Advertisement

ಇಂಡೋ-ರಷ್ಯಾ ಸಮರಾಭ್ಯಾಸ

06:00 AM Oct 21, 2017 | |

ನವದೆಹಲಿ: ರಕ್ಷಣಾ ವಲಯದಲ್ಲಿ ಪರಸ್ಪರ ಸಹಕಾರದ ಪ್ರತೀಕವಾಗಿ ಭಾರತ ಹಾಗೂ ರಷ್ಯಾ ದೇಶಗಳು ಇದೇ ಮೊದಲ ಬಾರಿಗೆ 10 ದಿನಗಳ ಜಂಟಿ ಸಮರಾಭ್ಯಾಸವನ್ನು ಶುಕ್ರವಾರದಿಂದ ಆರಂಭಿಸಿವೆ. ರಷ್ಯಾದ ವ್ಲಾದಿವೊಸ್ಟೋಕ್‌ನಲ್ಲಿ ಈ ಸಮರಾಭ್ಯಾಸ ಶುರುವಾಗಿದ್ದು, ಇದರಲ್ಲಿ ಉಭಯ ದೇಶಗಳ ಭೂ ಸೇನೆ, ವಾಯು ಸೇನೆ, ನೌಕಾಪಡೆಯ ಸೈನಿಕರು ಪಾಲ್ಗೊಂಡಿದ್ದಾರೆ.

Advertisement

ಭಾರತೀಯ ಸೇನೆಯಿಂದ 450 ಸಿಬ್ಬಂದಿ ಹಾಗೂ ರಷ್ಯಾದ ಕಡೆಯಿಂದ 1000ಕ್ಕೂ ಹೆಚ್ಚು ಸೇನಾ ತುಕಡಿಗಳು ಪಾಲ್ಗೊಂಡಿವೆ. ಉಭಯ ದೇಶಗಳ ಗಡಿಗಳಲ್ಲಿ ಆಗುತ್ತಿರುವ ಅಕ್ರಮ ಒಳನುಸುಳುವಿಕೆಯಂಥ ಪ್ರಯತ್ನಗಳನ್ನು ನಿಗ್ರಹಿಸುವ ಬಗ್ಗೆ ಈ ಸಮರಾಭ್ಯಾಸದಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಶುಕ್ರವಾರ ಬೆಳಗ್ಗೆ ವ್ಲಾದಿವೊಸ್ಟೋಕ್‌ನಲ್ಲಿ ಸಮರಾಭ್ಯಾಸಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ, ಎರಡೂ ರಾಷ್ಟ್ರಗಳ ಭೂ ಸೇನೆ, ವಾಯು ಸೇನೆ ಹಾಗೂ ನೌಕಾಪಡೆಗಳ ಸೈನಿಕರು ಅಕ್ಕಪಕ್ಕದ ಗುಂಪುಗಳಾಗಿ ನಿಂತು ಆಕರ್ಷಕ ಪಥಸಂಚಲನ ನಡೆಸಿದರು. ಬಳಿಕ ಭಾರತೀಯ ಯೋಧರಿಂದ ಸಾಂಪ್ರದಾಯಿಕ ಮಾರ್ಷಲ್‌ ಆರ್ಟ್ಸ್ ಪ್ರದರ್ಶನ ನಡೆಯಿತು.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ರಕ್ಷಣಾ ಸಚಿವಾಲಯ, “ಭಾರತ ಹಾಗೂ ರಷ್ಯಾಗಳು ತಮ್ಮ ಗಡಿ ಭಾಗಗಳಲ್ಲಿ ಒಂದೇ ತೆರನಾದ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಮರಾಭ್ಯಾಸ ನಡೆಸಲಾಗುತ್ತಿದೆ. ಇದು ಎರಡೂ ರಾಷ್ಟ್ರಗಳ ಸೈನಿಕರು ಈ ಸಮಸ್ಯೆಗಳನ್ನು ಎದುರಿಸುವಲ್ಲಿ ಪಡೆದಿರುವ ಅನುಭವ, ಜ್ಞಾನವನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಗಡಿಯಲ್ಲಿನ ಸವಾಲುಗಳನ್ನು ಎದುರಿಸಲು ಎರಡೂ ದೇಶಗಳ ಸೈನಿಕರಿಗೆ ಹೆಚ್ಚಿನ ಆತ್ಮವಿಶ್ವಾಸ ಸಿಗಲಿದೆ’ ಎಂದು ಆಶಿಸಿದೆ.

ಸಮರಾಭ್ಯಾಸದ ಮಹತ್ವ
ಗಡಿ ಪ್ರದೇಶಗಳಲ್ಲಿ ನೆರೆಯ ರಾಷ್ಟ್ರಗಳಾದ ಚೀನಾ ಹಾಗೂ ಪಾಕಿಸ್ತಾನ ರಾಷ್ಟ್ರಗಳು ರಗಳೆ ತಗೆಯುತ್ತಿರುವ ಹಿನ್ನೆಲೆಯಲ್ಲಿ ಭಾರತ, ತನ್ನ ಮಿತ್ರ ರಾಷ್ಟ್ರಗಳೊಂದಿಗೆ ಇಂಥ ಜಂಟಿ ಸಮರಾಭ್ಯಾಸಕ್ಕೆ ಇತ್ತೀಚೆಗೆ ಭಾರಿ ಮಹತ್ವ ನೀಡುತ್ತಿದೆ. ಇದು ತನ್ನ ಸೇನಾ ತಾಕತ್ತು ಹಾಗೂ ಮಿತ್ರ ರಾಷ್ಟ್ರಗಳ ಕಡೆಯಿಂದ ತನಗಿರುವ ಸೇನಾ ಬೆಂಬಲವನ್ನು ವಿಶ್ವ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನವೂ ಆಗಿದೆ. ಕೆಲವು ತಿಂಗಳು ಹಿಂದೆ, ಡೋಕ್ಲಾಂನಲ್ಲಿ ಚೀನಾದ ಸೈನಿಕರು ಭಾರತಕ್ಕೆ ಸಡ್ಡು ಹೊಡೆದು ನಿಂತಾಗಲೂ ಭಾರತ, ಅಮೆರಿಕದ ಸೈನ್ಯದೊಂದಿಗೆ ಕೇರಳದ ಮಲಬಾರ್‌ನಲ್ಲಿ ಜಂಟಿ ಸಮರಾಭ್ಯಾಸ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

Advertisement

ಅಂಕಿ-ಅಂಶ:
10 : ಹತ್ತು ದಿನಗಳ ಕಾಲ ನಡೆಯಲಿರುವ ಭಾರತ, ರಷ್ಯಾ ಸಮರಾಭ್ಯಾಸ
450 : ಸಮರಾಭ್ಯಾಸದಲ್ಲಿ ಭಾರತದ ಕಡೆಯಿಂದ ಪಾಲ್ಗೊಳ್ಳುತ್ತಿರುವ ಸೈನಿಕರು
1,000 ಪ್ಲಸ್‌ : ರಷ್ಯಾದಿಂದ ಪಾಲ್ಗೊಳ್ಳುತ್ತಿರುವ ತುಕಡಿಗಳ ಸಂಖ್ಯೆ

Advertisement

Udayavani is now on Telegram. Click here to join our channel and stay updated with the latest news.

Next