Advertisement

ಜನವರಿಗೆ ಇಂದಿರಾ ಕ್ಯಾಂಟೀನ್‌ ಅನುಮಾನ!

12:02 PM Dec 10, 2017 | Team Udayavani |

ಬೆಂಗಳೂರು: ಹಸಿದವರಿಗೆ ಅತಿ ಕಡಿಮೆ ದರದಲ್ಲಿ ಅನ್ನಾಹಾರ ನೀಡುವ ಇಂದಿರಾ ಕ್ಯಾಂಟೀನ್‌ ಸೇವೆಯನ್ನು ರಾಜ್ಯಾದ್ಯಂತ ವಿಸ್ತರಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಹೊಸ ವರ್ಷದ ವೇಳೆಗೆ ಜನರಿಗೆ ತಿಂಡಿ- ಊಟ ಪೂರೈಸುವುದು ಅನುಮಾನವಾಗಿದೆ. 

Advertisement

ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯಾದ್ಯಂತ ಯೋಜನೆ ವಿಸ್ತರಿಸಲು ಮುಂದಾಗಿತ್ತು. ಅದರಂತೆ ಯೋಜನೆ ಜಾರಿಗೊಳಿಸುವ ಜವಾಬ್ದಾರಿ ನಗರಾಭಿವೃದ್ಧಿ ಇಲಾಖೆಗೆ ನೀಡಿತ್ತು. ಇಲಾಖೆಯ ಅಧಿಕಾರಿಗಳು ಈಗಾಗಲೇ ಅಧ್ಯಯನ ನಡೆಸಿದ್ದು, ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದಾರೆ.

ರಾಜ್ಯದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಒಟ್ಟು 246 ಕಡೆ ಕ್ಯಾಂಟೀನ್‌ ತೆರೆಯಲು ಸರ್ಕಾರ ನಿರ್ಧರಿಸಿದೆ. ಈ ಪೈಕಿ ಅರ್ಧಕ್ಕೂ ಹೆಚ್ಚು ಕಡೆ ಕ್ಯಾಂಟೀನ್‌ ನಿರ್ಮಾಣ ಕಾರ್ಯ ಈವರೆಗೆ ಆರಂಭವಾಗಿಲ್ಲ. ಜತೆಗೆ, ಕ್ಯಾಂಟೀನ್‌ಗಳಿಗೆ ಆಹಾರ ಸರಬರಾಜು, ಅಡುಗೆ ಮನೆ ನಿರ್ಮಾಣ, ಕ್ಯಾಂಟೀನ್‌ ಹಾಗೂ ಅಡುಗೆ ಮನೆಗೆ ಅಗತ್ಯ ಉಪಕರಣಗಳ ಪೂರೈಕೆಗೆ ಸೇರಿದಂತೆ ಇತರೆ ಸಿದ್ಧತಾ ಕಾರ್ಯ ಬಾಕಿಯಿವೆ. ಹೀಗಾಗಿ ಜನವರಿಗೆ ಎಲ್ಲ 246 ಕಡೆ ಕ್ಯಾಂಟೀನ್‌ ಆರಂಭವಾಗುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳೇ ಹೇಳಿದ್ದಾರೆ. 

97 ಕಡೆ “ಪ್ರೀಕಾಸ್ಟ್‌’ ಕ್ಯಾಂಟೀನ್‌: ಬೆಂಗಳೂರಿನಲ್ಲಿ ನಿರ್ಮಿಸಲಾಗಿರುವ ಪ್ರೀಕಾಸ್ಟ್‌ ಮಾದರಿ ಇಂದಿರಾ ಕ್ಯಾಂಟೀನ್‌ಗಳನ್ನು 97 ಕಡೆ ನಿರ್ಮಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಕಡಿಮೆ ಅಂತರ, ಸುಲಭ ಸಾಗಣೆ ಇತರೆ ಅಂಶಗಳನ್ನು ಪರಿಗಣಿಸಿ ರಾಜಧಾನಿಗೆ ಸಮೀಪವಿರುವ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಪ್ರೀಕಾಸ್ಟ್‌ ಎಲಿಮೆಂಟ್‌ ಬಳಸಲು ಚಿಂತಿಸಿದ್ದಾರೆ. ಉಳಿದೆಡೆ ಕಾಂಕ್ರಿಟ್‌ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಕಾಂಕ್ರಿಟ್‌ ಕಟ್ಟಡ ನಿರ್ಮಾಣಕ್ಕೆ ಕನಿಷ್ಠ ಮೂರು ತಿಂಗಳು ಬೇಕಾಗಿರುವುದರಿಂದ ಜನವರಿ ವೇಳೆಗೆ ಕಟ್ಟಡ ನಿರ್ಮಾಣ ಅನುಮಾನ ಎಂದು ಸಮಜಾಯಿಷಿ ನೀಡುತ್ತಾರೆ. 

