ಮಂಗಳೂರು: ನಿಟ್ಟೆ ವಿಶ್ವವಿದ್ಯಾನಿಲಯದ(ಪರಿಗಣಿತ) ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನ ಮಾನವ ಶರೀರ ಕ್ರಿಯಾಶಾಸ್ತ್ರ ವಿಭಾಗ ಮತ್ತು ಕೇಂದ್ರ ಸಂಶೋಧನ ಪ್ರಯೋಗಾಲವುಜಪಾನ್‌ನ ಮಿಯಾಝಾಕಿ ವಿ.ವಿ. ಸಹಯೋಗದೊಂದಿಗೆ ದೇರಳಕಟ್ಟೆಯಲ್ಲಿರುವ ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸಾಯನ್ಸಸ್‌ನ ಆವಿಷ್ಕಾರ್ ಆಡಿಯೋರಿಯಂನಲ್ಲಿ ಫೆ. 13ರಿಂದ 15ರ ವರೆಗೆ ಇಂಡೋ-ಜಪಾನ್ ಅಂತಾರಾಷ್ಟ್ರೀಯ ಸಮ್ಮೇಳನ (ಐಜೆಸಿಎಸ್‌ಪಿ-2023) ಹಮ್ಮಿಕೊಂಡಿದೆ.
ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ (ಡಿಎಸ್‌ಟಿ) ಹಾಗೂ ಜಪಾನಿನ ಜಪಾನೀಸ್ ಸೊಸೈಟಿ ಫಾರ್ ಪ್ರೊಮೋಷನ್ ಆಫ್ ಸಾಯನ್ಸ್ (ಜೆಎಸ್‌ಪಿಎಸ್) ದ್ವಿಪಕ್ಷೀಯ ವೈಜ್ಞಾನಿಕ ಸಹಯೋಗ ಉತ್ತೇಜಿಸಲು ಪ್ರತಿ ವರ್ಷ ಸ್ಪರ್ಧಾತ್ಮಕ ರೀತಿಯಲ್ಲಿ ವೈಜ್ಞಾನಿಕ ಪ್ರಸ್ತಾವನೆಗಳನ್ನು ಆಹ್ವಾನಿಸುತ್ತದೆ.
ಈ ಜಂಟಿ ಪ್ರಸ್ತಾವನೆಗಳು ಭೌತವಿಜ್ಞಾನ, ರಾಸಾಯನಿಕ ವಿಜ್ಞಾನ, ಜೀವ ವಿಜ್ಞಾನ, ಕೃಷಿ, ಗಣಿತ, ಗಣಕ ವಿಜ್ಞಾನ, ಖಗೋಳ, ಭೂವಿಜ್ಞಾನ, ವಸ್ತು ವಿಜ್ಞಾನ ಮತ್ತು ಕೋವಿಡ್‌ಗೆ-19ಗೆ ಸಂಬಂಧಿಸಿದ ವಿಷಯಗಳು ಒಳಗೊಂಡಿರುತ್ತದೆ. ಅಂತೆಯೇ 2021ರ ಜಂಟಿ ಪ್ರಸ್ತಾವನೆಯಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ವತಿಯಿಂದ ಸಲ್ಲಿಸಿದ ಪ್ರಸ್ತಾವನೆಯನ್ನು ಡಿಎಸ್‌ಟಿ ಮತ್ತು ಜೆಎಸ್‌ಪಿಎಸ್ ಅನುಮೋದಿಸಿದೆ.
ಭಾರತದಿಂದ ಸಲ್ಲಿಸಲ್ಪಟ್ಟಿದ್ದ ಒಟ್ಟು 146 ಪ್ರಸ್ತಾವನೆಗಳಲ್ಲಿ ಕೇವಲ 23 ಪ್ರಸ್ತಾವನೆಗಳು ಅನುಮೋದಿಸಲ್ಪಟ್ಟಿವೆ. ಆ ಪ್ರಯುಕ್ತ ಡಿಎಸ್‌ಟಿ ಮತ್ತು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಬಲದೊಂದಿಗೆ “ಫ್ಯೂಚರ್ ಹೆಲ್ತ್ ಸ್ಟ್ರಾéಟಜಿ ಬೈ ಟ್ರಾನ್ಸ್‌ಡಿಸಿಪ್ಲೀನರಿ ಅಪ್ರೋಚ್’ ವಿಷಯದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ.
ಈ ಸಮ್ಮೇಳನದಲ್ಲಿ ದೇಶ ವಿದೇಶಗಳ 400ಕ್ಕೂ ಅಧಿಕ ಸಂಶೋಧಕರು, ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರದಲ್ಲಿನ ಸುಧಾರಿತ ತಂತ್ರಜ್ಞಾನಗಳ ವಿಷಯವಾಗಿ ಉಪನ್ಯಾಸಗಳನ್ನು ನೀಡಲಿದ್ದಾರೆ ಎಂದು ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ (ಕ್ಷೇಮ) ವೈಸ್ ಡೀನ್ ಡಾ| ಜಯಪ್ರಕಾಶ್ ಪಿ. ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಮ್ಮೇಳನದಲ್ಲಿ ಹೊಸದಿಲ್ಲಿಯ ಜಿ.ಬಿ. ಪಂತ್ ಆಸ್ಪತ್ರೆಯ ಹೃದಯ ತಜ್ಞ ಡಾ| ಮೋಹಿತ್ ಡಿ. ಗುಪ್ತಾ, ಐಐಟಿ, ಐಐಎಂಗಳಲ್ಲಿ ಮೌಲ್ಯ ಶಿಕ್ಷಣ ತರಬೇತುದಾರರಾಗಿರುವ ಡಾ| ಇ.ವಿ. ಸ್ವಾಮಿನಾಥನ್ ಪ್ರಮುಖ ಭಾಷಣ ಮಾಡಲಿದ್ದಾರೆ. ಸಮ್ಮೇಳನಕ್ಕೆ ಪೂರಕವಾಗಿ ಮಾನವ ಶರೀರಕ್ರಿಯಾಶಾಸ್ತ್ರ ವಿಭಾಗ, ಸಮುದಾಯ ವೈದ್ಯಕೀಯ ವಿಭಾಗ ಮತ್ತು ಕೇಂದ್ರ ಸಂಶೋಧನಾ ಪ್ರಯೋಗಾಲಯವು ಫೆ. 13ರಂದು ರಾಷ್ಟ್ರಮಟ್ಟದ ಪೂರ್ವಸಮ್ಮೇಳನ ಕಾರ್ಯಾಗಾರ ಹಮ್ಮಿಕೊಂಡಿದೆ ಎಂದರು. ಜಪಾನ್ ಮಿಯಾಝಾಕಿ ವಿ.ವಿ. ಪ್ರಾಧ್ಯಾಪಕ ಡಾ| ಹರೀಶ್ ಕುಮಾರ್ ಮಧ್ಯಸ್ಥ, “ಕ್ಷೇಮ’ದ ಪ್ರಾಧ್ಯಾಪಿಕೆ ಡಾ|ಸುಚೇತನಾ ಕುಮಾರಿ ಎನ್., ಸಹಾಯಕ ಪ್ರಾಧ್ಯಾಪಕ ಡಾ| ದಾಮೋದರ ಗೌಡ ಕೆ.ಎಂ. ಹಾಗೂ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.