ಸುರತ್ಕಲ್: ಮನೆ ಕಟ್ಟುವ ಸಂದರ್ಭ ಕಡ್ಡಾಯವಾಗಿ ಯೋಜಿತ ರಸ್ತೆಗೆಂದು ಇಲಾಖೆಗೆ ದಾನಪತ್ರ ಮೂಲಕ ಬಿಟ್ಟು ಕೊಡುವ ಜಾಗದಲ್ಲಿ ಇದೀಗ ಹೂ ಗಿಡ ಹಸುರು ಬೆಳೆಸುವ ನೆಪದಲ್ಲಿ ಪರೋಕ್ಷವಾಗಿ ಅತಿಕ್ರಮಗಳು ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚುತ್ತಿದೆ. ಇದರಿಂದ ವಾಕಿಂಗ್ ಹೋಗಲು, ದನ, ಶ್ವಾನ ಮೂಕ ಪ್ರಾಣಿಗಳ ಓಡಾಟಕ್ಕೂ ಅವಕಾಶವಿಲ್ಲದೆ ರಸ್ತೆಯಲ್ಲಿ ವಾಹನದ ಅಡಿಗೆ ಬಿದ್ದು ಪ್ರಾಣ ಕಳೆದು ಕೊಳ್ಳುತ್ತಿವೆ.
ಕುಳಾಯಿ ಸುತ್ತಮುತ್ತಲಿನ ಹಲವು ಬಡಾವಣೆ ಗಳಲ್ಲಿ ಇಂತಹ ಸಮಸ್ಯೆಯಿಂದ ಸರಿಯಾಗಿ ತ್ಯಾಜ್ಯ ವಿಲೇವಾರಿ ವಾಹನ ಓಡಾಟ ಸಾಧ್ಯವಾಗುತ್ತಿಲ್ಲ. ಇತ್ತ ಲಾರ್ಡ್ ಕೃಷ್ಣ ಎಸ್ಟೇಟ್ 4ನೇ ಕ್ರಾಸ್‌ನಲ್ಲಿಯೂ ಹೂ ಗಿಡ ನೆಡುವ ನೆಪದಲ್ಲಿ ರಸ್ತೆಯ ಬದಿಯವರೆಗೂ ಬೇಲಿ ನಿರ್ಮಿಸಲಾಗಿದೆ. ಉತ್ತಮ, ವಿಸ್ತಾರವಾದ ರಸ್ತೆ ನಿರ್ಮಾಣದ ಉದ್ದೇಶದಿಂದ ಮುಡಾ, ಮಂಗಳೂರು ಮಹಾನಗರ ಪಾಲಿಕೆ ಕಾನೂನು ನಿರ್ಮಿಸಿದರೂ ಪರ್ಯಾಯವಾಗಿ ಇಂತಹ ಕ್ರಮದ ಮೂಲಕ ರಸ್ತೆ ಕಿರಿದಾಗುತ್ತಿದೆ. ಇದರಿಂದ ಎರಡು ವಾಹನ ಓಡಾಟ ಸಂದರ್ಭ ರಸ್ತೆ ಬದಿ ನಿಲ್ಲಲೂ ಸಾಧ್ಯವಿಲ್ಲದಂತಾಗಿದೆ.
ಬಡಾವಣೆಗಳಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ ಎದುರಿಸುವಂತಾಗುತ್ತಿದೆ. ಪಾಲಿಕೆ ದೂರುಗಳ ಸರಮಾಲೆ ರಸ್ತೆ ಅತಿಕ್ರಮದ ವಿರುದ್ಧ ಹಲವಾರು ದೂರುಗಳು ಪಾಲಿಕೆಗೆ ಸಲ್ಲಿಸಲ್ಪಟ್ಟಿವೆ. ಬಜೆಟ್ ಮೀಟಿಂಗ್, ಸಾರ್ವಜನಿಕರ ಸಂಪರ್ಕ ಸಭೆಗಳಲ್ಲಿಯೂ ನಾಗರಿಕ ರಿಂದ ದೂರು ಸಲ್ಲಿಕೆಯಾಗುತ್ತಿದ್ದರೂ ಇದರ ವಿರುದ್ಧ ಜರಗಿಸುವ ಕ್ರಮಗಳು ಏನೂ ಸಾಲುತ್ತಿಲ್ಲ. ಹೀಗಾಗಿ ವಾಹನ ಸಂಚಾರ, ನಿಲುಗಡೆ ಸಮಸ್ಯೆ, ಅಪಘಾತದಂತಹ ಪ್ರಕರಣಗಳು ಸಂಭವಿಸಿ ಸಂಘರ್ಷಕ್ಕೆ ಕಾರಣವಾಗುತ್ತಿದೆ.
10 ವರ್ಷಗಳಿಂದ ವಾಸವಾಗಿದ್ದು, ಮನೆಯ ಪಕ್ಕದಲ್ಲಿ ಸುಮಾರು 20 ಅಡಿ ಅಗಲದ ಜಾಗವನ್ನು ಯೋಜಿತ ರಸ್ತೆಗೆಂದು ಇಲಾಖೆಗೆ ದಾನಪತ್ರ ಮಾಡಿ ಕೊಟ್ಟಿದ್ದರೂ ಹೂಗಿಡ ಬೆಳೆಸಲಾಗುತ್ತಿದೆ. ಇಂತಹ ಪ್ರಕರಣ ಹೆಚ್ಚುತ್ತಿದೆ. ಪಾಲಿಕೆ ಅಧಿಕಾರಿಗಳು ಜಾಗವನ್ನು ಸ್ವತಃ ಪರಿಶೀಲಿಸಿ ಕಾನೂನು ಕ್ರಮ ಜರಗಿಸಬೇಕು ಎನ್ನುತ್ತಾರೆ ದೂರು ದಾರರಲ್ಲಿ ಓರ್ವರಾದ ವಾಸುದೇವ ಅವರು.
ತೆರವಿಗೆ ಕ್ರಮ
ರಸ್ತೆಗೆ ಬಿಟ್ಟ ಜಾಗಗಳಲ್ಲಿ ಬೇಲಿ ಹಾಕಿ ಹೂಡ ಗಿಡ ನೆಡುವ ಬಗ್ಗೆ ನಾನೂ ದೂರು ಸ್ವೀಕರಿಸಿದ್ದೇನೆ. ಪಾಲಿಕೆಯ ವಿವಿಧ ಬಡಾವಣೆಗೆ ಭೇಟಿ ನೀಡಿದಾಗ ಎರಡು ವಾಹನ ಬಂದರೆ ದಾರಿ ನೀಡಲೂ ಸಾಧ್ಯವಾಗುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ತೆರವಿಗೆ ಕ್ರಮ ಜರಗಿಸಲಾಗುವುದು. ರಸ್ತೆಗಳ ವಿಸ್ತರಣೆ ಅಗತ್ಯವಾದಲ್ಲಿ ಮಾಡಲಾಗುವುದು. ಇಲ್ಲದಿದ್ದರೆ ಕನಿಷ್ಠ ವಾಹನ ನಿಲುಗಡೆ, ರಸ್ತೆ ಬದಿ ಒಂದೊಂದು ಗಿಡ ಬೆಳೆಸಿ ನೆರಳಿನ ಆಶ್ರಯ ಕಲ್ಪಿಸುವ ಬಗ್ಗೆ ಚಿಂತಿಸಲಾಗುವುದು.
ಜಯಾನಂದ ಅಂಚನ್, ಮೇಯರ್, ಮನಪಾ