ಚಿಂತಾಮಣಿ: ಬಡವರು, ಸಾರ್ವಜನಿಕರು, ಕೂಲಿಕಾರ್ಮಿಕರ ಅನುಕೂಲಕ್ಕಾಗಿ ಕಡಿಮೆ ದರದಲ್ಲಿ ಜನ ಸಾಮಾನ್ಯರಿಗೆ ಗುಣಮಟ್ಟದ ಆಹಾರ ಸಿಗಬೇಕೆಂಬ ಸದುದ್ದೇಶದಿಂದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರು ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಆರಂಭಿಸಿದರು. ಈ ಮೂಲಕ ಅನೇಕ ಜನರ ಬಾಳಿನಲ್ಲಿ ಬೆಳಕಾಗಿದ್ದಾರೆ ಎಂದು ಸಂಸದ ಕೆ.ಎಚ್ ಮುನಿಯಪ್ಪ ಅಭಿಪ್ರಾಯಪಟ್ಟರು.
ನಗರದ ಎಪಿಎಂಸಿ ಟೊಮೆಟೋ ಮಾರುಕಟ್ಟೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮತ್ತು ಚಿಂತಾಮಣಿ ನಗರಸಭೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಯಾರೂ ಕೂಡ ಊಟವಿಲ್ಲದೇ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ. ಕಡಿಮೆ ಹಣದಲ್ಲಿ ಹೊಟ್ಟೆತುಂಬಾ ಊಟ ಮಾಡಬಹುದು. ಕೂಲಿ ಕಾರ್ಮಿಕರು ಬಡವರು ಮಾರುಕಟ್ಟೆ ಹಮಾಲಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಜೊತೆಗೆ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ವಿಧಾನಸಭೆ ಉಪಸಭಾಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ ಮಾತನಾಡಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಬಡವರ ಅನುಕೂಲಕ್ಕಾಗಿ ಆನೇಕ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲಿ ಇಂದಿರಾ ಕ್ಯಾಂಟೀನ್ ಪ್ರಮುಖವಾಗಿದೆ ಎಂದರು.
ಭೂಮಿ ಪೂಜೆ ವೇಳೆ ಕಲ್ಲು ತೂರಾಟವಾಗಿತ್ತು: ಈ ಹಿಂದೆ ಕ್ಯಾಂಟೀನ್ ನಿರ್ಮಾಣಕ್ಕೆ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಎಪಿಎಂಸಿ ಮಾರುಕಟ್ಟೆ ಬಳಿ ಆಗಮಿಸಿದ್ದಾಗ ಮಾಜಿ ಶಾಸಕ ಎಂ.ಸಿ.ಸುಧಾಕರ್ ಬೆಂಬಲಿಗರು ಭೂಮಿಪೂಜೆಗೆ ಅಡ್ಡಿಪಡಿಸಿದ್ದರು. ಪೂಜೆಗೆ ಆಗಮಿಸಿದ್ದ ವಾಣಿ ಕೃಷ್ಣಾರೆಡ್ಡಿ ಮತ್ತು ಶಾಸಕರ ಮಲೆ ಕಲ್ಲು ತೂರಾಟ ಮಾಡಿ ದಾಂಧಲೆ ನಡೆಸಿದ್ದರು.
ನಗರಸಭೆ ಉಪಾಧ್ಯಕ್ಷೆ ಸುಜಾತ, ಎಪಿಎಂಸಿ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ಶ್ರೀ ನಿವಾಸ ರೆಡ್ಡಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀರಾಮಪ್ಪ, ಜಿಲ್ಲಾ ಯೋಜನಾ ನಿರ್ದೇಶಕ ಡಾ.ಎನ್.ಭಾಸ್ಕರ್, ಪೌರಾಯುಕ್ತ ಹರೀಶ್, ನಗರಸಭೆ, ಎಪಿಎಂಸಿ ಸದಸ್ಯರು ಇದ್ದರು.