ಇಂದೋರ್(ಮಧ್ಯಪ್ರದೇಶ): ರಾಮನವಮಿ ಆಚರಣೆ ವೇಳೆ ಸ್ಟೆಪ್ ವೆಲ್ (ಮೆಟ್ಟಿಲುಗಳ ಬಾವಿ) ಮೇಲೆ ಹಾಸಿದ್ದ ಸಿಮೆಂಟ್ ಹಾಸು ಕುಸಿದು ಬಿದ್ದ ಪರಿಣಾಮ ಸುಮಾರು 25 ಭಕ್ತರು ಬಾವಿಯೊಳಗೆ ಬಿದ್ದ ಘಟನೆ ಮಧ್ಯಪ್ರದೇಶದ ಇಂದೋರ್ ನ ಶ್ರೀಬೇಲೆಶ್ವರ್ ಮಹಾದೇವ್ ಜುಲೇಲಾಲ್ ದೇವಸ್ಥಾನದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಯಕ್ಷಗಾನ, ಕೋಲ ನಡೆಸಬಹುದೇ..? ಚುನಾವಣಾ ನೀತಿ ಸಂಹಿತೆ ಬಗ್ಗೆ ದ.ಕನ್ನಡ ಡಿಸಿ ಮಾಹಿತಿ
ರಾಮನವಮಿ ಹಿನ್ನೆಲೆಯಲ್ಲಿ ಪಟೇಲ್ ನಗರದಲ್ಲಿನ ಮಹಾದೇವ್ ಜುಲೇಲಾಲ್ ದೇವಸ್ಥಾನದಲ್ಲಿ ಭಾರೀ ಪ್ರಮಾಣದಲ್ಲಿ ಭಕ್ತರು ಸೇರಿದ್ದರು. ಈ ಸಂದರ್ಭದಲ್ಲಿ ಬಾವಿಯ ಮೇಲೆ ಹಾಸಿದ್ದ ಸಿಮೆಂಟ್ ಹಾಸು ಕುಸಿದು ಬಿದ್ದಿರುವ ಘಟನೆ ನಡೆದಿದೆ.
ವಿಡಿಯೋ ಫೂಟೇಜ್ ನಲ್ಲಿ, ಅಗ್ನಿಶಾಮಕದಳದ ಸಿಬಂದಿಗಳು ಬಾವಿಯೊಳಗೆ ಬಿದ್ದ ಭಕ್ತರನ್ನು ರೋಪ್ ಬಳಸಿ ಮೇಲಕ್ಕೆತ್ತುತ್ತಿರುವ ದೃಶ್ಯ ಸೆರೆಯಾಗಿದೆ. ಈಗಾಗಲೇ ಹತ್ತು ಭಕ್ತರನ್ನು ಬಾವಿಯೊಳಗಿಂದ ಮೇಲಕ್ಕೆತ್ತಲಾಗಿದೆ. ಇನ್ನುಳಿದವರ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ವರದಿ ತಿಳಿಸಿದೆ.
ಘಟನೆ ಕುರಿತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮಾಹಿತಿ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಇಂದೋರ್ ಕಲೆಕ್ಟರ್ ಮತ್ತು ಇಂದೋರ್ ಕಮಿಷನರ್ ಗೆ ರಕ್ಷಣಾ ಕಾರ್ಯವನ್ನು ತ್ವರಿತಗೊಳಿಸುವಂತೆ ಸೂಚನೆ ನೀಡಿರುವುದಾಗಿ ವರದಿ ವಿವರಿಸಿದೆ.
ಘಟನೆಯ ನಂತರ ದೇವಸ್ಥಾನದಲ್ಲಿನ ಎಲ್ಲಾ ಭಕ್ತರನ್ನು ಹೊರ ಕಳುಹಿಸಲಾಗಿದ್ದು, ಪೊಲೀಸರು ಕೂಡಾ ಸ್ಥಳಕ್ಕೆ ಆಗಮಿಸಿದ್ದು, ಯಾವುದೇ ವ್ಯಕ್ತಿಗಳು ದೇವಸ್ಥಾನದ ಆವರಣದೊಳಗೆ ಪ್ರವೇಶಿಸದಂತೆ ಬ್ಯಾರಿಕೇಡ್ ಹಾಕಿರುವುದಾಗಿ ವರದಿ ತಿಳಿಸಿದೆ.