Advertisement

ಇಂದಿರಾ ಕ್ಯಾಂಟೀನ್‌ ಹೆಸರು ಬದಲಿಲ್ಲ: ಸಿಎಂ

12:43 AM Dec 19, 2019 | Lakshmi GovindaRaj |

ಬೆಂಗಳೂರು: ಇಂದಿರಾ ಕ್ಯಾಂಟೀನ್‌ ಹೆಸರು ಬದಲಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಯಥಾ ಸ್ಥಿತಿಯಲ್ಲೇ ಮುಂದುವರಿಯಲಿದೆ ಎಂದು ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದರು. ಇಂದಿರಾ ಕ್ಯಾಂಟೀನ್‌ ಹೆಸರು ಬದಲಿಸಿ “ಅನ್ನ ಕುಟೀರ’, “ಅನ್ನಪೂರ್ಣೇಶ್ವರಿ’, “ಮಹರ್ಷಿ ವಾಲ್ಮೀಕಿ ಕ್ಯಾಂಟೀನ್‌’ ಹೆಸರು ಇಡಲಾಗುತ್ತದೆ ಎಂಬ ಚರ್ಚೆಗಳು ನಡೆಯುತ್ತಿರುವ ಬಗ್ಗೆ ಬುಧವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಈಗಾಗಲೇ ಇರುವಂತೆ “ಇಂದಿರಾ ಕ್ಯಾಂಟೀನ್‌’ ಹೆಸರಿನಲ್ಲಿಯೇ ಮುಂದು ವರಿಯಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

Advertisement

ಇಂದಿರಾ ಕ್ಯಾಂಟೀನ್‌ ಮುಚ್ಚಲು ಮನವಿ: ಆದರೆ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿಕೆ ಇದೆಲ್ಲದಕ್ಕೂ ವ್ಯತಿರಿಕ್ತವಾಗಿದ್ದು, “ನನ್ನ ಪ್ರಕಾರ ಇಂದಿರಾ ಕ್ಯಾಂಟೀನ್‌ ಮುಚ್ಚುವುದೇ ಉತ್ತಮ. ಇದು ಮುಖ್ಯಮಂತ್ರಿಗಳಿಗೆ ನನ್ನ ವೈಯ ಕ್ತಿಕ ಮನವಿ. ಹಾಗೊಂದು ವೇಳೆ ಮುಂದುವರಿಸಲಿಚ್ಛಿಸಿದರೂ, ಅದರ ಹೆಸರು “ಅನ್ನಪೂರ್ಣೆಶ್ವರಿ ಕ್ಯಾಂಟೀನ್‌’ ಎಂದು ಬದಲಾಯಿಸುವಂತೆ ಮನವಿ ಮಾಡಿದರು.

