿಸುತ್ತಿದ್ದಾರೆ. ಈ ಪೈಕಿ ಶಕೀಲ ಪಾತ್ರದಲ್ಲಿ ರಿಚಾ ಚಡ್ಡಾ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

ಕನ್ನಡದ ಕೆಲವು ನಿರ್ದೇಶಕರು ಈ ಹಿಂದೆ ಹಿಂದಿ ಸಿನಿಮಾಗಳನ್ನು ಮಾಡಿದ್ದಾರೆ. ಆದರೆ, ಕಳೆದ 20 ವರ್ಷಗಳಿಂದ ಯಾರೊಬ್ಬರೂ ಹಿಂದಿ ಚಿತ್ರವನ್ನು ನಿರ್ದೇಶಿಸಿರಲಿಲ್ಲ. ಈಗ ಇಂದ್ರಜಿತ್‌ ಅವರು ಹಿಂದಿಯಲ್ಲಿ ಶಕೀಲ ಅವರ ಬಯೋಪಿಕ್‌ ಮಾಡುತ್ತಿದ್ದಾರೆ. “ಈ ಚಿತ್ರ ಮಾಡುವ ಅವಕಾಶ ಬಂದಾಗ, ಸಂತೋಷ ಮತ್ತು ಗೊಂದಲ ಎರಡೂ ಒಟ್ಟಿಗೆ ಆಯಿತು. ಕೊನೆಗೆ ಈ ಚಿತ್ರವನ್ನು ಒಪ್ಪಿಕೊಂಡೆ.

ಈ ಚಿತ್ರದ ಮೂಲಕ ನಾನು ಮಾತ್ರ ಹಿಂದಿಗೆ ಹೋಗುತ್ತಿಲ್ಲ. ಛಾಯಾಗ್ರಾಹಕ ಸಂತೋಷ್‌ ರೈ ಪಾತಾಜೆ ಮತ್ತು ಸಂಗೀತ ನಿರ್ದೇಶಕ ವೀರ್‌ ಸಮರ್ಥ್ ಅವರೂ ಈ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ಇನ್ನು ಎಸ್ತರ್‌ ನರೋನ್ಹಾ ಸಹ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಚಿತ್ರವನ್ನು ಮೂರ್‍ನಾಲ್ಕು ಭಾಷೆಗಳಲ್ಲಿ ಒಟ್ಟಿಗೇ ಮಾಡುತ್ತಾರೆ. ಇದು ಹಾಗಲ್ಲ. ಪೂರ್ಣಪ್ರಮಾಣದ ಬಾಲಿವುಡ್‌ ಸಿನಿಮಾ’ ಎನ್ನುತ್ತಾರೆ ಇಂದ್ರಜಿತ್‌.

ಎಲ್ಲಾ ಸರಿ, ಶಶಿಕಲಾ ಅವರ ಕುರಿತಾದ ಚಿತ್ರವೇ ಏಕೆ ಎಂಬ ಪ್ರಶ್ನೆ ಬರಬಹುದು. ಅದಕ್ಕೆ ಇಂದ್ರಜಿತ್‌ ಸ್ಪಷ್ಟನೆ ಹೀಗಿದೆ. “ಇದು ಶಕೀಲ ಒಬ್ಬರ ಕಥೆಯಲ್ಲ. ಪ್ರತಿಯೊಬ್ಬ ಮಹಿಳೆಯ ಕಥೆ. ಈ ಪುರುಷ ಪ್ರಧಾನ ಸಮಾಜದಲ್ಲಿ, ಅದರಲ್ಲೂ ಸಿನಿಮಾ ಕ್ಷೇತ್ರದಲ್ಲಿ ಏನೆಲ್ಲಾ ಕಷ್ಟ ಅನುಭವಿಸುತ್ತಾಳೆ, ಹೀರೋಗಿಂಥ ಬೆಳೆದಾಗ ಏನೆಲ್ಲಾ ಸಮಸ್ಯೆ ಎದುರಿಸುತ್ತಾಳೆ ಎಂಬುದನ್ನು ಚಿತ್ರದ ಮೂಲಕ ಹೇಳುತ್ತಿದ್ದೇವೆ. ಶಕೀಲ ಅವರ ಕುರಿತು ಪುಸ್ತಕಗಳು ಬಂದಿವೆ.

ಅವರೇ ಕೆಲವು ವಿಷಯಗಳನ್ನು ಮಾತನಾಡಿದ್ದಾರೆ. ಆದರೆ, ನಾವು ಈ ಚಿತ್ರ ಮಾಡುವುದಕ್ಕಿಂತ ಮುನ್ನ ಅವರನ್ನೇ ಕೂರಿಸಿ ಮಾತನಾಡಿಸಿದ್ದೇವೆ. ಅವರು ಮಾತನಾಡಿದ್ದನ್ನು ಶೂಟ್‌ ಮಾಡಿದ್ದೇವೆ. ಈ ಮಾತುಕತೆಯಲ್ಲಿ ಹಲವು ಎಕ್ಸ್‌ಕ್ಲೂಸಿವ್‌ ಎನ್ನುವಂತಹ ವಿಷಯಗಳು ಸಿಕ್ಕಿವೆ. ಜೀವನದಲ್ಲಿ ಅವರು ಅನುಭವಿಸಿದ ಕಷ್ಟ, ಸುಖ, ಯಶಸ್ಸು ಅವೆಲ್ಲವೂ ಇಲ್ಲಿ ಬರಲಿದೆ. ಸಂಪೂರ್ಣ ಹಕ್ಕುಗಳನ್ನು ತೆಗೆದುಕೊಂಡೇ ಚಿತ್ರ ಮಾಡುತ್ತಿದ್ದೇನೆ.