ಎಲ್ಲ ಕಡೆ ಪ್ರೀಕಾಸ್ಟ್‌ ಕ್ಯಾಂಟೀನ್‌ ಏಕಿಲ್ಲ?: ಹೊಸೂರು ಬಳಿಯ ಕೃಷ್ಣಗಿರಿಯಲ್ಲಿ ಪ್ರೀಕಾಸ್ಟ್‌ ಎಲಿಮೆಂಟ್‌ ತಯಾರಿಕೆ ಕಾರ್ಖಾನೆಯಿದ್ದು, ಬೆಂಗಳೂರಿಗೆ ಸಮೀಪದ ಜಿಲ್ಲಾ, ತಾಲೂಕು ಕೇಂದ್ರಗಳಿಗೆ ಎಲಿಮೆಂಟ್‌ ಸಾಗಣೆ ವೆಚ್ಚ ಅಗ್ಗವಾಗಲಿದೆ. ಆದರೆ ನೂರಾರು ಕಿ.ಮೀ. ದೂರದಲ್ಲಿರುವ ಬೆಳಗಾವಿ, ಕಲುಬುರಗಿ, ರಾಯಚೂರು, ಬಳ್ಳಾರಿಗೆ ಪ್ರೀಕಾಸ್ಟ್‌ ಬಳಸಲು ಮುಂದಾದರೆ ಸಾಗಣೆಗೆ ತಗಲುವ ವೆಚ್ಚದಲ್ಲೇ ಕಾಂಕ್ರಿಟ್‌ ಕಟ್ಟಡ ನಿರ್ಮಿಸಬಹುದಾಗಿದೆ. ಆ ಹಿನ್ನೆಲೆಯಲ್ಲಿ ಬಹಳಷ್ಟು ಕಡೆ ಕಾಂಕ್ರಿಟ್‌ ಕಟ್ಟಡದಲ್ಲೇ ಕ್ಯಾಂಟೀನ್‌ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

Advertisement

185 ಕೋಟಿ ರೂ. ಯೋಜನೆ: ರಾಜ್ಯದ 246 ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಯೋಜನೆಗೆ 185 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಅದರಂತೆ ಅಡುಗೆ ಮನೆ ಒಳಗೊಂಡ 1,500 ಚದರ ಅಡಿಯಲ್ಲಿ ನಿರ್ಮಿಸುವ ಕ್ಯಾಂಟೀನ್‌ಗೆ ಜಿಎಸ್‌ಟಿ ಸೇರಿ 61.76 ಲಕ್ಷ ರೂ., 816 ಚ.ಅಡಿಯಲ್ಲಿ ಕ್ಯಾಂಟೀನ್‌ ನಿರ್ಮಾಣಕ್ಕೆ ಜಿಎಸ್‌ಟಿ ಸೇರಿ 33.63 ಲಕ್ಷ ರೂ. ಹಾಗೂ 1903 ಚ.ಅಡಿ ವ್ಯಾಪ್ತಿಯಲ್ಲಿ ಪ್ರತ್ಯೇಕ ಅಡುಗೆ ಮನೆ ನಿರ್ಮಿಸಲು ಜಿಎಸ್‌ಟಿ ಸೇರಿ 71.98 ಲಕ್ಷ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. 

ಯೋಜನೆ ಬೆಂಗಳೂರಿನಲ್ಲೂ ವಿಳಂಬ: ರಾಜಧಾನಿಯ ಎಲ್ಲ ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಕ್ಕೆ ಮುಖ್ಯಮಂತ್ರಿಗಳು ಈ ಹಿಂದೆ ನೀಡಿದ ಹಲವು ಗಡುವು ಅವಧಿಯೊಳಗೆ ಯೋಜನೆ ಆರಂಭವಾಗಿರಲಿಲ್ಲ. ಈವರೆಗೆ ಎಲ್ಲ 198 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ ಕಾರ್ಯ ಮುಗಿದಿಲ್ಲ. ಆರಂಭದಲ್ಲಿ 198 ವಾರ್ಡ್‌ಗಳಲ್ಲೂ ಜೂನ್‌ 1ರ ವೇಳೆಗೆ ಕ್ಯಾಂಟೀನ್‌ ನಿರ್ಮಿಸುವುದಾಗಿ ಸರ್ಕಾರ ಪ್ರಕಟಿಸಿದರೂ ಕಾರ್ಯಗತವಾಗಲಿಲ್ಲ.

ನಂತರ ಆಗಸ್ಟ್‌ 16ರಂದು ಗಡುವು ನೀಡಿದರೂ ನಿರ್ಮಾಣಗೊಂಡ ಕ್ಯಾಂಟೀನ್‌ಗಳ ಸಂಖ್ಯೆ 101ಕ್ಕೆ ಸೀಮಿತವಾಗಿತ್ತು. ಬಳಿಕ ಅ.2ರ ಗಾಂಧಿ ಜಯಂತಿಯಂದು ಉಳಿದ 97 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ ಆರಂಭಿಸುವುದಾಗಿ ಭರವಸೆ ನೀಡಿದರೂ 50 ಕಡೆ ಮಾತ್ರ ಕ್ಯಾಂಟೀನ್‌ ಆರಂಭವಾಗಿತ್ತು. ಈವರೆಗೆ 170 ಕ್ಯಾಂಟೀನ್‌ಗಳಲ್ಲಿ ಆಹಾರ ವಿತರಿಸಲಾಗುತ್ತಿದ್ದು, ಇನ್ನೂ 28 ವಾರ್ಡ್‌ಗಳಲ್ಲಿ ಇನ್ನಷ್ಟೇ ಕ್ಯಾಂಟೀನ್‌ ನಿರ್ಮಾಣವಾಗಬೇಕಿದೆ.

ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಸೇರಿದಂತೆ ಇತರೆ ಸಿದ್ಧತಾ ಕಾರ್ಯಕ್ಕೆ ಟೆಂಡರ್‌ ಪ್ರಕ್ರಿಯೆ ನಡೆಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರೀಕಾಸ್ಟ್‌ ಎಲಿಮೆಂಟ್‌ ಬಳಸಲು ಹಾಗೂ ಉಳಿದೆಡೆ ಕಾಂಕ್ರಿಟ್‌ ಕಟ್ಟಡದ ಕ್ಯಾಂಟೀನ್‌ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 
-ಅಂಜುಂ ಫ‌ರ್ವೇಜ್‌, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ

* ವೆಂ.ಸುನೀಲ್ ಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next