ಇಂದೋರ್(ಮಧ್ಯಪ್ರದೇಶ): ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಎಂಟು ತಿಂಗಳ ಗರ್ಭಿಣಿಯ ಮೆದುಳು ನಿಷ್ಕ್ರಿಯಗೊಂಡಿದ್ದು, ವೈದ್ಯರ ತಂಡ ಮಗುವನ್ನು ಉಳಿಸುವ ನಿಟ್ಟಿನಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿರುವ ಘಟನೆ ಮಧ್ಯಪ್ರದೇಶದ ಮಹಾರಾಜ ತುಕೋಜಿರಾವ್ ಹೋಳ್ಕರ್ ಆಸ್ಪತ್ರೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಮುಖ್ಯಮಂತ್ರಿ ಭೇಟಿಗಾಗಿ ಒಂದು ಗಂಟೆ ಕಾದು ವಾಪಸ್ ಆದ ಶಾಸಕಿ ಕುಸುಮಾವತಿ ಶಿವಳ್ಳಿ
ದುರದೃಷ್ಟವೆಂಬಂತೆ ನವಜಾತ ಶಿಶುವು ಕೂಡಾ ಎರಡು ದಿನಗಳ ಬಳಿಕ ಕೊನೆಯುಸಿರೆಳೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸಾವಿನ ನಂತರವೂ ತಮ್ಮ ಮಗಳು ಜೀವಂತವಾಗಿರಲಿ ಎಂದು ಬಯಸಿದ ಪೋಷಕರು ಆಕೆಯ ಅಂಗಾಂಗಳನ್ನು ದಾನ ಮಾಡಲು ನಿರ್ಧರಿಸಿದ್ದರು. ಆದರೆ ಅದು ಕೂಡಾ ಸಾಧ್ಯವಾಗಿಲ್ಲ, ಯಾಕೆಂದರೆ ಗರ್ಭಿಣಿ ಮೆದುಳು ನಿಷ್ಕ್ರಿಯಗೊಂಡು, ಹೃದಯಾಘಾತದಿಂದ ಸಾವನ್ನಪ್ಪಿದ್ದು, ಆಕೆಯ ಕಣ್ಣುಗಳನ್ನು ಮಾತ್ರ ದಾನ ಮಾಡಲಾಗಿದೆ ಎಂದು ವರದಿ ವಿವರಿಸಿದೆ.
ಎರಡು ದಿನಗಳ ಹಿಂದೆ ಸಂಭವಿಸಿದ ಭೀಕರ ಅಪಘಾತದಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ 19 ವರ್ಷದ ಮಾಲಾ ಎಂಬ ಎಂಟು ತಿಂಗಳ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಎಂವೈ ಆಸ್ಪತ್ರೆಯ ಡಾ.ಪಿಎಸ್ ಠಾಕೂರ್ ತಿಳಿಸಿದ್ದಾರೆ.
ವೆಂಟಿಲೇಷನ್ ನಲ್ಲಿದ್ದ ಗರ್ಭಿಣಿಯ ಜೀವ ಉಳಿಸಲು ನಮ್ಮ ವೈದ್ಯರ ತಂಡ ಸಾಕಷ್ಟು ಪ್ರಯತ್ನ ನಡೆಸಿತ್ತು. ಆದರೆ ಆಕೆಯ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಕೂಡಲೇ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿ ಮಗುವನ್ನು ವೆಂಟಿಲೇಟರ್ ನಲ್ಲಿ ಇಟ್ಟು ಜೀವ ಉಳಿಸುವ ಪ್ರಯತ್ನ ಮಾಡಲಾಯಿತು ಎಂದು ಠಾಕೂರ್ ವಿವರಿಸಿದ್ದಾರೆ.
ಮೆದುಳು ನಿಷ್ಕ್ರಿಯಗೊಂಡ ಕೆಲವೇ ಗಂಟೆಗಳಲ್ಲಿ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ನವಜಾತ ಶಿಶು ಕೂಡಾ ಚಿಂತಾಜನಕ ಸ್ಥಿತಿಯಲ್ಲಿದ್ದು, ಮಂಗಳವಾರ ಕೊನೆಯುಸಿರೆಳೆದಿರುವುದಾಗಿ ಡಾ.ಠಾಕೂರ್ ತಿಳಿಸಿದ್ದಾರೆ.