Advertisement

8ರಿಂದ ಇಂದ್ರಧನುಷ್‌ ಅಭಿಯಾನ

03:58 PM May 05, 2017 | Team Udayavani |

ಕಲಬುರಗಿ: ಇಂದ್ರಧನುಷ್‌ ಕಾರ್ಯಕ್ರಮದಡಿ ಧನುರ್ವಾಯು, ದಢಾರ್‌, ನಾಯಿಕೆಮ್ಮು, ಗಳಗಂಡ, ಕ್ಷಯ, ಕಾಮಾಲೆ ಮತ್ತು ಪೋಲಿಯೋ ರೋಗಗಳ ವಿರುದ್ಧ ಲಸಿಕೆ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್‌ ಹೇಳಿದರು. ಗುರುವಾರ ಕಲಬುರಗಿಯಲ್ಲಿ ಇಂದ್ರಧನುಷ್‌ ಅಭಿಯಾನ-2017ರ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಇಂದ್ರಧನುಷ್‌ ಮಿಷನ್‌ ವಿಶೇಷ ಲಸಿಕಾ ಅಭಿಯಾನದ ನಾಲ್ಕನೇ ಹಂತದಡಿ ಲಸಿಕೆ ವಂಚಿತ ಎರಡು ವರ್ಷದೊಳಗಿನ 12812 ಮತ್ತು 2830 ಗರ್ಭಿಣಿಯರಿಗೆ ಏಳು ಮಾರಕ ರೋಗಗಳ ವಿರುದ್ಧ ಮೊದಲನೇ ಸುತ್ತಿನ ಲಸಿಕೆ ನೀಡುವ ಕಾರ್ಯಕ್ರಮ ಮೇ 8ರಿಂದ 19ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ ಕಳೆದ 2015ರಲ್ಲಿ ಮೊದಲ ಹಂತದ ನಾಲ್ಕು ಸುತ್ತುಗಳಲ್ಲಿ ವಿವಿಧ ಲಸಿಕೆಗಳಿಂದ ವಂಚಿತರಾದ 0-2 ವರ್ಷದೊಳಗಿನ 34669 ಮಕ್ಕಳಿಗೆ ಹಾಗೂ 8981 ಗರ್ಭಿಣಿಯರಿಗೆ ಲಸಿಕೆ ಹಾಕಲಾಗಿದೆ. 2016ರಲ್ಲಿ ನಡೆದ ಮೂರನೇ ಹಂತದಲ್ಲಿ 18395 ಮಕ್ಕಳಿಗೆ, 3640 ಗರ್ಭಿಣಿಯರಿಗೆ ಲಸಿಕೆ ನೀಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲಾಗಿದೆ ಎಂದರು.

ಇಂದ್ರಧನುಷ್‌ ಲಸಿಕಾ ಕಾರ್ಯಕ್ರಮಕ್ಕಾಗಿ ಒಟ್ಟು 1295 ಇಂದ್ರಧನುಷ್‌ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಭಿಯಾನಕ್ಕಾಗಿ ಜಿಲ್ಲೆಯಾದ್ಯಂತ 1030 ಇಂದ್ರಧನುಷ್‌ ಲಸಿಕಾ ಕೇಂದ್ರಗಳನ್ನು ಹಾಗೂ 50 ಲಸಿಕಾ ಸಂಚಾರಿ ತಂಡಗಳನ್ನು ರಚಿಸಲಾಗಿದೆ. 

ಇಂದ್ರಧನುಷ್‌ ಮಿಷನ್‌ ಅಭಿಯಾನಕ್ಕಾಗಿ ಆಯ್ಕೆ ಮಾಡಲಾದ ಮಕ್ಕಳ ಮತ್ತು ಗರ್ಭಿಣಿಯರ ಪೈಕಿ ಶೇ. 60ರಷ್ಟು ಕಲಬುರಗಿ ನಗರದಲ್ಲಿರುವುದರಿಂದ ನಗರದಲ್ಲಿ ಲಸಿಕಾಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಕಡ್ಡಾಯವಾಗಿ ಮಕ್ಕಳನ್ನು ಲಸಿಕೆ ಹಾಕಿಸಲುಕರೆದುಕೊಂಡು ಬರಬೇಕೆಂದು ತಿಳಿಸಿದರು. 

Advertisement

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಶಿವರಾಜ ಸಜ್ಜನಶೆಟ್ಟಿ, ಜಿಲ್ಲಾ ಸರ್ವೆಲೆನ್ಸ್‌ ಅಧಿಕಾರಿ ಡಾ| ಅನಿಲಕುಮಾರ ತಾಳಿಕೋಟಿ, 

ಜಿಲ್ಲಾ ಲಸಿಕಾಧಿಕಾರಿ ಡಾ| ರುಧ್ರವಾಡಿ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ| ಕಿರಣ ದೇಸಾಯಿ, ಭಾರತೀಯ ಮಕ್ಕಳ ತಜ್ಞರ ಸಮಿತಿ ಅಧ್ಯಕ್ಷ ಡಾ| ಸಂದೀಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ, ತಾಲೂಕು ಆರೋಗ್ಯಾಧಿಕಾರಿಗಳು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next