ಆಕ್ರೋಶ: ನಗರದ ಹೋಟೆಲ್‌ ಲಲಿತ್‌ ಅಶೋಕದಲ್ಲಿ ಮಾತನಾಡಿ, “ರಾಜ್ಯದಲ್ಲಿ ಊಟಕ್ಕೂ ಗತಿ ಇಲ್ಲದ ಸ್ಥಿತಿಯಲ್ಲಿ ಜನ ಇಲ್ಲ. ಊಟ ಹಾಕುವ ಹೆಸರಿನಲ್ಲಿ ಹಣ ಮಾಡಲು ಹಿಂದಿನ ಕಾಂಗ್ರೆಸ್‌ ಸರ್ಕಾರ ಈ ಕಾರ್ಯಕ್ರಮ ರೂಪಿಸಿತ್ತು. ಒಂದೊಂದು ಕ್ಯಾಂಟೀನ್‌ಗೆ ಒಂದು ಕೋಟಿ ರೂ.ಖರ್ಚಾಗಿದೆ. ಅದನ್ನೇನೂ ಬೆಳ್ಳಿ ಇಟ್ಟಿಗೆ ಇಟ್ಟು ಕಟ್ಟಿದ್ದಾರೆಯೇ? ದಾಖಲೆ ತೆಗೆದು ನೋಡಿದರೆ ಯಾರ ಬೀಗರಿಗೆ ಕ್ಯಾಂಟೀನ್‌ ನಿರ್ಮಾಣದ ಟೆಂಡರ್‌ ನೀಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಕ್ಯಾಂಟೀನ್‌ ಮುಚ್ಚಬೇಕು. ಹಾಗೊಂದು ವೇಳೆ, ಇದೇ ಹೆಸರಿನ ಕ್ಯಾಂಟೀನ್‌ ನಡೆಸುವುದಾದರೆ, ಕಾಂಗ್ರೆಸ್‌ ತನ್ನ ಹಣದಿಂದ ಮುನ್ನಡೆಸಲಿ. ಲೂಟಿ ಹೊಡೆದ ಹಣದಲ್ಲಿ ಹೀಗೆ ಅನ್ನ ಹಾಕುವ ಮೂಲಕ ಪ್ರಾಯಶ್ಚಿತ್ತವನ್ನಾದರೂ ಮಾಡಿಕೊಳ್ಳಬಹುದು. ಇಷ್ಟೇ ಅಲ್ಲ, ಬೇಕಿದ್ದರೆ ಗಾಂಧಿ ಕುಟುಂಬದ ಸದಸ್ಯರೆಲ್ಲರ ಹೆಸರಿನಲ್ಲಿ ಕ್ಯಾಂಟೀನ್‌ ಆರಂಭಿಸಲಿ. ಸೋನಿಯಾ ಗಾಂಧಿ ಹೆಸರಿನಲ್ಲೂ ಮಾಂಸಾಹಾರಿ ಕ್ಯಾಂಟೀನ್‌ ನಡೆಸಲಿ ಎಂದು ಮೂದಲಿಸಿದರು. ಹೆಸರು ಬದಲಿ ಸುವುದು ದ್ವೇಷದ ರಾಜ ಕಾರಣವಾದರೆ ಸುವರ್ಣ ಚತುಷ್ಪಥ ಯೋಜನೆಯಲ್ಲಿ ನಿರ್ಮಿಸಿದ್ದ ನೂರಾರು ಕಿ.ಮೀ. ಹೆದ್ದಾರಿಯಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಹೆಸರನ್ನು ಕಿತ್ತು ಹಾಕಿದ್ದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸ್ತಾವನೆ ಇದೆ; ಇನ್ನೂ ತೀರ್ಮಾನವಿಲ್ಲ: ಇಂದಿರಾ ಕ್ಯಾಂಟೀನ್‌ ಬದಲಿಗೆ “ಮಹರ್ಷಿ ವಾಲ್ಮೀಕಿ ಕ್ಯಾಂಟೀನ್‌’ ಎಂದು ನಾಮಕರಣ ಮಾಡುವಂತೆ ಪ್ರಸ್ತಾವನೆ ಬಂದಿದೆ. ಆದರೆ, ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಸಚಿವ ಸಿ.ಟಿ.ರವಿ ಮಾಹಿತಿ ನೀಡಿದರು.

Advertisement

ಇಂದಿರಾ ಕ್ಯಾಂಟೀನ್‌ ಸ್ಥಗಿತದ ಕುರಿತು ಚಿಂತನೆ
ಬೆಂಗಳೂರು: ಇಂದಿರಾ ಕ್ಯಾಂಟೀನ್‌ ಹೆಸರು ಬದಲಾವಣೆ ಮಾಡಲು ಮುಂದಾಗಿರುವ ಸರ್ಕಾರ ಇದೀಗ ಯೋಜನೆಯನ್ನು ಮುಂದು ವರಿ ಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್‌.ಅಶೋಕ್‌, ಇಂದಿರಾ ಕ್ಯಾಂಟೀನ್‌ ಬಗ್ಗೆ ಸಾಕಷ್ಟು ದೂರು ಬರುತ್ತಿವೆ. ಅಲ್ಲಿ ಊಟ ಮಾಡುವವರ ಸಂಖ್ಯೆಗೂ, ಗುತ್ತಿಗೆದಾರರು ನೀಡುತ್ತಿರುವ ಲೆಕ್ಕಕ್ಕೂ ಸಂಬಂಧವೇ ಇಲ್ಲ. ಜನರ ಕೋಟ್ಯಂತರ ರೂ. ಹಣ ದುರುಪಯೋಗವಾಗುತ್ತಿದೆ. ಹೀಗಾಗಿ ಇಂದಿರಾ ಕ್ಯಾಂಟೀನ್‌ ಯೋಜನೆ ಮುಂದುವರಿಸಬೇಕೆ, ಬೇಡವೇ ಎಂಬ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಸಿಎಂ ಜತೆ ಚರ್ಚೆ: ಇಂದಿರಾ ಕ್ಯಾಂಟೀನ್‌ಗಳಿಗೆ “ಮಹರ್ಷಿ ವಾಲ್ಮೀಕಿ ಅನ್ನ ಕುಟೀರ’ ಎಂದು ಮರು ನಾಮಕರಣ ಮಾಡುವಂತೆ ಮಾಜಿ ಸಚಿವ ರಾಜೂಗೌಡ ಮನವಿ ಮಾಡಿದ್ದಾರೆ. ಅನ್ನ ಪೂರ್ಣ ಹೆಸರಿಡುವಂತೆ ಸಚಿವ ಸಿ.ಟಿ.ರವಿ ಸಲಹೆ ನೀಡಿದ್ದಾರೆ. ಸಚಿವ ಎಸ್‌.ಸುರೇಶ್‌ ಕುಮಾರ್‌ ಯಾರ ಹೆಸರೂ ಬೇಡ. ಕೇವಲ ಅನ್ನ ಕುಟೀರವೆಂದು ಹೆಸರಿಡುವಂತೆ ಸಲಹೆ ನೀಡಿದ್ದಾರೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳ ಲಾಗುವುದು ಎಂದು ತಿಳಿಸಿದರು.

