Advertisement

ಪರಿಣಾಮ ನೆಟ್ಟಗಿರದು, ಜೋಕೆ : ಚೀನಕ್ಕೆ ಭಾರತದ ಖಡಕ್‌ ಎಚ್ಚರಿಕೆ

03:01 AM Jun 20, 2020 | Hari Prasad |

ಹೊಸದಿಲ್ಲಿ: ‘ಲಡಾಖ್‌ ಪ್ರಾಂತ್ಯ ಭಾರತದ ಅವಿಭಾಜ್ಯ ಅಂಗ. ಪದೇ ಪದೇ ತನ್ನಿಚ್ಛೆಯಂತೆ ಶಾಂತಿ ಕದಡಲು ಇದು ದಕ್ಷಿಣ ಚೀನ ಸಮುದ್ರವಲ್ಲ ಎಂಬುದನ್ನು ಚೀನ ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು.

Advertisement

ಅಲ್ಲಿ ಮಾಡಿದಂತೆ ಲಡಾಖ್‌ನಲ್ಲಿ ಮಾಡಲು ಯತ್ನಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ಅದಕ್ಕೆ ಗಾಲ್ವನ್‌ ಘರ್ಷಣೆಯೇ ಸಾಕ್ಷಿ’ ಎಂದು ಭಾರತ ಕಟ್ಟೆಚ್ಚರಿಕೆ ನೀಡಿದೆ.

ಮಾಧ್ಯಮಗಳ ಮುಂದೆ ಈ ವಿಚಾರ ತಿಳಿಸಿರುವ ಕೇಂದ್ರದ ಹಿರಿಯ ಅಧಿಕಾರಿಯೊಬ್ಬರು, “ಗಾಲ್ವನ್‌ ದಾಳಿ­ಯಲ್ಲಿ ಚೀನ ಸೇನೆಯ ಒಬ್ಬ ಕಮಾಂಡಿಂಗ್‌ ಅಧಿಕಾರಿ ಹಾಗೂ ಉಪ-ಕಮಾಂಡಿಂಗ್‌ ಅಧಿಕಾರಿ ಸಾವನ್ನಪ್ಪಿದ್ದಾರೆ. ಇವರೂ ಸೇರಿ ಅಲ್ಲಿ 40ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿರುವ ಮಾಹಿತಿಯಿದೆ. ಇದರಿಂದಾದರೂ ಚೀನ ಪಾಠ ಕಲಿಯಬೇಕು’ ಎಂದು ಹೇಳಿದ್ದಾರೆ.

‘ಭಾರತ ಮತ್ತು ಚೀನದ ಗಡಿಯ ಹಲವಾರು ಕಡೆ ಗುರುತು ಹಾಕಲಾಗಿಲ್ಲ. ಆ ಪ್ರದೇಶಗಳ ಬಗ್ಗೆ ದಶಕಗಳ ಹಿಂದಿನ ಕೆಲವು ಒಪ್ಪಂದ ಹಾಗೂ ಎರಡೂ ಕಡೆಯ ನಾಯಕರ ತಿಳುವಳಿಕೆಗಳ ಪ್ರಕಾರ, ಕಾಯ್ದುಕೊಂಡು ಬರಲಾಗುತ್ತಿದೆ. ಅಂಥ ಪ್ರದೇಶಗಳನ್ನು ಪ್ರವೇಶಿಸಿ ದಾಳಿ ನಡೆಸುವುದು ಎಂದರೆ ಅದು ಈ ಹಿಂದೆ ಉಭಯ ದೇಶಗಳ ನಡುವಿನ ಒಪ್ಪಂದಗಳನ್ನು ಉಲ್ಲಂ ಸಿದಂತೆ. ಹಾಗೆ ನೋಡಿದರೆ, ಗಾಲ್ವನ್‌ ದಾಳಿ ಕೂಡ ಹಿಂದಿನ ಒಪ್ಪಂದಗಳ ಉಲ್ಲಂಘನೆಯೇ ಆಗಿದೆ. ಇಂಥ ಘರ್ಷಣೆಗಳು ಬೇಕೇ ಬೇಕು ಎಂಬುದು ಚೀನದ ಹೆಬ್ಬಯಕೆಯಾಗಿದ್ದರೆ ಅದಕ್ಕೆ ಸೂಕ್ತ ಉತ್ತರ ನೀಡಲು ಭಾರತವೂ ಸಿದ್ಧವಿದೆ’ ಎಂದೂ ಅವರು ಎಚ್ಚರಿಸಿದ್ದಾರೆ.

