Advertisement

ಚೀನ ವಸ್ತುಗಳಿಗೆ ಅಂಕುಶ? ; 9.69 ಲಕ್ಷ ಕೋಟಿ ರೂ.ಮೌಲ್ಯದ 371 ವಸ್ತುಗಳಿಗೆ ನಿರ್ಬಂಧ ಸಾಧ್ಯತೆ

12:26 AM Jun 20, 2020 | Hari Prasad |

ಹೊಸದಿಲ್ಲಿ: ಲಡಾಖ್‌ ಗಡಿಯಲ್ಲಿ ಬೇಕಂತಲೇ ತಗಾದೆ ತೆಗೆದು ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿರುವ ಚೀನಗೆ ಆರ್ಥಿಕವಾಗಿ ಪೆಟ್ಟು ನೀಡಲು ಭಾರತ ಸಿದ್ಧತೆ ನಡೆಸಿದೆ.

Advertisement

ಆ ನಿಟ್ಟಿನಲ್ಲಿ ಮೊದಲ ಕ್ರಮವಾಗಿ ಚೀನದ ಅತ್ಯಂತ ವಿಸ್ತಾರವಾಗಿರುವ ಗ್ರಾಹಕ ಉತ್ಪನ್ನಗಳ ಮಾರುಕಟ್ಟೆಗೆ ಕಡಿವಾಣ ಹಾಕಲು ಮುಂದಾಗಿದೆ.

ಚೀನದ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಉತ್ಪಾದಿಸುವ ಗ್ರಾಹಕ ಸರಕುಗಳಿಗೆ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಸಣ್ಣ ಗುಂಡು ಪಿನ್‌ನಿಂದ ಆರಂಭವಾಗಿ ಎಲ್ಲರ ಕೈಗಳಲ್ಲೂ ಕಾಣುವ ಸ್ಮಾರ್ಟ್‌ಫೋನ್‌ವರೆಗಿನ ಬಹುತೇಕ ಉತ್ಪನ್ನ­ಗಳು ತಯಾರಾಗಿ ಬರುವುದು ಚೀನದಿಂದ. ಹೀಗಾಗಿ ಅಲ್ಲಿನ ಆರ್ಥಿಕತೆಗೆ ಭಾರತದಿಂದ ದೊಡ್ಡ ಪ್ರಮಾಣದ ಆದಾಯ ಹರಿದು ಹೋಗುತ್ತಿದೆ. ಅಲ್ಲಿಂದ ಭಾರತಕ್ಕೆ ಆಮದಾಗುವ ಸರಕುಗಳನ್ನು ತಡೆ ಹಿಡಿಯುವ ಮೂಲಕ ಆದಾಯದ ಹರಿವು ನಿಲ್ಲಿಸಿದರೆ ಚೀನಗೆ ದೊಡ್ಡ ಹೊಡೆತ ಬೀಳಲಿದೆ ಎಂಬುದು ಕೇಂದ್ರ ವಾಣಿಜ್ಯ ಸಚಿವಾಲಯದ ಲೆಕ್ಕಾಚಾರ.

ಈ ನಿಟ್ಟಿನಲ್ಲಿ ಚೀನದಿಂದ ಭಾರತಕ್ಕೆ ಬರುವ ಆಟಿಕೆಗಳು, ಪ್ಲಾಸ್ಟಿಕ್‌ ಉತ್ಪನ್ನಗಳು, ಕ್ರೀಡಾ ಸಾಮಗ್ರಿ, ಎಲೆಕ್ಟ್ರಾನಿಕ್ಸ್‌, ಔಷಧಗಳು, ಬಟ್ಟೆಗಳು ಸೇರಿ ಸುಮಾರು 9.69 ಲಕ್ಷ ಕೋಟಿ ರೂ. ಮೌಲ್ಯದ 371 ವಸ್ತುಗಳಿಗೆ ನಿರ್ಬಂಧ ವಿಧಿಸಲು ಚಿಂತನೆ ನಡೆಸಿರುವ ಭಾರತ ಸರಕಾರ, ಈಗಾಗಲೆ ಆ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.

