ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳಲ್ಲಿ ಚಪಾತಿ, ರಾಗಿ ಮುದ್ದೆ, ಮಂಗಳೂರು ಬನ್ಸ್ ಸೇರಿದಂತೆ ಹೊಸ ಮೆನು (ತಿಂಡಿ ಪಟ್ಟಿ) ಬದಲಾಯಿಸುವ ಯೋಜನೆ ಜಾರಿ ಸದ್ಯಕ್ಕೆ ಡೌಟ್. ಆಗಸ್ಟ್ ಎರಡನೇ ವಾರದಿಂದಲೇ ಇಂದಿರಾ ಕ್ಯಾಂಟೀನ್ ಗಳಲ್ಲಿ ಹೊಸ ಮೆನು ಪರಿಚಯಿಸಬೇಕಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶ, ಹಣಕಾಸು ನೆರವಿನ ಗೊಂದಲಗಳಿಂದಾಗಿ ಮೆನು ಬದಲಾವಣೆ ನನೆಗುದಿಗೆ ಬಿದ್ದಿದ್ದು, ಯಥಾಸ್ಥಿತಿ ಮುಂದುವರಿದರೆ ಸಾಕಪ್ಪಾ ಎನ್ನುವಂತಾಗಿದೆ.
ಬೆಂಗಳೂರಿನ ಮಟ್ಟಿಗೆ ಇಂದಿರಾ ಕ್ಯಾಂಟೀನ್ ಸ್ಥಿತಿ ತುರ್ತು ಘಟಕದಲ್ಲಿರುವ ರೋಗಿಯಂತಾಗಿದ್ದು, ಈ ಸ್ಥಿತಿಯಿಂದ ಪಾರಾದರೆ ಸಾಕು ಎಂಬಂತಾಗಿದೆ. ರಾಜ್ಯ ಸರ್ಕಾರ ಹಣಕಾಸಿನ ನೆರವು ಕೊಡದಿದ್ದರೆ ಯೋಜನೆ ಮುಂದುವರಿಸುವ ಬಗ್ಗೆ ಬಿಬಿಎಂಪಿ ಗಂಭೀರ ಚಿಂತನೆ ಮಾಡುತ್ತಿದೆ. “ರಾಜ್ಯ ಸರ್ಕಾರ ಅನುದಾನ ನೀಡದಿದ್ದರೂ, ಬಿಬಿಎಂಪಿಯೇ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಮುಂದುವರಿಸಿ ಕೊಂಡು ಹೋಗಲಿದೆ’ ಎಂದು ಮಾಜಿ ಮೇಯರ್ ಗಂಗಾಂಬಿಕೆ ಹೇಳಿದ್ದರು. ಆದರೆ, ಈಗ ಪಾಲಿಕೆಯಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿಯಲ್ಲಿದೆ. ಹೀಗಾಗಿ, ಇಂದಿರಾ ಕ್ಯಾಂಟೀನ್ ಅಸ್ತಿತ್ವದ ಪ್ರಶ್ನೆಯೂ ಉದ್ಭವಿಸಿದೆ. ನೂತನ ಮೇಯರ್ ಗೌತಮ್ ಕುಮಾರ್ ಅವರ ಅಧಿಕಾರ ವಹಿಸಿಕೊಂಡ ನಂತರ ಈ ಕುರಿತು ಕೇಳಿದಾಗ, ಸ್ಪಷ್ಟ ಉತ್ತರ ನೀಡಲಿಲ್ಲ.
ಹೊಸ ಮೆನುವಿನಲ್ಲಿ ಏನಿತ್ತು: ಇಂದಿರಾ ಕ್ಯಾಂಟೀನ್‌ಗಳಲ್ಲಿ ಗುಣಮಟ್ಟದ ಆಹಾರ ಸೇರ್ಪಡೆ ಮಾಡುವ ಉದ್ದೇಶದಿಂದ ಕ್ಯಾಂಟೀನ್‌ಗಳಲ್ಲಿ ಬೆಳಗ್ಗೆ ಉಪಹಾರಕ್ಕೆ ಬ್ರೆಡ್ ಜಾಮ್ ಮತ್ತು ಮಂಗಳೂರು ಬನ್ಸ್, ಮಧ್ಯಾಹ್ನ ಊಟಕ್ಕೆ ರಾಗಿ ಮುದ್ದೆ, ಚಪಾತಿ ನೀಡಲು ಬಿಬಿಎಂಪಿ ಚಿಂತನೆ ನಡೆಸಿತ್ತು. ಆಗಸ್ಟ್ ಎರಡನೇ ವಾರದಿಂದ ಹೊಸ ಆಹಾರ ಪಟ್ಟಿ (ಮೆನು) ಬಹುತೇಕ ಜಾರಿಗೆ ಬರಲಿದೆ ಎಂದೇ ಹೇಳಲಾಗಿತ್ತು.
ನೂತನ ಮೆನುವಿನಲ್ಲಿ ರಾಗಿ ಮುದ್ದೆ ಊಟ, ಚಪಾತಿಗೆ ಹಣ ನಿಗದಿ ಮಾಡುವ ಬಗ್ಗೆಯೂ ಚರ್ಚೆ ನಡೆದಿತ್ತು. ಟೀ, ಕಾಫಿ ನೀಡುವ ಚಿಂತನೆಯೂ ಇತ್ತು.
ಟೆಂಡರ್ ಅವಧಿ ಮುಕ್ತಾಯ: ಇಂದಿರಾ ಕ್ಯಾಂಟೀನ್ ಆಹಾರ ಸರಬರಾಜು ಗುತ್ತಿಗೆಯನ್ನು ಚೆಫ್ಟಾಕ್ ಹಾಗೂ ರಿವಾರ್ಡ್ ಸಂಸ್ಥೆಗಳಿಗೆ ನೀಡಲಾಗಿದೆ. ಇದರ ಗುತ್ತಿಗೆ ಅವಧಿ ಆ.16ಕ್ಕೆ ಮುಕ್ತಾಯವಾಗಿದ್ದು, ಹೊಸ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಹಾಲಿ ಸಂಸ್ಥೆಯನ್ನೆ ಮುಂದುವರಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಈ ಸಂಸ್ಥೆಗಳ ಮೇಲೆ ಗುಣಮಟ್ಟದ ಆಹಾರ ನೀಡುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿತ್ತು.
ಅದಮ್ಯ ಚೇತನಕ್ಕೆ ಕ್ಯಾಂಟೀನ್ ನಿರ್ವಹಣೆ ಜವಾಬ್ದಾರಿ?: ಇಂದಿರಾ ಕ್ಯಾಂಟೀನ್ ಯೋಜನೆಯ ನಿರ್ವಹಣೆ ಇಸ್ಕಾನ್ ಅಥವಾ ಅದಮ್ಯ ಚೇತನ ಸಂಸ್ಥೆಗೆ ನೀಡುವ ಚಿಂತನೆ ನಡೆದಿದೆ ಎನ್ನಲಾಗಿದೆ. ಜತೆಗೆ, ನೂತನ ಹೆಸರು ನಾಮಕರಣ ಮಾಡಬೇಕು ಎಂಬ ಅಭಿಪ್ರಾಯವೂ ಬಿಜೆಪಿ ವಲಯದಲ್ಲಿದೆ.
-ಹಿತೇಶ್ ವೈ