ರಾಜಧಾನಿಯ ಕೆಳ, ಮಧ್ಯಮ ವರ್ಗದ ಮತದಾರರ ಸೆಳೆಯುವ ಕಾಂಗ್ರೆಸ್ ಪ್ರಯತ್ನ
ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ‘ಚುನಾವಣೆ ಮೂಡ್’ನಲ್ಲಿದ್ದು ರಾಷ್ಟ್ರೀಯ ನಾಯಕರ ಆಗಮನ, ತಂತ್ರಗಾರಿಕೆ, ಪ್ರಚಾರದ ಭರಾಟೆ ಪ್ರಾರಂಭವಾಗಿದೆ. ಒಂದೆಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತೂಂದೆಡೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಕೈಗೊಳ್ಳುವುದರ ಜತೆ ಮುಂದಿನ ಚುನಾವಣೆ ಕಾರ್ಯತಂತ್ರಗಳಿಗೂ ಚಾಲನೆ ನೀಡಲಿದ್ದಾರೆ.
ಈ ಮಧ್ಯೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರ ಆರಂಭಿಸಲು ಉದ್ದೇಶಿಸಿರುವ ಮಹತ್ವಾಕಾಂಕ್ಷಿ ‘ಇಂದಿರಾ ಕ್ಯಾಂಟಿನ್’ ರಾಹುಲ್ ಗಾಂಧಿಯವರಿಂದಲೇ ಉದ್ಘಾಟಿಸಿ ರಾಜಧಾನಿಯಲ್ಲಿ ಕಾಂಗ್ರೆಸ್ ಮತಬ್ಯಾಂಕ್ ಗಟ್ಟಿಗೊಳಿಸುವತ್ತ ರಾಜ್ಯ ಕಾಂಗ್ರೆಸ್ ಮುಂದಾಗಿದೆ. ಕಾಂಗ್ರೆಸ್ ಪಕ್ಷವು ಬೆಂಗಳೂರಿನ ಮೇಲೆ ಕಣ್ಣಿಟ್ಟು ರಾಜಧಾನಿಯಲ್ಲಿ ಪ್ರಭುತ್ವ ಸಾಧಿಸಲು ಕಾರ್ಯಪ್ರವೃತ್ತವಾಗಿವೆ. 28 ವಿಧಾನಸಭಾ ಕ್ಷೇತ್ರಗಳ ಪೈಕಿ 2018 ಕ್ಕೆ ಹೆಚ್ಚು ಶಾಸಕರನ್ನು ಹೊಂದುವ ಮೂಲಕ ಪ್ರಭುತ್ವ ಸ್ಥಾಪಿಸಲು ಕಸರತ್ತಿನಲ್ಲಿ ತೊಡಗಿದೆ.
ಅದರ ಮೊದಲ ಪ್ರಯತ್ನವೇ ಇಂದಿರಾ ಕ್ಯಾಂಟಿನ್ ಯೋಜನೆ ಎಂದು ಹೇಳಲಾಗಿದೆ. ಈ ಮೂಲಕ ರಾಜಧಾನಿಯ ಕೆಳ ಮಧ್ಯಮ ವರ್ಗದ ಮತದಾರರನ್ನು ಕಾಂಗ್ರೆಸ್‌ನತ್ತ ಸೆಳೆಯುವ ಪ್ರಯತ್ನ. ಅದಕ್ಕಾಗಿಯೇ ರಾಜ್ಯ ಕಾಂಗ್ರೆಸ್ ಇಂದಿರಾ ಗಾಂಧಿಯ ಟ್ರಂಪ್ ಕಾರ್ಡ್ ಬಳಕೆಗೆ ಮುಂದಾಗಿದ್ದು, ಇಂದಿರಾ ಮೊಮ್ಮಗನ ಮೂಲಕವೇ ‘ಇಂದಿರಾ ಕ್ಯಾಂಟಿನ್’ ಉದ್ಘಾಟಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಮತಬ್ಯಾಂಕ್ ಗಟ್ಟಿಗೊಳಿಸಲು ಮುಂದಾಗಿದ್ದಾರೆ.
