Advertisement

‘ಇಂದಿರಾ ಕ್ಯಾಂಟೀನ್‌: ಮೊದಲ ದಿನವೇ ರಶ್‌!

11:11 AM Mar 07, 2018 | |

ಮಹಾನಗರ: ಜನತೆಗೆ ಅತ್ಯಂತ ಕಡಿಮೆ ದರದಲ್ಲಿ ಊಟ ಹಾಗೂ ಉಪಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಜಾರಿಗೆ ತಂದಿರುವ ‘ಇಂದಿರಾ ಕ್ಯಾಂಟೀನ್‌’ಯು ಮಂಗಳೂರಿನ ನಾಲ್ಕು ಕಡೆಗಳಲ್ಲಿ ಮಂಗಳವಾರ ಉದ್ಘಾಟನೆಗೊಂಡಿತು. ಸ್ಟೇಟ್‌ಬ್ಯಾಂಕ್‌ ಬಳಿ ಕ್ಯಾಂಟೀನ್‌ ಉದ್ಘಾಟನೆಗೊಂಡು ಕೆಲವೇ ಕ್ಷಣಗಳಲ್ಲಿ ಕೂಪನ್‌ ಕೊಡಲು ಆರಂಭಿಸುತ್ತಿದ್ದಂತೆ ಫುಲ್‌ ರಶ್‌ ಕಂಡುಬಂತು!

Advertisement

ಈಗ ಮನಪಾ ವ್ಯಾಪ್ತಿಯ ಸ್ಟೇಟ್‌ ಬ್ಯಾಂಕ್‌, ಉರ್ವಸ್ಟೋರ್‌, ಕಾವೂರು, ಸುರತ್ಕಲ್‌ನಲ್ಲಿ ಕ್ಯಾಂಟೀನ್‌ ಉದ್ಘಾಟನೆಗೊಂಡಿದ್ದು, ನಗರದ 5ನೇ ಕ್ಯಾಂಟೀನ್‌ ಪಂಪ್‌ವೆಲ್‌ನಲ್ಲಿ ನಿರ್ಮಾಣ ಹಂತದಲ್ಲಿದೆ. ಜತೆಗೆ ಮುಂದೆ ಉಳ್ಳಾಲದಲ್ಲಿಯೂ ಕ್ಯಾಂಟೀನ್‌ ಆರಂಭಗೊಳ್ಳಲಿದೆ. ಬೆಳಗ್ಗೆ 5 ರೂ.ಗೆ ತಿಂಡಿ ,ಮಧ್ಯಾಹ್ನ ಮತ್ತು ರಾತ್ರಿ 10 ರೂ.ಗೆ ಊಟ ಲಭ್ಯವಾಗಲಿದೆ. 

ಜನರು 25 ರೂ. ಪಾವತಿಸಬೇಕು
ಮಂಗಳೂರಿನಲ್ಲಿ ಎಲ್ಲ ಕ್ಯಾಂಟೀನ್‌ ನಡೆಸುವುದಕ್ಕೆ ಸಾಯಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, ಉರ್ವಸ್ಟೋರ್‌ನಲ್ಲಿ ನಿರ್ಮಿಸಲಾದ ಮುಖ್ಯ ಅಡುಗೆ ಘಟಕದಲ್ಲಿ ಸಿದ್ಧಗೊಂಡ ಆಹಾರವನ್ನು ಎಲ್ಲ ಕ್ಯಾಂಟೀನ್‌ಗಳಿಗೂ ಪೂರೈಕೆ ಮಾಡಲಾಗುತ್ತದೆ. ಈಗ ಒಬ್ಬ ವ್ಯಕ್ತಿಯ ಮೂರು ಹೊತ್ತಿನ ದಿನದ ಆಹಾರಕ್ಕೆ 60 ರೂ. ನಿಗದಿಪಡಿಸಲಾಗಿದ್ದು, ಜನರು 25 ರೂ. ಪಾವತಿಸಬೇಕಾಗುತ್ತದೆ. ಉಳಿದ 35 ರೂ. ಗಳನ್ನು ಸರಕಾರವೇ ಭರಿಸುತ್ತದೆ.