ನಿರ್ಬಂಧ ಹೇಗೆ?: ಈಗ ಚೀನದಿಂದ ಬರುತ್ತಿ­ರುವ ವಸ್ತುಗಳ ಗುಣಮಟ್ಟ ಅಷ್ಟಕ್ಕಷ್ಟೇ. ಗುಣಮಟ್ಟ ಕಡಿಮೆ ಇರುವ ಕಾರಣ ಬೆಲೆ ಕೂಡ ಕಡಿಮೆ ಆಗಿ, ಹೆಚ್ಚು ಜನ ಅವುಗಳನ್ನೇ ಕೊಳ್ಳುತ್ತಾರೆ. ಹೀಗಾಗಿ ಮೊದಲು ಎಲ್ಲ ಉತ್ಪನ್ನಗಳಿಗೆ  ಗುಣಮಟ್ಟದ ಮಾನ­ದಂಡ ಅನ್ವಯಿ­ಸಲು ನಿರ್ಧರಿಸಲಾಗಿದೆ. ಇದರೊಂ­ದಿಗೆ ಸ್ಥಳೀಯ ಉತ್ಪಾದನೆಗೆ ಪ್ರೋತ್ಸಾಹ ನೀಡುವುದು, ವ್ಯವಹಾರ ಪಾಲುದಾರರೊಂದಿಗೆ ಮಾತುಕತೆ ರೀತಿಯ ಪ್ರಕ್ರಿಯೆ­ಗಳ ಮೊರೆ ಹೋಗಲು ಭಾರತ ನಿರ್ಧರಿಸಿದೆ.

Advertisement

ದೇಶಿ ಉತ್ಪಾದನೆ ಹಾಗೂ ಉತ್ಪಾದಕರಿಗೆ ತೊಂದರೆಯಾಗಬಹುದು ಎಂಬ ಉದ್ದೇಶದಿಂದ ಪ್ರಸ್ತುತ ಚೀನದಲ್ಲಿ ತಯಾರಾಗುವ ಉತ್ಪನ್ನಗಳ ಮೇಲಿನ ಸುಂಕ ಹೆಚ್ಚಿಸುವ ಕ್ರಮವನ್ನು ಭಾರತ ಕೈಗೊಂಡಿಲ್ಲ. ಆದರೆ ಅದಕ್ಕೆ ಪರ್ಯಾಯವಾಗಿ, ಚೀನದಿಂದ ಹೆಚ್ಚಾಗಿ ಆಮದಾಗುವ ಅಗ್ರ 100 ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸಲು ಸರಕಾರ ಸಿದ್ಧತೆ ಆರಂಭಿಸಿದೆ. ಜೊತೆಗೆ ಗ್ರಾಹಕ ಉತ್ಪನ್ನಗಳನ್ನು ಬೇರೆ ದೇಶಗಳಿಂದ ತರಿಸಿಕೊಳ್ಳುವ ಆಯ್ಕೆಯೂ ಭಾರತದ ಮುಂದಿದೆ.

ಟೆಬೆಟ್‌ ಸ್ಥಿತಿ ಪಾಠವಾಗಲಿ
ಲಡಾಖ್‌ನ ಗಲ್ವಾನ್‌ ಕಣಿವೆ ಮೇಲೆ ಹಿಡಿತ ಸಾಧಿಸಲು ಚೀನ ಪ್ರಯತ್ನಿಸುತ್ತಿದ್ದರೆ, ಇತ್ತ ಚೀನದ ಕುತಂತ್ರದ ಬಗ್ಗೆ ಭಾರತಕ್ಕೆ ಟಿಬೆಟ್‌ ಎಚ್ಚರಿಕೆ ನೀಡಿದೆ. ಭಾರತ-ಚೀನ ಗಡಿಯ­ಲ್ಲಿನ ಉದ್ವಿಗ್ನ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿ­ರುವ ಕೇಂದ್ರ ಟಿಬೆಟ್‌ ಆಡಳಿತದ ಅಧ್ಯಕ್ಷರಾ­ಗಿರುವ ಲೋಬ್ಸಾಂಗ್‌ ಸಾಂಗಾಯ್‌, ವಾಸ್ತವ ನಿಯಂತ್ರಣ ರೇಖೆ ಬಳಿ ಚೀನದ ವರ್ತನೆ ನೋಡುತ್ತಿದ್ದರೆ “ಫೆ„ವ್‌ ಫಿಂಗರ್ಸ್‌ ಆಫ್‌ ಟಿಬೆಟ್‌ ಸ್ಟ್ರಾಟರ್ಜಿ’ ನೆನಪಾಗುತ್ತಿದೆ. ಇದರಲ್ಲಿ ಮೊದಲ ಬೆರಳು ಲಡಾಖ್‌ ಆಗಿದ್ದು, ನೇಪಾಲ, ಭೂತಾನ್‌, ಸಿಕ್ಕಿಂ, ಮತ್ತು ಅರುಣಾ­ಚಲ ಪ್ರದೇಶಗಳು ಉಳಿದ ನಾಲ್ಕು ಬೆರಳು­ಗಳಾಗಿವೆ. ಈ ಎಲ್ಲ ಪ್ರದೇಶಗಳ ಮೇಲೂ ಚೀನ ಕಣ್ಣಿಟ್ಟಿದೆ ಎಂದು ಎಚ್ಚರಿಸಿದ್ದಾರೆ.

