Advertisement

ಸೇನಾ ನಿಯಮಗಳನ್ನು ಪರಿಶೀಲಿಸುವ ಸಾಧ್ಯತೆ

06:38 PM Jun 17, 2020 | Hari Prasad |

ಲಡಾಖ್‌: ಪೂರ್ವ ಲಡಾಖ್‌ನಲ್ಲಿ ಭಾರತ ಹಾಗೂ ಚೀನಾದ ಸೈನಿಕರ ನಡುವೆ ಸೋಮವಾರ ರಾತ್ರಿ ನಡೆದಿರುವ ಭೀಕರ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ.

Advertisement

ಈ ವಿದ್ಯಮಾನ ಗಡಿಯುದ್ದಕ್ಕೂ ಪ್ರಕ್ಷುಬ್ಧತೆಯನ್ನು ಹೆಚ್ಚಿಸಿದೆ. ಹುತಾತ್ಮರಾದ ಭಾರತೀಯ ಸೈನಿಕರ ಮಾಹಿತಿಗಳು ಹೊರಬಿದ್ದಿದ್ದರೂ, ಚೀನ ಸೈನ್ಯಕ್ಕಾಗಿರುವ ನಷ್ಟದ ಅಧಿಕೃತ ಅಂಕಿ ಅಂಶ ಇನ್ನೂ ಬಹಿರಂಗೊಂಡಿಲ್ಲ. ಭಾರತೀಯ ಗಡಿಯ ಒಳನುಗ್ಗಿದ ಚೀನಕ್ಕೆ ನಮ್ಮ ಸೇನಿಕರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎನ್ನಲಾಗುತ್ತಿದೆ.

ಚೀನದ ಈ ವಿದ್ಯಮಾನಗಳಿಂದ ಎಚ್ಚರಗೊಂಡಿರುವ ಭಾರತೀಯ ಸೇನೆ ಹಲವು ದಶಕಗಳ ಹಳೆಯ ನಿಯಮಗಳನ್ನು ಪರಿಶೀಲಿಸಲು ಮುಂದಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಸೋಮವಾರದ ಘರ್ಷಣೆಯಲ್ಲಿ ಯಾವುದೇ ರೀತಿಯಲ್ಲಿ ಮದ್ದು ಗುಂಡುಗಳು ಪ್ರಯೋಗವಾಗದೇ ಇದ್ದ ಪರಿಣಾಮ ಇದು ತಾರಕಕ್ಕೇರಿದೆ ಎನ್ನಲಾಗಿದೆ.

ಹಿಂಸಾತ್ಮಕ ಮುಖಾಮುಖಿಯಲ್ಲಿ ಚೀನದ ಸೈನ್ಯವನ್ನು ಎದುರಿಸುವ ಸೈನಿಕರತ್ತ ಗುಂಡು ಹಾರಿಸಲು ಸೂಚನೆಗಳು ದೊರೆಯದೇ ಇದ್ದ ಕಾರಣ ಗುಂಡು ಹಾರಿಸಲಾಗಲಿಲ್ಲ. ಪರಿಣಾಮವಾಗಿ ಮಲ್ಲಯುದ್ಧದಂತೆ ಆರಂಭವಾದ ಈ ಯುದ್ದ ಬಳಿಕ ಕಲ್ಲು ತೂರಾಟ ಹಾಗೂ ದೊಣ್ಣೆಗಳಿಂದ ಬಡಿದಾಡಿಕೊಳ್ಳುವ ಹಂತಕ್ಕೆ ಬಂದಿತ್ತು ಎನ್ನಲಾಗಿದೆ.

ಒಂದು ವೇಳೆ ಗುಂಡಿನ ಮೊರೆತವಾಗಿದ್ದರೆ ಪರಿಸ್ಥಿತಿ ಎತ್ತ ಸಾಗುತ್ತಿತ್ತು ಎಂದು ಹೇಳುವುದು ಕಷ್ಟ. ಮುಂದೆ ಇಂತಹ ಕೈಕಟ್ಟಿ ಕುಳಿತುಕೊಳ್ಳುವ ಪ್ರಸಂಗ ನಡೆಯದಂತೆ ನೋಡಿಕೊಳ್ಳಲು ಸೇನೆ ಮುಂದಾಗಿದೆ.

