ದೇಶವನ್ನಾಳುವ ರಾಜನ ಮಗನಿಗೂ ಒಬ್ಬ ವ್ಯಾಪಾರಿಯ ಮಗನಿಗೂ ಗಾಢವಾದ ಗೆಳೆತನವಿತ್ತು. ಅವರಿಬ್ಬರೂ ಒಬ್ಬರೇ ಗುರುಗಳ ಬಳಿ ವಿದ್ಯೆ ಕಲಿಯುತ್ತಿದ್ದರು. ಒಟ್ಟಿಗೇ ಆಡುವರು, ಜೊತೆಯಾಗಿ ಊಟ ಮಾಡುವರು. ಒಂದು ಸಲ ರಾಜನ ಮಗ, “”ಜಗತ್ತಿನಲ್ಲಿ ಸುಖಪಡಲು ಮುಖ್ಯವಾದುದು ಹಣ. ಹಣ ಕೈಯಲ್ಲಿದ್ದರೆ ಏನು ಬೇಕಾದರೂ ಸಾಧಿಸಬಹುದು” ಎಂದು ಹೇಳಿದ. ವ್ಯಾಪಾರಿಯ ಮಗ ಈ ಮಾತನ್ನು ಒಪ್ಪಲಿಲ್ಲ. “”ಇದು ತಪ್ಪು ಕಲ್ಪನೆ. ಜಾಣ್ಮೆಯಿಲ್ಲದವನ ಬಳಿ ಎಷ್ಟು ಹಣವಿದ್ದರೂ ಸುಖಪಡಲು ಸಾಧ್ಯವಿಲ್ಲ. ಎಲ್ಲ ಸುಖಕ್ಕೂ ಬುದ್ಧಿವಂತಿಕೆಯೇ ನೆರವಾಗುತ್ತದೆ” ಎಂದು ವಾದಿಸಿದ. ಆದರೆ ರಾಜನ ಮಗ ತನ್ನ ಮಾತೇ ಸರಿಯೆಂದು ಸಮರ್ಥಿಸಿಕೊಂಡ. “”ಇಲ್ಲಿಯೇ ಇದ್ದರೆ ನಮ್ಮ ಮಾತುಗಳ ಪರೀಕ್ಷೆ ಸಾಧ್ಯವಿಲ್ಲ. ನಾವು ಬೇರೆ ಊರಿಗೆ ಹೋಗಿ ಇದರಲ್ಲಿ ಯಾವುದು ಸತ್ಯವೆಂದು ಪರೀಕ್ಷೆ ಮಾಡಬೇಕು. ನೀನು ಕೈತುಂಬ ಹಣ ತೆಗೆದುಕೋ. ನಾನು ಬರಿಗೈಯಲ್ಲಿ ಮನೆಯಿಂದ ಹೊರಡುತ್ತೇನೆ” ಎಂದು ಹೇಳಿದ. ಗೆಳೆಯ ಈ ಮಾತನ್ನು ಒಪ್ಪಿಕೊಂಡ. ಇಬ್ಬರೂ ಯಾರಿಗೂ ಹೇಳದೆ ಬೇರೆ ಬೇರೆ ದಾರಿ ಹಿಡಿದು ಮನೆಯಿಂದ ಹೊರಟರು.
ರಾಜಕುಮಾರ ಒಂದು ನಗರವನ್ನು ಸೇರಿಕೊಂಡ. ಅವನ ಬಳಿ ತುಂಬ ಹಣವಿರುವುದು ಹಲವು ಯುವಕರಿಗೆ ತಿಳಿಯಿತು. ಅವರು ಅವನ ಗೆಳೆತನ ಬಯಸಿ ಸನಿಹ ಬಂದರು. ಅವರಲ್ಲಿರುವ ಮೋಸಗಾರಿಕೆ ರಾಜಕುಮಾರನಿಗೆ ತಿಳಿಯಲಿಲ್ಲ. ಹೊಸ ಗೆಳೆಯರ ಜೊತೆಗೂಡಿ ತನ್ನಲ್ಲಿರುವ ಹಣವನ್ನು ನೀರಿನಂತೆ ಮುಗಿಸಿದ. ಅವನ ಕೈ ಬರಿದಾಗಿರುವುದು ತಿಳಿದ ಕೂಡಲೇ ಗೆಳೆಯರು ಅವನ ಸಂಗ ತೊರೆದು ದೂರ ಹೋದರು. ಜೀವನಕ್ಕೆ ಗತಿಯಿಲ್ಲದೆ ರಾಜಕುಮಾರ ವ್ಯಾಪಾರಿಯ ಮಗನನ್ನು ಹುಡುಕಿಕೊಂಡು ಹೊರಟ. ಅವನು ಒಂದು ಗ್ರಾಮದಲ್ಲಿ ಅರ್ಧ ದಿನ ಊರಿನ ಮಕ್ಕಳಿಗೆ ಪಾಠ ಕಲಿಸಿ ಹಣ ಸಂಪಾದಿಸಿದ್ದ. ಇನ್ನರ್ಧ ದಿನ ರೈತರಿಗೆ ಹೊಲದ ಕೆಲಸಕ್ಕೆ ನೆರವಾಗಿ ವೇತನ ಗಳಿಸುತ್ತಿದ್ದ. ಇದನ್ನು ಕಂಡು ರಾಜಕುಮಾರನಿಗೆ ನಾಚಿಕೆಯಾಯಿತು. “”ಗೆಳೆಯಾ, ತಂದಿರುವ ಹಣವೆಲ್ಲ ಮುಗಿಯಿತು. ನನಗೆ ಸಂಪಾದನೆಗೆ ಏನಾದರೂ ದಾರಿಯಿದ್ದರೆ ಹೇಳು” ಎಂದು ಕೇಳಿದ. “”ನನ್ನಲ್ಲಿ ದಾರಿಯಾದರೂ ಏನಿದೆ ಗೆಳೆಯಾ? ಯಾರಾದರೂ ರೈತನ ಬಳಿಗೆ ಹೋಗಿ ಕೆಲಸ ಮಾಡಿ ಹಣ ಸಂಪಾದಿಸು” ಎಂದು ದಾರಿ ತೋರಿಸಿದ ವ್ಯಾಪಾರಿಯ ಮಗ.
ರಾಜಕುಮಾರ ಒಬ್ಬ ರೈತನ ಬಳಿಗೆ ಹೋಗಿ ಕೆಲಸ ಕೊಡುವಂತೆ ಕೇಳಿದ. ಆ ರೈತ ಬಲು ಧೂರ್ತನಾಗಿದ್ದ. ರಾಜಕುಮಾರನನ್ನು ಕಂಡು ಮುಖವರಳಿಸಿ, “”ಬಾರಪ್ಪ, ನಿನ್ನಂಥ ಶ್ರಮಜೀವಿ ಯಾವಾಗ ಬರುವರು ಎಂದು ಕಾದು ಕುಳಿತಿದ್ದೆ. ಹೇಳಿದ ಕೆಲಸ ಮಾಡಿದರೆ ಯೋಗ್ಯ ಸಂಬಳವನ್ನೂ ಕೊಡುತ್ತೇನೆ. ಆದರೆ ಕೆಲಸ ಮಾಡಲು ತಪ್ಪಿದರೆ ಹುಣಸೆ ಎಲೆಯಲ್ಲಿ ಬಡಿಸಿದ ಊಟ ಮಾತ್ರ ನಿನಗೆ ಸಿಗುತ್ತದೆ, ಸಂಬಳವಿಲ್ಲ. ನನ್ನ ಬಳಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನೀನು ಹೊರಟು ಹೋಗುವುದಾದರೆ ನಿನ್ನ ಬೆರಳುಗಳನ್ನು ಕತ್ತರಿಸಿ ಕೊಡಬೇಕು. ನಾನು ನಿನ್ನನ್ನು ಬೇಡವೆನ್ನುವುದಾದರೆ ನನ್ನ ಬೆರಳುಗಳನ್ನು ಕೊಡುತ್ತೇನೆ, ಆಗಬಹುದೇ?” ಎಂದು ಕೇಳಿದ. “”ನಿಮ್ಮ ಮಾತು ಕೇಳುವಾಗ ನೀವು ತುಂಬ ಒಳ್ಳೆಯವರೆಂದು ನನಗೆ ತೋರುತ್ತದೆ. ನಿಮ್ಮ ಮಾತುಗಳು ನನಗೆ ಒಪ್ಪಿಗೆಯಾಗಿದೆ. ಕೆಲಸಕ್ಕೆ ಸೇರಿಸಿಕೊಳ್ಳಿ” ಎಂದ ರಾಜಕುಮಾರ.
