Advertisement

ಬೊಕ್ಕ ಪಟ್ನ ಇಂದ್ರಜಿತ್ ಹತ್ಯೆ ಪ್ರಕರಣ: 9 ಮಂದಿ ಆರೋಪಿಗಳನ್ನು ಬಂಧಿಸಿದ ಪೊಲೀಸರು

06:48 PM Nov 28, 2020 | Mithun PG |

ಮಂಗಳೂರು: ಬೊಕ್ಕ ಪಟ್ನ ಬೋಟ್ ಯಾರ್ಡ್ ಬಳಿ ಬರ್ಬರವಾಗಿ ಹತ್ಯೆಯಾದ ಇಂದ್ರಜಿತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ನ. 25ರ ಬುಧವಾರ ತಡರಾತ್ರಿ ಇಂದ್ರಜಿತ್  ಎಂಬಾತನನ್ನು  ಅಪರಿಚಿತರು ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈತನ ವಿರುದ್ಧ  ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.  ನ.26  ಗುರುವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದ್ದು, ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಬೋಳೂರಿನ ಮೋಕ್ಷಿತ್, ಉಲ್ಲಾಸ್ ಕಾಂಚನ್ (20), ಆಶಿಕ್ (23), ರಾಕೇಶ್ (28), ಗೌತಮ್ (25), ಕೌಶಿಕ್ (25), ನಿತಿನ್ (25), ಜಗದೀಶ್ ಅಲಿಯಾಸ್ ತಲವಾರ್ ಜಗ್ಗ(53), ಶರಣ್ ಅಲಿಯಾಸ್ ಚಾನು (19) ಎಂದು ಗುರುತಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್ ಐಪಿಎಸ್ ಮಾರ್ಗದರ್ಶನದಲ್ಲಿ, ಹಾಗೂ ಡಿಸಿಪಿ ಮತ್ತು ಸಹಾಯಕ ಪೊಲೀಸ್ ಆಯುಕ್ತರು ಕೇಂದ್ರ ಉಪವಿಭಾಗದವರ ನೇರ ಮೇಲ್ವಿಚಾರಣೆಯಲ್ಲಿ, ಪಿಐ ಜ್ಯೋತಿರ್ಲಿಂಗ ಸಿ ಹೊನಕಟ್ಟಿ ಅವರ ನೇತೃತ್ವದಲ್ಲಿ, ಅಧಿಕಾರಿ ಮತ್ತು ಠಾಣಾ ಸಿಬ್ಬಂದಿಗಳು ಹಾಗೂ ಪಿ.ಐ ಸಿಸಿಬಿ ಮತ್ತು ಅವರ ಸಿಬ್ಬಂದಿಯವರ ಸಹಾಯದಿಂದ ಶಕ್ತಿನಗರ ಸಮೀಪವಿರುವ ರಾಜೇಶ್ವರಿ ನಗರದಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು.

ಘಟನೆಯ ಹಿನ್ನಲೆ:

Advertisement

ಸುಮಾರು 6 ವರ್ಷಗಳ ಹಿಂದೆ ಪ್ರಕರಣದ ಆರೋಪಿಯಲ್ಲೊಬ್ಬನಾದ ತಲವಾರ್ ಜಗ್ಗನ ಮಗನಾದ ಸಂಜಯ್ ಎಂಬಾತನನ್ನು ಮಂಕಿ ಸ್ಟ್ಯಾಂಡ್ ಗ್ಯಾಂಗ್ ನವರು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಹೊಗೈಬೈಲ್ ಕಲ್ಲುರ್ಟಿ ದೇವಾಸ್ಥಾನದ ಬಳಿ ಕೊಚ್ಚಿ ಕೊಲೆಗೈದಿದ್ದರು.

ಇದರ ಪ್ರತಿಕಾರ ತೀರಿಸಿಕೊಳ್ಳಲು ಮಂಕಿಸ್ಟ್ಯಾಂಡ್ ರೌಡಿ ಗ್ಯಾಂಗ್ ನೊಂದಿಗೆ ಗುರುತಿಸಿಕೊಂಡಿದ್ದ ಇಂದ್ರಜಿತ್ ನನ್ನು ಕೊಲೆ ಮಾಡಲು ಆರೋಪಿಗಳು ಸಂಚನ್ನು ರೂಪಿಸಿ, ಅದರಂತೆ ಆತ ರಾತ್ರಿ ವೇಳೆ ತಂಗುತ್ತಿದ್ದ ಕರ್ನಲ್ ಗಾರ್ಡನ್ ಬೋಟ್ ರಿಪೇರಿ ಯಾರ್ಡ್ ನಲ್ಲಿ ಮಾರಾಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

ಇದೀಗ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಮುಂದಿನ ವಿಚಾರಣೆ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next