ಜಕಾರ್ತಾ : ಜಕಾರ್ತಾ ದಿಂದ ಪ್ಯಾಂಕಾಲ್ ಪಿನಾಂಗ್ ಗೆ ಹೊರಟಿದ್ದ ಕನಿಷ್ಠ 188 ಮಂದಿ ಪ್ರಯಾಣಿಕರಿದ್ದ ‘ಲಯನ್ ಏರ್ ಫ್ಲೈಟ್ ‘ ಟೇಕಾಫ್ ಆದ ಕೇವಲ 13 ನಿಮಿಷಗಳಲ್ಲಿ ನಾಪತ್ತೆಯಾಗಿ ಸಮುದ್ರದಲ್ಲಿ ಪತನಗೊಂಡ ದುರಂತ ಇಂದು ಸೋಮವಾರ ಸಂಭವಿಸಿದೆ ಎಂದು ಇಂಡೋನೇಶ್ಯ ವಾಯು ಯಾನ ಪ್ರಾಧಿಕಾರಿದ ಅಧಿಕಾರಿಗಳು ತಿಳಿಸಿದ್ದಾರೆ. ದುರಂತದಲ್ಲಿ ಬದುಕುಳಿದಿರಬಹುದಾದ ಪ್ರಯಾಣಿಕರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಸಮರೋಪಾದಿಯಲ್ಲಿ ನಡೆಯುತ್ತಿರುವುದಾಗಿ ವರದಿಗಳು ತಿಳಿಸಿವೆ.
ಸುಮಾತ್ರ ದ್ವೀಪದಿಂದ ದೂರ ತೀರದಲ್ಲಿರುವ ಪ್ಯಾಂಕಾಲ್ ಪಿನಾಂಗ್ ನಗರಕ್ಕೆ ಜಕಾರ್ತಾದಿಂದ ಹೊರಟಿದ್ದ ಲಯನ್ ವಿಮಾನವು ಸಮುದ್ರದಲ್ಲಿ ಪತನಗೊಂಡ ವಿದ್ಯಮಾನವನ್ನು ಇಂಡೋನೇಶ್ಯದ ಶೋಧ ಮತ್ತು ರಕ್ಷಣಾ ಸಂಸ್ಥೆ ದೃಢಪಡಿಸಿದೆ.
ಲಯನ್ ಏರ್ ಫ್ಲೈಟ್ ವಿಮಾನದ ಗತಿ ಏನಾಗಿದೆ ಎಂದು ಕೇಳಲಾದ ಪ್ರಶ್ನೆಗೆ ಇಂಡೋನೇಶ್ಯ ವಾಯುಯಾನ ಪ್ರಾಧಿಕಾರದ ವಕ್ತಾರ ಯೂಸುಫ್ ಲತೀಫ್ ಅವರು “ವಿಮಾನ ಪತನಗೊಂಡಿರುವುದು ದೃಢ ಪಟ್ಟಿದೆ’ ಎಂದು ಲಿಖೀತ ಸಂದೇಶದಲ್ಲಿ ತಿಳಿಸಿದರು.
ಲಯನ್ ವಿಮಾನ ಟೇಕಾಫ್ ಆದ ಕೇವಲ 13 ನಿಮಿಷಗಳಲ್ಲಿ ಅದು ವಾಯು ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಂಡು ಸಮುದ್ರದಲ್ಲಿ ಪತನಗೊಂಡಿತು ಎದು ಲತೀಫ್ ಹೇಳಿದರು.
ದೂರ ಸಮುದ್ರದಲ್ಲಿರುವ ತೈಲ ಸಂಸ್ಕರಣ ಘಟಕದ ಆಸುಪಾಸಿನಲ್ಲಿ ಸಮುದ್ರದಲ್ಲಿ ನತದೃಷ್ಟ ವಿಮಾನದ ಆಸನಗಳ ಸಹಿತ ವಿವಿಧ ಬಗೆಯ ಅವಶೇಷಗಳು ತೇಲುತ್ತಿರುವುದು ಕಂಡು ಬಂದಿರುವುದಾಗಿ ಪರ್ತಮಿನಾ ಅಧಿಕೃತ ಸುದ್ದಿ ಸಂಸ್ಥೆ ಹೇಳಿದೆ.
ವಿಮಾನದಲ್ಲಿದ್ದ ಪ್ರಯಾಣಿಕರ ಗತಿ ಏನಾಗಿದೆ ಎಂಬುದು ನಮಗೆ ಗೊತ್ತಿಲ್ಲ. ನಾವು ಅವರಿಗಾಗಿ ಪ್ರಾರ್ಥಿಸುತ್ತೇವೆ ಎಂದು ವಕ್ತಾರ ಹೇಳಿದ್ದಾರೆ.
ಫ್ಲೈಟ್ ಸಂಖ್ಯೆ ಜೆಟಿ 610 ಲಯನ್ ವಿಮಾನ ಇಂದು ಸೋಮವಾರ ಬೆಳಗ್ಗೆ 6.20ಕ್ಕೆ ಟೇಕಾಫ್ ಆಗಿತ್ತು ಮತ್ತು ಅದು ಬ್ಯಾಂಕಾ ಬೆಲಿಟುಂಗ್ ನ ರಾಜಧಾನಿಯಲ್ಲಿ 7.20ಕ್ಕೆ ಇಳಿಯುವುದಿತ್ತು ಎಂದು ವರದಿಗಳು ತಿಳಿಸಿವೆ.