ಮಂಗಳವಾರ ನಗರದ ಸ್ಟೇಟ್‌ ಬ್ಯಾಂಕ್‌ ಬಳಿ ನಿರ್ಮಿಸಲಾದ ಇಂದಿರಾ ಕ್ಯಾಂಟೀನನ್ನು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕಾ ಸಚಿವ ಯು.ಟಿ. ಖಾದರ್‌ ಅವರು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹಾಗೂ ಇತರ ಜನಪ್ರತಿನಿಧಿಗಳು, ಅಧಿಕಾರಿಗಳ ಸಮ್ಮುಖದಲ್ಲಿ ಉದ್ಘಾಟಿಸಿದರು. ಬಳಿಕ ಎಲ್ಲ ಅತಿಥಿಗಳು ಇಂದಿರಾ ಕ್ಯಾಂಟೀನ್‌ನ ತಿಂಡಿಯ ರುಚಿ ಅನುಭವಿಸಿದರು.

ಇಂದಿರಾ ಕ್ಯಾಂಟೀನ್‌ ಕಟ್ಟಡವನ್ನು ಕಾಂಕ್ರೀಟ್‌ ಮೋಲ್ಡ್‌ಗಳ ಮೂಲಕ ರಚಿಸಲಾಗಿದ್ದು, ಕ್ಯಾಂಟೀನ್‌ನ ಒಳಗೆ ಹಾಗೂ ಹೊರಗೆ ಗ್ರಾಹಕರಿಗೆ ನಿಂತು ಟೇಬಲ್‌ಗ‌ಳ ಮೂಲಕ ತಿನ್ನುವ ವ್ಯವಸ್ಥೆ ಮಾಡಲಾಗಿದೆ. ಕೆಆರ್‌ಐಡಿಎಲ್‌ ಮೂಲಕ ಒಟ್ಟು 2.97 ಕೋ.ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ.

Advertisement

ತೂಕದ ಬಗ್ಗೆ ಸಂಶಯವಿದ್ದರೆ ಪರೀಕ್ಷಿಸಿ
‘ಆಹಾರ ವಿತರಣೆ ಪ್ರಮಾಣದ ಬಗ್ಗೆ ಸಂಶಯವಿದ್ದರೆ ದಯವಿಟ್ಟು ಕ್ಯಾಂಟೀನ್‌ ನಲ್ಲಿ ಸ್ಥಾಪಿಸಿರುವ ಡಿಜಿಟಲ್‌ ತೂಕ ಯಂತ್ರದಲ್ಲಿ ಪರೀಕ್ಷಿಸಿ’, ‘ಇಂದಿರಾ ಕ್ಯಾಂಟೀನ್‌ ಸೇವೆಯನ್ನು ಉತ್ತಮ ಪಡಿಸಲು ತಮ್ಮ ಅನಿಸಿಕೆಗಳನ್ನು ಇ- ಮೇಲ್‌ ಮಾಡಬಹುದು’ ಎಂಬೆಲ್ಲ ಮಾಹಿತಿಗಳನ್ನು ಕ್ಯಾಂಟೀನ್‌ನ ಒಳಗೆ ಅಳವಡಿಸಲಾಗಿದೆ.

500 ಜನರಿಗೆ ಕೂಪನ್‌
ಪ್ರತಿನಿತ್ಯ ಬೆಳಗ್ಗೆ 7.30ಕ್ಕೆ ಇಂದಿರಾ ಕ್ಯಾಂಟೀನ್‌ ಆರಂಭಗೊಳ್ಳಲಿದ್ದು, ಒಟ್ಟು 500 ಜನರಿಗೆ ಕೂಪನ್‌ ಇಲ್ಲಿ ನೀಡಲಾಗುತ್ತದೆ. ಬೆಳಗ್ಗಿನ ತಿಂಡಿಗೆ ಇಡ್ಲಿ-ಸಾಂಬಾರು, ಚಟ್ನಿ ಇರುತ್ತದೆ. ಶೀರಾ ಹಾಗೂ ಪೊಂಗಲ್‌ ಕೂಡ ದೊರೆಯುತ್ತದೆ. ಮಧ್ಯಾಹ್ನ 12ರಿಂದ ಊಟದ ಚಟುವಟಿಕೆ ಆರಂಭವಾಗಲಿದ್ದು, 500 ಜನರಿಗೆ ಊಟ ಸ್ವೀಕರಿಸಲು ವ್ಯವಸ್ಥೆ ಇದೆ. ರಾತ್ರಿ ಕೂಡ ಇದೇ ರೀತಿ ಊಟ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next