Advertisement

ಇಂದಿರಾ ಕ್ಯಾಂಟೀನ್‌ ನಿರ್ಮಾಣ: ಪಾಲಿಕೆಗೆ ಹೈಕೋರ್ಟ್‌ ನೋಟಿಸ್‌

11:18 AM Jul 25, 2017 | Team Udayavani |

ಬೆಂಗಳೂರು: ರಾಜಾಜಿನಗರ ಮೂರನೇ ಬ್ಲಾಕ್‌ನಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಮೀಸಲಾಗಿರುವ 6 ಎಕರೆ 1 ಗುಂಟೆ ಜಾಗದಲ್ಲಿ ಇಂದಿರಾ ಕ್ಯಾಂಟೀನ್‌ ಸೇರಿದಂತೆ ಇತರೆ ಅಭಿವೃದ್ಧಿ ಕೆಲಸಗಳನ್ನು ಮಾಡದಂತೆ ತಡೆಯಾಜ್ಞೆ ನೀಡಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಬಿಬಿಎಂಪಿಗೆ ಸೋಮವಾರ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

Advertisement

ರಾಜಾಜಿನಗರದ 3ನೇ ಬ್ಲಾಕ್‌ನ 107ನೇ ವಾರ್ಡ್‌ನಲ್ಲಿ ಬಿಡಿಎಗೆ ಸೇರಿದ 6 ಎಕರೆ 1 ಗುಂಟೆ ಪ್ರದೇಶವಿದ್ದು, ಕೆಲ ಭಾಗದಲ್ಲಿ ಹಲಸು, ಮಾವಿನ ಮರ, ಶ್ರೀಗಂಧ ಸೇರಿದಂತೆ ಇನ್ನಿತರೆ ಮರಗಳು ಬೆಳೆದು ನೈಸಗಿಕ ಉದ್ಯಾನವನವಾಗಿ ಪರಿವರ್ತಿತಗೊಂಡಿದೆ. ಹಲವು ಪ್ರಭೇದದ ಪಕ್ಷಿಗಳು ಹಾಗೂ ಚಿಟ್ಟೆಗಳಿಗೆ ವಾಸಸ್ಥಾನವಾಗಿದೆ. ಆದರೆ ಈ ಜಾಗವನ್ನು ಒತ್ತುವರಿ ಮಾಡಿಕೊಳ್ಳಲು ಕೆಲವು ಮಂದಿ ಪ್ರಭಾವಿಗಳು ಯತ್ನಿಸಿದ್ದಾರೆ.

ಜತೆಗೆ ಇತ್ತೀಚೆಗೆ ಇಂದಿರಾ ಕ್ಯಾಂಟೀನ್‌ ನಿರ್ಮಾಣದ ಉದ್ದೇಶಕ್ಕೆಂದು ಬಿಬಿಎಂಪಿಯವರು ಕೆಲ ಮರಗಳನ್ನು ಕಡಿಯಲು ಮುಂದಾಗಿದ್ದಾರೆ. ಹೀಗಾಗಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿರುವ ನೈಸರ್ಗಿಕ ಅರಣ್ಯಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸದಂತೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಸ್ಥಳೀಯರಾದ ಗೀತಾ ಮಿಶ್ರಾ, ಮಂಜುನಾಥ್‌ ಸುಬ್ರಹ್ಮಣ್ಯ ಸೇರಿದಂತೆ ಐದು ಮಂದಿ ಪಿಐಎಲ್‌ನಲ್ಲಿ ಕೋರಿದ್ದಾರೆ.

ಸೋಮವಾರ ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ ಮುಖರ್ಜಿ ಹಾಗೂ ಪಿ.ಎಸ್‌ ದಿನೇಶ್‌ಕುಮಾರ್‌  ಅವರಿದ್ದ ವಿಭಾಗೀಯ ಪೀಠ, ಪ್ರತಿವಾದಿಗಳಾದ ಬಿಬಿಎಂಪಿ, ಬಿಬಿಎಂಪಿ ಅರಣ್ಯ ಘಟಕ, ಬಿಡಿಎ ಆಯುಕ್ತರು, ಕೆಪಿಟಿಸಿಎಲ್‌ಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next