ರಾಹುಲ್‌ ಪ್ರಶ್ನೆಗೆ ಜೈಶಂಕರ್‌ ಉತ್ತರ
ಭಾರತ-ಚೀನ ಗಡಿಯನ್ನು ಕಾಯುವ ಯೋಧರೂ ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ ಎಂದು ವಿದೇಶಾಂಗ ಸಚಿವ ಜೈಶಂಕರ್‌ ತಿಳಿಸಿ­ದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ­­ಯವರು ಮಾಡಿದ್ದ ಟೀಕೆಗೆ ಅವರು ಈ ರೀತಿ ಉತ್ತರಿಸಿದ್ದಾರೆ. “ಗಡಿ­ಯಲ್ಲಿ ಅಪಾಯಕಾರಿ ಸನ್ನಿ­ವೇಶವಿದ್ದರೂ, ನಮ್ಮ ಸೈನಿ­ಕರಿಗೆ ಶಸ್ತ್ರಾಸ್ತ್ರ ಕೊಡದೇ ಬರಿಗೈಯ್ಯಲ್ಲಿ ಕಾವಲು ಕಾಯಲು ನಿಯೋ­ಜಿಸಿದ್ದು ಎಷ್ಟರ ಮಟ್ಟಿಗೆ ಸರಿ, ಅವರನ್ನು ಹುತಾತ್ಮರಾಗಲೆಂದೇ ಹಾಗೆ ಕಳುಹಿ­ಸಲಾಗಿತ್ತೇ’ ಎಂದು ಕೇಳಿದ್ದರು.

ಇದಕ್ಕೆ ಉತ್ತರಿ­ಸಿರುವ ಜೈಶಂಕರ್‌, “ಕಾವಲು ಕಾಯು­ವಾಗ ಶಸ್ತ್ರಾಸ್ತ್ರಗಳನ್ನು ಎರಡೂ ಕಡೆಯ ಸೈನಿಕರು ಹೊಂದಿರುತ್ತಾರೆ. ಆದರೆ, ಗಡಿ ರೇಖೆಯ ತೀರಾ ಸಮೀಪಕ್ಕೆ ಬಂದು ಮುಖಾಮುಖಿಯಾಗಿ ನಿಲ್ಲುವಂಥ ಸಂದರ್ಭಗಳು ಬಂದಾಗ ಉಭಯ ಸೈನಿಕರು ಯಾವುದೇ ಶಸ್ತ್ರಾಸ್ತ್ರ ಹಿಡಿದಿರಬಾರದು ಎಂದು 1996 ಹಾಗೂ 2005ರಲ್ಲಿ ಎರಡೂ ದೇಶಗಳ ನಡುವೆ ಉಂಟಾಗಿದ್ದ ಒಪ್ಪಂದಗಳಲ್ಲಿ ಉಲ್ಲೇಖೀಸಲಾಗಿದೆ. ಇದನ್ನು ತುಂಬಾ ವರ್ಷಗಳಿಂದ ಪಾಲಿಸಿಕೊಂಡು ಬರಲಾಗುತ್ತಿದೆ. ಹಾಗಾಗಿ, ಜೂ. 15ರಂದು ಕೂಡ ಸೈನಿಕರು ಬರಿಗೈಯ್ಯಲ್ಲೇ ಮುಖಾ­ಮುಖೀಯಾಗಿ ನಿಂತಿದ್ದರು” ಎಂದಿದ್ದಾರೆ.