ದುಷ್ಟನಾದ ರೈತ ಒಂದು ದೊಡ್ಡ ತೊಟ್ಟಿಯನ್ನು ರಾಜಕುಮಾರನಿಗೆ ತೋರಿಸಿ ಹಳ್ಳದಿಂದ ಕೊಡದಲ್ಲಿ ನೀರು ತುಂಬಿಸಿ ತಂದು ಭರ್ತಿ ಮಾಡಲು ಹೇಳಿದ. ಆದರೆ ದಿನವಿಡೀ ನೀರು ತಂದರೂ ತೊಟ್ಟಿ ಭರ್ತಿಯಾಗಲಿಲ್ಲ. ತೊಟ್ಟಿಯ ತಳದಲ್ಲಿ ರೈತ ಒಂದು ಕೊಳವೆಯನ್ನಿರಿಸಿ ನೀರೆಲ್ಲವೂ ಗುಪ್ತವಾಗಿ ತೋಟಕ್ಕೆ ಹರಿಯುವಂತೆ ಮಾಡಿದ ಸಂಗತಿ ರಾಜಕುಮಾರನಿಗೆ ತಿಳಿಯಲಿಲ್ಲ. ನೀರು ತಂದು ತಂದು ಅವನು ಸುಸ್ತಾಗಿ ಹೋದ. ಆದರೆ ರೈತ ಸಿಟ್ಟಿನಿಂದ ಹಾರಾಡಿದ. “”ನೀನು ಬರೇ ಸೋಮಾರಿ. ನಿನಗೆ ಹುಣಸೆ ಎಲೆಯಲ್ಲಿ ಮಾತ್ರ ಊಟ ಕೊಡುತ್ತೇನೆ” ಎಂದು ಹೇಳಿದ. ರಾಜಕುಮಾರನಿಗೆ ಉಪವಾಸವಿದ್ದು ಗೊತ್ತಿಲ್ಲ. ಕೆಲಸ ಮಾಡಲು ಆಗುವುದಿಲ್ಲವೆಂದು ಹೊರಟರೆ ಬೆರಳುಗಳನ್ನು ಕೊಡಬೇಕಾಗುತ್ತದೆ. ಮರುದಿನವೂ ಈ ಕೆಲಸ ಮಾಡಿ ಅವನು ಬಸವಳಿದು ಹೋದ.
ವಿಧಿಯಿಲ್ಲದೆ ರಾಜಕುಮಾರ ವ್ಯಾಪಾರಿಯ ಮಗನ ಬಳಿಗೆ ರಹಸ್ಯವಾಗಿ ಹೋದ. ದುಷ್ಟನಾದ ರೈತನ ಬಳಿ ತಾನು ಸಿಕ್ಕಿಬಿದ್ದಿರುವ ಸಂಗತಿಯನ್ನು ವಿವರಿಸಿದ. “”ನಾನು ನಾಳೆಯೂ ಅಲ್ಲಿಯೇ ಕೆಲಸ ಮಾಡಿದರೆ ನಿತ್ರಾಣದಿಂದ ಸತ್ತು ಹೋಗುತ್ತೇನೆ. ಅವನ ಬಲೆಯಿಂದ ಪಾರಾಗುವ ಏನಾದರೊಂದು ಉಪಾಯವನ್ನು ನನಗೆ ಹೇಳಿಕೊಟ್ಟು ನನ್ನ ಜೀವವನ್ನುಳಿಸು” ಎಂದು ಕಣ್ಣೀರಿಡುತ್ತ ಕೇಳಿಕೊಂಡ. ವ್ಯಾಪಾರಿಯ ಮಗ ಅವನಿಗೆ ಹೊಟ್ಟೆ ತುಂಬ ಊಟ ಬಡಿಸಿದ. “”ನೀನು ನಿಶ್ಚಿಂತೆಯಿಂದ ಮಲಗಿ ನಿದ್ರಿಸು. ನಾನು ನಿನ್ನ ಉಡುಪುಗಳನ್ನು ಧರಿಸಿ ರಾತ್ರೆ ಆ ರೈತನ ಮನೆಯ ಕೆಲಸ ಮಾಡಲು ಹೋಗುತ್ತೇನೆ. ಅವನಿಗೆ ಯೋಗ್ಯ ಪಾಠ ಕಲಿಸಿ ಬರುತ್ತೇನೆ” ಎಂದು ಭರವಸೆ ನೀಡಿದ.
ವ್ಯಾಪಾರಿಯ ಮಗ ರೈತನ ಮನೆಗೆ ಬಂದು, “”ಒಡೆಯಾ, ರಾತ್ರೆಯೂ ನಿಮಗೆ ಸೇವೆ ಸಲ್ಲಿಸುವ ಮನಸ್ಸಾಗಿದೆ. ಏನು ಕೆಲಸ ಮಾಡಲಿ?” ಎಂದು ಕೇಳಿದ. ಅವನನ್ನು ರಾಜಕುಮಾರನೆಂದೇ ಭಾವಿಸಿದ ರೈತ ಮನಸ್ಸಿನಲ್ಲಿ ಹಿರಿ ಹಿರಿ ಹಿಗ್ಗಿದರೂ ತೋರ್ಪಡಿಸಲಿಲ್ಲ. “”ಇನ್ನೂ ನೀರಿನ ತೊಟ್ಟಿ ಭರ್ತಿಯಾಗಿಲ್ಲ. ಆ ಕೆಲಸವನ್ನೇ ಮಾಡು” ಎಂದು ಹೇಳಿದ. ವ್ಯಾಪಾರಿಯ ಮಗ ತೊಟ್ಟಿಯ ತಳದಲ್ಲಿ ರೈತ ಗುಪ್ತವಾಗಿರಿಸಿದ್ದ ಕೊಳವೆಯನ್ನು ಪತ್ತೆ ಮಾಡಿದ. ಅದನ್ನು ರೈತನ ಮನೆಯೊಳಗೆ ನೀರು ಹೋಗುವಂತೆ ತಿರುಗಿಸಿಟ್ಟು ನೀರು ತುಂಬತೊಡಗಿದ.