ಆಗಸ್ಟ್ 16 ರಂದು ರಾಹುಲ್ ಗಾಂಧಿ ಕ್ಯಾಂಟೀನ್ ಉದ್ಘಾಟನೆಯ ನೆಪದಲ್ಲಿ ಬೃಹತ್ ಸಾರ್ವಜನಿಕರ ಸಭೆ ಉದ್ದೇಶಿಸಿ ಮಾತನಾಡಲು ವೇದಿಕೆ ಸಿದ್ಧಪಡಿಸಲಾಗಿದೆ. ಸಮಾವೇಶಕ್ಕೆ ಪ್ರತಿ ವಾರ್ಡ್ ಹಾಗೂ ವಿಧಾನಸಭಾ ಕ್ಷೇತ್ರದಿಂದ ಜನರನ್ನು ಕರೆತರಲು ಉಸ್ತುವಾರಿಗಳನ್ನು ನೇಮಿಸಲಾಗಿದ್ದು, ಕನಿಷ್ಠ 50 ಸಾವಿರ ಜನರನ್ನು ಸೇರಿಸಿ, ನಗರದ ಜನತೆಗೆ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಮನವರಿಕೆ ಮಾಡಿಕೊಡಲು ಯೋಜನೆ ರೂಪಿಸಲಾಗಿದೆ. ಈ ಕಾರ್ಯಕ್ರಮದ ಯಶಸ್ವಿಗೆ ಸ್ವತಃ ಮುಖ್ಯಮಂತ್ರಿ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ಧಪಡಿಸಿ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿ ಬಾರಿ ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾದರೂ, ಹೆಚ್ಚಿನ ಪ್ರಮಾಣದಲ್ಲಿ ಮತ ಹಾಕುವವರು ಕೊಳಗೇರಿಯಲ್ಲಿ ವಾಸಿಸುವ ಕೆಳ ವರ್ಗದ ಹಾಗೂ ಮಧ್ಯಮ ವರ್ಗದ ಜನರನ್ನು ಸೆಳೆಯಲು ಇಂದಿರಾ ಕ್ಯಾಂಟೀನ್ ಉತ್ತಮ ಅಸ್ತ್ರವಾಗಿದ್ದು, ಅದನ್ನು ಯಶಸ್ವಿಯಾಗಿ ಬಳಸಿಕೊಳ್ಳುವ ಆಲೋಚನೆ ಆಡಳಿತ ಪಕ್ಷದ್ದು ಎಂದು ಹೇಳಲಾಗಿದೆ.
ಬೆಂಗಳೂರು ಅಭಿವೃದ್ಧಿಗೆ ಪ್ರತ್ಯೇಕ ಸಚಿವರನ್ನು ನೇಮಿಸಿ, ಮೆಟ್ರೊ ಎರಡನೇ ಹಂತಕ್ಕೆ ಚುರುಕು, ಸಂಚಾರ ದಟ್ಟಣೆಗೆ ಕೆಳ ಹಾಗೂ ಮೇಲು ಸೇತುವೆ , ಟಾಫಿಕ್ ಫ್ರೀ ಕಾರಿಡಾರ್ ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣಕ್ಕೆ ಚಾಲನೆ ಕೊಟ್ಟು ರಾಜಧಾನಿಯ ಜನರ ಒಲಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಕಾಂಗ್ರೆಸ್ ಸ್ಟೀಲ್ ಬ್ರಿಡ್ಜ್ ವಿಚಾರದಲ್ಲಿ ಆಕ್ರೋಶಕ್ಕೆ ಗುರಿಯಾಗಿ ‘ವಿಲನ್’ ಆಗಬೇಕಾಯಿತು. ಇದೆಲ್ಲದರಿಂದ ಹೊರ ಬಂದು ‘ಇಂದಿರಾ ಕ್ಯಾಂಟೀನ್’ ಮೂಲಕ ಸಾಮಾನ್ಯ ವರ್ಗದ ಹಾಗೂ ಕಾರ್ಮಿಕ ಸಮುದಾಯವನ್ನು ಸೆಳೆದು ರಾಜಧಾನಿಯಲ್ಲಿ ಅಧಿಪತ್ಯ ಸಾಧಿಸಲು ಆಡಳಿತಾರೂಢ ಕಾಂಗ್ರೆಸ್ ಮುಂದಾಗಿದೆ.
– ಶಂಕರ ಪಾಗೋಜಿ