Advertisement

ಗಲ್ವಾನ್‌ ನದಿ ಸಮೀಪ ಸೋಮವಾರ ರಾತ್ರಿ ಸಂಭವಿಸಿದ ಭೀಕರ ಘರ್ಷಣೆಯ ಬಳಿಕ ಕೆಲವು ನಿಯಮವನ್ನು ಪರಿಷ್ಕರಿಸಲು ಸೇನೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರತದ ಗಡಿಯ ಒಳಗೆ ಚೀನಿ ಸೈನಿಕರು ಹಾಕಿದ ಟೆಂಟ್‌ ಅನ್ನು ತೆಗೆದುಹಾಕಲು ಭಾರತೀಯ ಪಡೆಗಳು ತೆರಳಿದಾಗ ಈ ಘರ್ಷಣೆಗಳು ಪ್ರಾರಂಭವಾಗಿದೆ. ಈ ಘಟನೆಯಲ್ಲಿ 20 ಭಾರತೀಯ ಸೈನಿಕರು ದೇಶಕ್ಕಾಗಿ ಮಡಿದಿದ್ದಾರೆ ಎಂಬ ಅಧಿಕೃತ ಮಾಹಿತಿ ಲಭಿಸಿದ್ದು, ಅವರ ಹೆಸರುಗಳನ್ನೂ ಸೇನೆ ಬಹಿರಂಗಗೊಳಿಸಿದೆ.

ಆದರೆ ಎಷ್ಟು ಚೀನೀ ಸೈನಿಕರು ಗಾಯಗೊಂಡರು ಅಥವಾ ಮೃತಪಟ್ಟಿದ್ದಾರೆ ಎಂಬುದರ ಬಗ್ಗೆ ಸೈನ್ಯ ಅಥವಾ ಸರಕಾರ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಆದರೆ ಮೂಲಗಳ ಪ್ರಕಾರ ಈ ಸಂಖ್ಯೆ ಸುಮಾರು 45ರಷ್ಟಿದೆ ಎನ್ನಲಾಗುತ್ತಿದೆ.

ಭಾರತದ ಭೂಭಾಗದಿಂದ ಹಿಂದೆ ಸರಿಯುವ ನಿಟ್ಟಿನಲ್ಲಿ ಬಿಹಾರ್‌ ರೆಜಿಮೆಂಟ್‌ನ ಕರ್ನಲ್‌ ಸಂತೋಷ್‌ ಬಾಬು ನೇತೃತ್ವದಲ್ಲಿ ಮಾತುಕತೆಗೆ ತೆರಳಿತ್ತು. ಆದರೆ ಈ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿದ್ದ ಚೀನಾ ಸೈನಿಕರು ಹಿಂದೆ ಸರಿಯಲು ನಿರಾಕರಿಸಿದ್ದು ಮಾತ್ರವಲ್ಲದೆ ಪರಿಸ್ಥಿತಿಯನ್ನು ಮತ್ತಷ್ಟು ಬಿಗಿಗೊಳಿಸುತ್ತಾ ಹೋಗಿದ್ದಾರೆ. ಇದೇ ಸಂದರ್ಭ ಚೀನಾ ಸೈನಿಕರು ತಮ್ಮ ಬಳಿಗೆ ಮಾತುಕತೆಗೆಂದು ಬಂದಿದ್ದ ಭಾರತೀಯ ಸೈನಿಕರ ತಂಡದ ಮೇಲೆ ದೊಣ್ಣೆ, ಕಲ್ಲು, ಮುಳ್ಳುತಂತಿ ಸುತ್ತಿದ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ.

45 ವರ್ಷಗಳ ಬಳಿಕ ಗಡಿಯಲ್ಲಿ ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ. 1975ರಲ್ಲಿ ಅರುಣಾಚಲ ಪ್ರದೇಶದ ತುಲುನುಗ್‌ ಲಾ ಪಾಸ್‌ನಲ್ಲಿ ಗಸ್ತು ತಿರುಗುತ್ತಿದ್ದ ನಾಲ್ವರು ಅಸ್ಸಾಂ ರೈಫ‌ಲ್ಸ್‌ ನ ಸೈನಿಕರನ್ನು ಚೀನೀ ಸೈನಿಕರು ಕೊಂದಿದ್ದರು. ಸೋಮವಾರದ ಹಲ್ಲೆಯಲ್ಲಿ ಸೈನಿಕರು ಕಲ್ಲು, ಲಾಠಿಗಳಿಂದ ಮತ್ತು ಉಗುರುಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಡಿಯುದ್ದಕ್ಕೂ ಚೀನ ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಂಡ ಅನಂತರ ಈ ದಾಳಿ ನಡೆದಿದೆ. ಈ ಘರ್ಷಣೆಯ ಸಂದರ್ಭ ಭಾರತ ಮತ್ತು ಚೀನ ಸೈನಿಕರ ಸಂಖ್ಯೆಯ ಅಂತರ 3:1 ಇತ್ತು ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಘರ್ಷಣೆಯಿಂದ ಭಾರತದ ಕಮಾಂಡರ್‌ ಗಂಭೀರವಾಗಿ ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next