ಮಧ್ಯರಾತ್ರೆ ರೈತನಿಗೆ ಎಚ್ಚರವಾದಾಗ ಮನೆಯೊಳಗೆ ನೀರು ತುಂಬಿ ಧಾನ್ಯಗಳೆಲ್ಲ ನೆನೆದಿದ್ದವು. ಬಟ್ಟೆಗಳು, ಹಣ ಎಲ್ಲವೂ ಉಪಯೋಗಿಸದಂತೆ ಹಾಳಾಗಿತ್ತು. ಹೊರಗೆ ಬಂದು ನೋಡಿದ. ವ್ಯಾಪಾರಿಯ ಮಗ ಇನ್ನಷ್ಟು ನೀರು ತಂದು ತುಂಬುತ್ತಲೇ ಇದ್ದ. ರೈತನಿಗೆ ಕೋಪ ಬಂತು. “”ಲೋ, ಮನೆಹಾಳ, ನಿನ್ನ ಕೆಲಸ ನಿಲ್ಲಿಸು. ಇಲ್ಲವಾದರೆ ನನ್ನ ಮನೆ ಮುಳುಗಿಬಿಡುತ್ತದೆ” ಎಂದು ಕೂಗಿದ. “”ಇಲ್ಲ, ತೊಟ್ಟಿ ಭರ್ತಿಯಾಗುವ ವರೆಗೂ ಕೆಲಸ ನಿಲ್ಲಿಸುವುದಿಲ್ಲ” ಎಂದು ವ್ಯಾಪಾರಿಯ ಮಗ ನೀರು ತುಂಬುತ್ತಲೇ ಇದ್ದ.
ರೈತನಿಗೆ ಕೋಪ ತಾಳಲಾಗಲಿಲ್ಲ. “”ಈಗಲೇ ಕೆಲಸ ಬಿಟ್ಟುಹೋಗು” ಎಂದು ಆಜ್ಞಾಪಿಸಿದ. “”ಆಗಲಿ, ನಾನು ಹೊರಡುತ್ತೇನೆ. ಆದರೆ ನೀವೇ ಹೇಳಿದ ಪ್ರಕಾರ ನೀವು ನನ್ನನ್ನು ಕೆಲಸದಿಂದ ಬಿಟ್ಟುಹೋಗು ಎಂದರೆ ನಿಮ್ಮ ಬೆರಳುಗಳನ್ನು ಕತ್ತರಿಸಿ ಕೊಡಬೇಕು ತಾನೆ?” ಎಂದು ವ್ಯಾಪಾರಿಯ ಮಗ ಹರಿತವಾದ ಕತ್ತಿ ತೆಗೆದುಕೊಂಡು ಬಂದ. ರೈತನಿಗೆ ಅವನ ಕೈಯಿಂದ ಪಾರಾಗಲು ಸಾಧ್ಯವೇ ಇರಲಿಲ್ಲ. ಬೆರಳುಗಳನ್ನುಳಿಸಿಕೊಳ್ಳಲು ಅವನಿಗೆ ತನ್ನ ಒಬ್ಬಳೇ ಮಗಳನ್ನು ಕೊಟ್ಟು ಮದುವೆ ಮಾಡಿ ತನ್ನ ಆಸ್ತಿಗೂ ಉತ್ತರಾಧಿಕಾರಿಯೆಂದು ಒಪ್ಪಿಕೊಂಡ.
ರಾಜಕುಮಾರ ಇಕ್ಕಟ್ಟಿನಿಂದ ಪಾರಾಗಿ ಗೆಳೆಯನೊಂದಿಗೆ ಅರಮನೆಗೆ ಮರಳಿದ. ಹಣಕ್ಕಿಂತ ಜಾಣ್ಮೆಯೇ ದೊಡ್ಡದೆಂಬುದನ್ನು ಒಪ್ಪಿಕೊಂಡ.
ಪರಾಶರ