ಹಳ್ಳಿಗಳ ತೆರವು ಇಲ್ಲ: ಸೇನೆ
ಚೀನದ ಗಡಿ ಭಾಗಕ್ಕೆ ಸನಿಹದಲ್ಲಿರುವ ಹಳ್ಳಿಗಳಿಂದ ಯಾವುದೇ ಜನರನ್ನು ತೆರವುಗೊಳಿಸಿಲ್ಲ ಎಂದು ಸೇನೆ ಸ್ಪಷ್ಟಪಡಿಸಿದೆ. ಪಟ್ರೋಲ್‌ ಪಾಯಿಂಟ್‌ 14 ಎಂಬ ಪ್ರಾಂತ್ಯದಲ್ಲಿ ಚೀನ, ತನ್ನ ಸೈನಿಕರನ್ನು ಹೆಚ್ಚೆಚ್ಚು ಜಮಾವಣೆ ನಡೆ­ಸುತ್ತಿರುವ ಹಿನ್ನೆಲೆಯಲ್ಲಿ, ಆ ಪ್ರದೇಶಕ್ಕೆ ಹತ್ತಿರದಲ್ಲಿರುವ ಭಾರತದ ಹಳ್ಳಿಗ­ಳನ್ನು ತೆರವುಗೊಳಿಸಲಾಗುತ್ತದೆಯೇ ಎಂಬ ಪ್ರಶ್ನೆಗಳು ಎದ್ದಿದ್ದವು. ಹಳ್ಳಿಗ­ಳಿಂದ ಜನರನ್ನು ತೆರವು ಮಾಡಿಲ್ಲ. ಗಡಿ ಭಾಗದಲ್ಲಿ ದೂರವಾಣಿ, ಅಂತರ್ಜಾಲ ಸಂಪ­ರ್ಕ­ಗಳ ಕಾರ್ಯಾಚರಣೆ ಸರಾಗವಾಗಿ ಮುಂದುವರಿದಿದೆ ಎಂದು ಸೇನೆ ಹೇಳಿದೆ.

ಪ್ರಶ್ನೆಗೆ ಉತ್ತರಿಸದ ಚೀನ ವಕ್ತಾರ
ಬೀಜಿಂಗ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಗಾಲ್ವನ್‌  ಸಂಘರ್ಷದ ಬಗ್ಗೆ ಕೇಳಲಾದ ಪ್ರಶ್ನೆಗಳನ್ನು ಚೀನ ವಿದೇಶಾಂಗ ಇಲಾಖೆಯ ವಕ್ತಾರ ಝಾವೊ ಜಿಲನ್‌ ಅವರು ಉತ್ತರಿಸಲು ಹಿಂದೇಟು ಹಾಕಿದ ಪ್ರಸಂಗ ಬುಧವಾರ ನಡೆದಿದೆ. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಪತ್ರಕರ್ತರು, ಭಾರತೀಯ ಸೈನಿಕರ ಮೇಲೆ ಮೊಳೆಗಳುಳ್ಳ ರಾಡ್‌ಗಳಿಂದ ಹಲ್ಲೆ ನಡೆಸಲಾಗಿತ್ತೇ, ಮೊದಲು ಚೀನ ಸೈನಿಕರೇ ಭಾರತೀಯ ಸೈನಿಕರ ಮೇಲೆ ಮುಗಿಬಿದ್ದಿದ್ದು ನಿಜವೇ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದಾಗ ತಬ್ಬಿಬ್ಟಾದ ಝಾವೊ, ಉತ್ತರ ನೀಡಲು ಹಿಂದೇಟು ಹಾಕಿದ್ದಾರೆ. ಆ ಪ್ರಶ್ನೆಗಳಿಗೆ ಉತ್ತರಿಸದೇ ಬೇರೆ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಚೀನದ ಕಡೆ ಎಷ್ಟು ಸಾವು, ನೋವು ಆಗಿದೆ ಎಂದು ಕೇಳಿದ್ದಕ್ಕೂ ಉತ್ತರಿಸಲೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next