ಸ್ಪಷ್ಟನೆ ನೀಡಲಿ: ಇಂದಿರಾ ಕ್ಯಾಂಟೀನ್‌ ಹೆಸರು ಬದಲಾವಣೆಗೆ ಕಾಂಗ್ರೆಸ್‌ ನಾಯಕರ ವಿರೋಧ ಗಮನಿಸಿದ್ದೇನೆ. ಹೆಸರು ಬದಲಾವಣೆ ವಿರೋಧಿ ಸು ವುದಕ್ಕೆ ಕಾಂಗ್ರೆಸ್‌ ನಾಯಕರಿಗೆ ನೈತಿಕತೆಯೇ ಇಲ್ಲ. ಈ ಹಿಂದೆ ರಾಷ್ಟ್ರೀಯ ಸುವರ್ಣ ಪಥ ಹೆದ್ದಾರಿಗೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಹೆಸರಿತ್ತು. ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಬರುತ್ತಿದ್ದಂತೆ ಕೋಟ್ಯಂತರ ರೂ. ಖರ್ಚು ಮಾಡಿ ಅಟಲ್‌ಜೀ ಅವರ ಹೆಸರು, ಭಾವಚಿತ್ರ ತೆಗೆದು ಹಾಕಿದ್ದೇಕೆ ಎಂಬುದಕ್ಕೆ ಮೊದಲು ಸ್ಪಷ್ಟನೆ ನೀಡಲಿ ಎಂದು ಟಾಂಗ್‌ ನೀಡಿದರು.

ಇನ್ಯಾರ ಹೆಸರು ಗೊತ್ತಿಲ್ಲವೆ?: ಕಾಂಗ್ರೆಸ್‌ ನಾಯಕರಿಗೆ ಮಾಜಿ ಪ್ರಧಾನಿ ನೆಹರು ಕುಟುಂಬದ ಮೂವರ ಹೆಸರು ಬಿಟ್ಟರೆ ಬೇರೆ ಯಾರ ಹೆಸರೂ ಸಿಗುವುದಿಲ್ಲ ಏಕೆ. ಅವರಷ್ಟೇ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆಯೇ? ಮಹಾತ್ಮ ಗಾಂಧಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ, ಸರ್ದಾರ್‌ ವಲ್ಲಭಭಾಯ್‌ ಪಟೇಲ್‌, ಭಗತ್‌ ಸಿಂಗ್‌ರಂತಹ ಯಾರ ಹೆಸರೂ ಅವರಿಗೆ ನೆನಪಿಗೆ ಬರುವುದಿಲ್ಲ ಏಕೆ. ಇನ್ನೂ ಎಷ್ಟು ದಿನ ಎಷ್ಟು ಯೋಜನೆಗಳಿಗೆ ಆ ಮೂರು ಮಂದಿಯ ಹೆಸರಿಡುತ್ತಾರೆ. ಈ ರಾಷ್ಟ್ರವನ್ನು ನೆಹರು ಕುಟುಂಬಕ್ಕೆ ಗುತ್ತಿಗೆ ನೀಡಿದ್ದಾರೆಯೇ ಎಂದು ಅಶೋಕ್‌ ಖಾರವಾಗಿ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next