ಹೊಸ ನೀತಿ: ಭಾರತದ ಇ-ಮಾರುಕಟ್ಟೆಯಲ್ಲಿ ಚೀನ ಸರಕುಗಳ ಮಾರಾಟಕ್ಕೆ ನಿರ್ಬಂಧ ವಿಧಿಸುವ ನಿಟ್ಟಿನಲ್ಲಿ ಹೊಸತೊಂದು ವಾಣಿಜ್ಯ ನೀತಿ ಜಾರಿಗೆ ತರುವ ಸಾಧ್ಯತೆಯಿದೆ. ಈ ಕುರಿತ ನಿಯಮಾವಳಿಗಳ ಕರಡನ್ನು ಸಿದ್ಧಪ­ಡಿ­ಸಲು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯಕ್ಕೆ ಸೂಚಿಸಲಾಗಿದೆ.

Advertisement

‘ಇ-ಮಾರುಕಟ್ಟೆಯಲ್ಲಿ ಮಾರಾಟಕ್ಕಿರುವ ಪ್ರತಿಯೊಂದು ವಸ್ತುವು ತಯಾರಾದ ದೇಶದ ಹೆಸರನ್ನು ನಮೂದು ಕಡ್ಡಾಯ ಸೇರಿದಂತೆ ಹಲವಾರು ಸುಧಾರಣೆಗಳನ್ನು ತರಲಾಗುತ್ತದೆ. ಇದರಿಂದ ಚೀನದ ಸರಕುಗಳನ್ನು ಗುರುತಿಸಲು ಗ್ರಾಹಕರಿಗೆ ಉಪಯೋಗವಾಗಲಿದೆ. ಮೇಡ್‌ ಇನ್‌ ಇಂಡಿಯಾದ ಸರಕುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಡು­ವಂತೆಯೂ ಸೂಚಿಸಲಾಗುವುದು” ಎಂದು ಈ ಬೆಳವಣಿಗೆಗಳನ್ನು ತಿಳಿದಿರುವ ಕೇಂದ್ರದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಅಮೆರಿಕದ ಸಾಂತ್ವನ
ಗಾಲ್ವನ್‌ ಕಣಿವೆಯಲ್ಲಿ ಚೀನ ಸೈನಿಕರ ಹಲ್ಲೆಯಿಂದ ಹುತಾತ್ಮರಾದ ಭಾರತದ 20 ಸೈನಿಕರಿಗೆ ಅಮೆರಿಕ ಶ್ರದ್ಧಾಂಜಲಿ ಸಲ್ಲಿಸಿದೆ. ಭಾರತೀಯ ಸೈನಿಕರ ಸಾವು ಖೇದಕರ. ಅವರನ್ನು ಕಳೆದುಕೊಂಡ ಕುಟುಂಬಗಳು, ಹತ್ತಿರದವರು ಹಾಗೂ ಸಮುದಾಯದವರಿಗೆ ಸಾಂತ್ವನ ಹೇಳಲು ಇಚ್ಛಿಸುತ್ತೇವೆ ಎಂದು ಅಮೆರಿಕದ ವಿದೇ­ಶಾಂಗ ಸಚಿವ ಮೈಕ್‌ ಪಾಂಪೆಯೋ ಟ್ವೀಟ್‌ ಮಾಡಿ­ದ್ದಾರೆ. ಇನ್ನು, ಗಾಲ್ವನ್‌ ಕಣಿವೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರ ಶೌರ್ಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಭಾರತದಲ್ಲಿರುವ ಅಮೆರಿಕದ ರಾಯಭಾರಿ ಕೆನ್ನೆತ್‌ ಜಸ್ಟರ್‌ ತಿಳಿಸಿದ್ದಾರೆ.

