ನವದೆಹಲಿ: ಭಾರತ ದುರ್ಬಲ ದೇಶವಲ್ಲ, ಯಾವುದೇ ರೀತಿಯ ಅತಿಕ್ರಮಣ, ದಾಳಿ ಅಥವಾ ಏಕಪಕ್ಷೀಯ ನಡೆ ಅನುಸರಿಸಿದರೆ ಅದಕ್ಕೆ ತಕ್ಕ ಉತ್ತರ ನೀಡಲು ನಾವು ಸಿದ್ಧ ಎಂಬುದಾಗಿ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಶನಿವಾರ(ಡಿಸೆಂಬರ್ 19, 2020) ಗಡಿ ವಿವಾದ ಉಲ್ಲೇಖಿಸಿ ಚೀನಾಕ್ಕೆ ಎಚ್ಚರಿಕೆಯ ಸಂಧೇಶ ರವಾನಿಸಿದ್ದಾರೆ.
ಇದು ನವಭಾರತ ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಕ್ರಮಣ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ನಾವು ಸಿದ್ದ ಎಂದು ದುಂಡಿಗಲ್ ನಲ್ಲಿ ನಡೆದ ವಾಯುಪಡೆ ಅಕಾಡೆಮಿಯ ಪದವಿ ಪರೇಡ್ ಉದ್ದೇಶಿಸಿ ಅವರು ಮಾತನಾಡಿದರು
ಭಾರತ ಮತ್ತು ಚೀನಾ ನಡುವಿನ ಸಂಘರ್ಷದ ಬಗ್ಗೆ ನೀವು ತಿಳಿದುಕೊಳ್ಳಬೇಕು. ಕೋವಿಡ್ 19 ಸೋಂಕಿನ ಸಂದರ್ಭದಲ್ಲಿ ಚೀನಾದ ಉದ್ದೇಶ ಏನು ಎಂಬುದನ್ನು ತೋರಿಸಿಕೊಟ್ಟಿದೆ. ಈಗ ನಾವು ನಮ್ಮ ದೇಶ ಏನು ಎಂಬುದನ್ನು ತೋರಿಸಿಕೊಡುವ ಮೂಲಕ ನಮ್ಮದು ದುರ್ಬಲ ದೇಶ ಅಲ್ಲ ಎಂಬ ಸಂದೇಶ ನೀಡಬೇಕಾಗುತ್ತದೆ ಎಂದು ಪೂರ್ವ ಲಡಾಖ್ ನಲ್ಲಿನ ಭಾರತ, ಚೀನಾ ಸಂಘರ್ಷ ಉಲ್ಲೇಖಿಸಿ ಹೇಳಿರುವುದಾಗಿ ವರದಿ ತಿಳಿಸಿದೆ.
ಲಡಾಖ್ ಗಡಿ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಉಭಯ ದೇಶಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದೆ. ಈ ವಿವಾದವನ್ನು ಶಾಂತಿಯುತವಾಗ ಬಗೆಹರಿಸಲು ಭಾರತ ಬಯಸುತ್ತಿದೆ. ಆದರೆ ದೇಶದ ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವುದೇ ರೀತಿಯ ನಡವಳಿಕೆ ಸಹಿಸುವುದಿಲ್ಲ ಎಂದು ಸಿಂಗ್ ಹೇಳಿದರು.
ನೆರೆಯ ಪಾಕಿಸ್ತಾನ ಕೂಡಾ ಈ ಹಿಂದಿನ ನಾಲ್ಕು ಯುದ್ಧದಲ್ಲಿ ಪರಾಜಯಗೊಂಡ ನಂತರವೂ ಗಡಿಯಲ್ಲಿ ಕಾನೂನು ಬಾಹಿರವಾಗಿ ವರ್ತಿಸುವುದನ್ನು ಮುಂದುವರಿಸಿದೆ ಎಂದು ಸಿಂಗ್ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ 2019ರಲ್ಲಿ ಬಾಲಾಕೋಟ್ ನಲ್ಲಿ ವೈಮಾನಿಕ ದಾಳಿ ನಡೆಸಿದ ಭಾರತೀಯ ವಾಯುಪಡೆಯ ಕಾರ್ಯವೈಖರಿಯನ್ನು ಶ್ಲಾಘಿಸಿದ ರಾಜ್ ನಾಥ್ ಸಿಂಗ್ ಇದೊಂದು ದೇಶದ ಇತಿಹಾದಲ್ಲಿನ ಸುವರ್ಣ ಅಧ್ಯಾಯ ಎಂದು ಬಣ್ಣಿಸಿದರು.