ಜಕಾರ್ತಾ: ಭಾರೀ ಪೈಪೋಟಿಯ ಸೆಮಿಫೈನಲ್ ಹಣಾ ಹಣಿಯನ್ನು ರೋಚಕವಾಗಿ ಗೆದ್ದ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ “ಇಂಡೋ ನೇಷ್ಯಾ ಓಪನ್” ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಎದುರು ನೋಡು ತ್ತಿದ್ದಾರೆ. ಇದು ಭಾರತೀಯ ಜೋಡಿ ಕಾಣುತ್ತಿರುವ ಮೊದಲ ವರ್ಲ್ಡ್ ಟೂರ್ ಸೂಪರ್-1000 ಫೈನಲ್ ಆಗಿದೆ. ಆದರೆ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಎಚ್.ಎಸ್. ಪ್ರಣಯ್ ಪರಾಭವಗೊಂಡರು.
ಶನಿವಾರ ನಡೆದ ಸೆಮಿಫೈನಲ್ ಸೆಣಸಾಟದಲ್ಲಿ 7ನೇ ಶ್ರೇಯಾಂಕದ ಸಾತ್ವಿಕ್-ಚಿರಾಗ್ ಕೊರಿಯಾದ ಶ್ರೇಯಾಂಕ ರಹಿತ ಜೋಡಿಯಾದ ಮಿನ್ ಹ್ಯುಕ್ ಕಾಂಗ್-ಸೆಯಂಗ್ ಜೇ ಸೆವೊ ವಿರುದ್ಧ 17-21, 21-19, 21-18 ಅಂತರದಿಂದ ಜಯ ಸಾಧಿಸಿ ದರು. ಇದು ಕೊರಿಯನ್ ಜೋಡಿ ವಿರುದ್ಧ ಆಡಿದ 5 ಪಂದ್ಯಗಳಲ್ಲಿ ಸಾತ್ವಿಕ್-ಚಿರಾಗ್ ದಾಖಲಿಸಿದ 3ನೇ ಗೆಲುವು.
ವಿಶ್ವ ರ್‍ಯಾಂಕಿಂಗ್‌ನಲ್ಲಿ 7ನೇ ಸ್ಥಾನ ದಲ್ಲಿರುವ ಸಾತ್ವಿಕ್-ಚಿರಾಗ್ ಮೂರೂ ಗೇಮ್‌ಗಳಲ್ಲಿ ಭಾರೀ ಹೋರಾಟ ನಡೆಸಬೇಕಾಯಿತು. ಎಲ್ಲವೂ ಅಲ್ಪ ಅಂತರದ ಗೆಲುವಾಗಿತ್ತು. ಮೊದಲ ಗೇಮ್‌ನಲ್ಲಿ ಕೊರಿಯನ್ ಜೋಡಿ ಸಣ್ಣ ಅಂತರದ ಲೀಡ್ ಕಾಯ್ದುಕೊಂಡು ಮುನ್ನಡೆಯಿತು.
ದ್ವಿತೀಯ ಗೇಮ್ ಇನ್ನಷ್ಟು ಪೈಪೋಟಿ ಯಿಂದ ಕೂಡಿತ್ತು. ಆದರೆ ಭಾರತದ ಜೋಡಿ ಹೆಚ್ಚು ಎಚ್ಚೆತ್ತುಕೊಂಡು ಆಡಿತು. 6-3, 11-4 ಲೀಡ್‌ನೊಂದಿಗೆ ಮುನ್ನುಗ್ಗಿತು. ಕೊರಿಯನ್ ಜೋಡಿಯ ಕಳಪೆ ಆಟವೂ ನೆರವಿಗೆ ಬಂತು. ಆದರೂ ಕಾಂಗ್-ಸೆವೊ ಪಟ್ಟು ಸಡಿಲಿಸಲಿಲ್ಲ. ಹಿನ್ನಡೆಯನ್ನು 18-15ಕ್ಕೆ ತಂದು ನಿಲ್ಲಿಸುವಲ್ಲಿ ಯಶ ಸ್ವಿಯಾದರು. ಸಾತ್ವಿಕ್-ಚಿರಾಗ್ ಜಾಣ್ಮೆಯ ಪ್ರದರ್ಶನದೊಂದಿಗೆ ಈ ಗೇಮ್ ವಶಪಡಿಸಿಕೊಂಡು ಪಂದ್ಯವನ್ನು ಸಮಬಲಕ್ಕೆ ತಂದು ನಿಲ್ಲಿಸಿದರು.
ನಿರ್ಣಾಯಕ ಪಂದ್ಯ ಆರಂಭ ದಿಂದಲೇ ಕಾವೇರಿಸಿಕೊಳ್ಳುತ್ತ ಹೋಯಿತು. ಭಾರತದ ಶಟ್ಲರ್ 12- 5ರ ಮುನ್ನಡೆ ಸಾಧಿಸಿದಾಗ ಸುಲಭ ಗೆಲುವಿನ ಸಾಧ್ಯತೆ ಗೋಚರಿಸಿತು. ಆದರೆ ಕೊರಿಯನ್ಸ್ ಬೆನ್ನಟ್ಟಿಕೊಂಡು ಬಂದರು. ಅಂಕ 16-16ರಲ್ಲಿ ಸಮನಾ ದಾಗ ಯಾರು ಕೂಡ ಗೆಲ್ಲುವ ಪರಿಸ್ಥಿತಿ ನಿರ್ಮಾಣವಾಯಿತು. ಅದೃಷ್ಟ ಸಾತ್ವಿಕ್-ಚಿರಾಗ್ ಜೋಡಿಗೆ ಒಲಿಯಿತು. ರವಿವಾರ ಫೈನಲ್ ಸ್ಪರ್ಧೆ ಏರ್ಪಡಲಿದೆ.
ಪ್ರಣಯ್‌ಗೆ ಸೋಲು
ಎಚ್.ಎಸ್. ಪ್ರಣಯ್ ಅವರನ್ನು ಡೆನ್ಮಾರ್ಕ್‌ನ ಅಗ್ರ ಶ್ರೇಯಾಂಕದ ಆಟಗಾರ ವಿಕ್ಟರ್ ಅಕ್ಸೆಲ್ಸೆನ್ 21-15, 21-15 ಅಂತರದಿಂದ ಪರಾಭವ ಗೊಳಿಸಿದರು. ಇದು ಅಕ್ಸೆಲ್ಸೆನ್ ವಿರುದ್ಧ ಆಡಿದ 8 ಪಂದ್ಯಗಳಲ್ಲಿ ಪ್ರಣಯ್ ಅನುಭವಿಸಿದ 6ನೇ ಸೋಲಾಗಿದೆ.