ಉದ್ಯಮಾಭಿವೃದ್ಧಿಗೆ ಸಕಾಲ: ಗಡ್ಕರಿ
ಕೋವಿಡ್ ಹಿನ್ನೆಲೆಯಲ್ಲಿ ಜಗತ್ತಿನ ನಾನಾ ದೇಶಗಳ ದೈತ್ಯ ಕಂಪನಿಗಳು ಚೀನದಲ್ಲಿರುವ ತಮ್ಮ ಉತ್ಪಾದನಾ ಯೂನಿಟ್‌ಗಳನ್ನು ಬೇರೆ ದೇಶಗಳಿಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ. ಇದು ಭಾರತಕ್ಕೆ ವರದಾನವಾಗುವಂಥ ವಿಚಾರ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. ‘ಇಂಡಿಯಾಸ್‌ ಎಲೆಕ್ಟ್ರಿಕ್‌ ವೆಹಿ­ಕಲ್‌ ರೋಡ್‌ಮ್ಯಾಪ್‌ ಪೋಸ್ಟ್‌ ಕೋವಿಡ್‌’ ಎಂಬ ಹೆಸರಿನ ವೆಬಿನಾರ್‌ನಲ್ಲಿ ಪಾಲ್ಗೊಂಡ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿವಾದಿತ ಸೇತುವೆ ಸಂಪೂರ್ಣ
ಚೀನದ ಸತತ ಆಕ್ಷೇಪಣೆಯ ನಡುವೆಯೂ ಭಾರತೀಯ ಇಂಜಿನಿಯರ್‌ಗಳು ಭಾರತದ ಗಡಿಯೊಳಗೆ ಹರಿಯುವ ಗಾಲ್ವನ್‌ ನದಿಗೆ ಅಡ್ಡಲಾಗಿ ಸುಮಾರು 60 ಮೀಟರ್‌ವರೆಗಿನ ಸೇತುವೆಯ ನಿರ್ಮಾಣವನ್ನು ಪೂರ್ಣಗೊಳಿಸಿದ್ದಾರೆ ಎಂದು “ದಹಿಂದೂಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ. ಈ ಸೇತುವೆಯಿಂದಾಗಿ ಭಾರತ-ಚೀನ ಗಡಿಯಲ್ಲಿರುವ ಡಾರ್ಬುಕ್‌ನಿಂದ ಭಾರತದ ಕಟ್ಟಕಡೆಯ ಸೇನಾ ಪೋಸ್ಟ್‌ ಆದ ದೌಲತ್‌ ಬೇಗ್‌ ಓಲ್ಡೀವರೆಗಿನ ದುಸ್ತರವಾಗಿದ್ದ ಪ್ರಯಾಣ ಇನ್ನು ಸುಗಮವಾಗಲಿದೆ. ಎರಡೂ ಪೋಸ್ಟ್‌ಗಳ ನಡುವೆ 255 ಕಿ.ಮೀ. ದೂರವಿದ್ದು, ಈ ಎರಡೂ ಪೋಸ್ಟ್‌ಗಳ ನಡುವೆ ಸೈನಿಕರನ್ನು ಹಾಗೂ ಸೈನಿಕರಿಗೆ ಬೇಕಾದ ಸರಕನ್ನು ಸಾಗಿಸಲು ಬೇಕಾದ ಹೆಚ್ಚಿನ ಅನುಕೂಲ ಈ ಸೇತುವೆಯಿಂದ ಸಿಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next