Advertisement

ತೀರ್ಥಹಳ್ಳಿಯಲ್ಲಿ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಅವರೂ ಬಂದಿದ್ದರು’ ಎನ್ನುತ್ತಾರೆ ಇಂದ್ರಜಿತ್‌. ಈ ಚಿತ್ರದಲ್ಲಿ ಶಕೀಲ ಅವರ ಚಿತ್ರಜೀವನವಷ್ಟೇ ಅಲ್ಲ, ಬಾಲ್ಯ ಸಹ ಬರುತ್ತದಂತೆ. “ಇಲ್ಲಿ ಶಕೀಲ ಅವರ ಬಾಲ್ಯ, ಫ್ಯಾಮಿಲಿ ಎಲ್ಲವೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಚಿತ್ರಜೀವನ ಇರಲಿದೆ. ವರ್ಷವೊಂದಕ್ಕೆ ಹಲವು ಚಿತ್ರಗಳಲ್ಲಿ ನಟಿಸಿದವರು ಅವರು. ಎಷ್ಟು ಬಿಝಿ ಇದ್ದರೆಂದರೆ ಕೆಲವೊಮ್ಮೆ ಒಂದು ಚಿತ್ರಕ್ಕೆ ಎರಡು ಅಥವಾ ಮೂರು ದಿನಗಳಿಗಿಂಥ ಹೆಚ್ಚಾಗಿ ಕಾಲ್‌ಶೀಟ್‌ ಕೊಡಲಾಗುತ್ತಿರಲಿಲ್ಲ.

ಇನ್ನು ಅವರ ಸಿನಿಮಾಗಳು ಕೋಟಿ ಕೋಟಿ ದುಡ್ಡು ಮಾಡಿದೆ. ಅವೆಲ್ಲವೂ ಈ ಚಿತ್ರದಲ್ಲಿದೆ. ಮುಂಚೆ ಈ ಚಿತ್ರವನ್ನು ಕೇರಳದಲ್ಲಿ ಚಿತ್ರೀಕರಿಸಬೇಕು ಅಂದುಕೊಂಡಿದ್ದೆವು. ಆದರೆ, ಪ್ರವಾಹದ ಕಾರಣ ಅಲ್ಲಿ ಚಿತ್ರೀಕರಣ ಮಾಡಲಾಗಲಿಲ್ಲ. ಕೊನೆಗೆ ತೀರ್ಥಹಳ್ಳಿಯಲ್ಲೇ ಚಿತ್ರೀಕರಣ ಮಾಡಿದ್ದೇವೆ’ ಎನ್ನುತ್ತಾರೆ ಇಂದ್ರಜಿತ್‌. ಇನ್ನು ಈ ಚಿತ್ರವು ಸಿಲ್ಕ್ ಸ್ಮಿತಾ ಅವರ “ದಿ ಡರ್ಟಿ ಪಿಕ್ಚರ್‌’ ಶೈಲಿಯಲ್ಲಿರುತ್ತದಾ ಎಂದರೆ, ಅದು ಬಯೋಪಿಕ್‌ ಆಗಿರಲಿಲ್ಲ,

ಇದು ನಿಜವಾದ ಬಯೋಪಿಕ್‌ ಎನ್ನುತ್ತಾರೆ ಇಂದ್ರಜಿತ್‌. “ನಾನು “ದಿ ಡರ್ಟಿ ಪಿಕ್ಚರ್‌’ ನೋಡಿದ್ದೇನೆ. ಚಿತ್ರ ಇಷ್ಟ ಆಯ್ತು. ಸಿಲ್ಕ್ ಸ್ಮಿತಾ ಎಷ್ಟೇ ದೊಡ್ಡ ಹೆಸರು ಮಾಡಿದರೂ, ದೊಡ್ಡ ಹೀರೋಯಿನ್‌ ಆಗಿರಲಿಲ್ಲ. ಅವರು ಹೆಚ್ಚಾಗಿ ಕಾಣಿಸಿಕೊಂಡಿದ್ದು ಐಟಂ ಡ್ಯಾನ್ಸ್‌ಗಳಲ್ಲೇ. ಆದರೆ, ಶಕೀಲ ಹಾಗಲ್ಲ. ಅವರೊಬ್ಬ ಟಾಪ್‌ ಹೀರೋಯಿನ್‌ ಆಗಿದ್ದರು. ಅಲ್ಲಿ ಸಾಕಷ್ಟು ಸ್ವಾತಂತ್ರ್ಯ ತೆಗೆದುಕೊಂಡು ಚಿತ್ರಕಥೆ ಮಾಡಿದ್ದರು. ಇಲ್ಲಿ ಹಾಗಿಲ್ಲ. ಇದು ಅವರ ಬಯೋಪಿಕ್‌ ಆಗಲಿದೆ’ ಎನ್ನುತ್ತಾರೆ ಇಂದ್ರಜಿತ್‌.

Advertisement

Udayavani is now on Telegram. Click here to join our channel and stay updated with the latest news.

Next