Advertisement

ಸ್ವಾತಂತ್ರ್ಯ ದಿನಕ್ಕೆ ಇಂದಿರಾ ಕ್ಯಾಂಟೀನ್‌ 

11:41 AM Apr 26, 2017 | |

ಬೆಂಗಳೂರು: ಜನ ಸಾಮಾನ್ಯರಿಗೆ ಸಬ್ಸಿಡಿ ದರದಲ್ಲಿ ಊಟ ಮತ್ತು ಉಪಹಾರ ಒದಗಿಸುವ “ಇಂದಿರಾ ಕ್ಯಾಂಟೀನ್‌’ ಆಗಸ್ಟ್‌ 15ರಿಂದ ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಏಕಕಾಲದಲ್ಲಿ ಆರಂಭವಾಗಲಿದೆ.

Advertisement

ಇಂದಿರಾ ಕ್ಯಾಂಟೀನ್‌ ಆರಂಭ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಬಿಬಿಎಂಪಿ ವತಿಯಿಂದಲೇ ಕ್ಯಾಂಟೀನ್‌ ನಿರ್ವಹಣೆ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕೆ ಅನುಕೂಲಧಿವಾಗುವಂತೆ ಕಟ್ಟಡ ನಿರ್ಮಾಣ, ಆಹಾರ ಪೂರೈಕೆಗೆ ವಿಧಾನಸಭೆವಾರು ಏಜನ್ಸಿಗಳನ್ನು ನಿಗದಿಪಡಿಸುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಈ ಬಾರಿಯ ಸ್ವಾತಂತ್ರ ದಿನದಂದು (ಆ. 15) ಎಲ್ಲಾ 198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ಗೆ ಚಾಲನೆ ನೀಡಲಾಗುವುದು. ಬಜೆಟ್‌ನಲ್ಲಿ ಘೋಷಿಸಿದಂತೆ ಬೆಳಗಿನ ಉಪಹಾರವನ್ನು 5 ರೂ. ಹಾಗೂ ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು 10 ರೂ.ಗೆ ಒದಗಿಸಲಾಗುವುದು,’ ಎಂದು ಹೇಳಿದರು.

ಸಮಿತಿ ರಚನೆ: ಕ್ಯಾಂಟೀನ್‌ಗಳನ್ನು ಆರಂಭಿಸಲು ಬಿಬಿಎಂಪಿ 198 ವಾರ್ಡ್‌ಗಳಲ್ಲಿ 240 ಜಾಗ ಗುರುತು ಮಾಡಿದೆ. ಅಲ್ಲದೆ, ಎಲ್ಲಾ ಕಡೆ ಒಂದೇ ರೀತಿಯ ಲಾಂಛನ (ಲೋಗೋ) ಮತ್ತು ಕಟ್ಟಡ ಇರಬೇಕು ಎಂಬ ಕಾರಣಕ್ಕೆ ಸಾರ್ವಜನಿಕರಿಂದ ಲೋಗೋ ಮತ್ತು ಕಟ್ಟಡ ವಿನ್ಯಾಸದ ಮಾದರಿಗಳನ್ನು ಆಹ್ವಾನಿಸಲಾಗಿತ್ತು. 671 ಮಂದಿ ಲೋಗೋ ಮಾದರಿ ಮತ್ತು 177 ಮಂದಿ ಕಟ್ಟಡ ಮಾದರಿಗಳನ್ನು ಕಳುಹಿಸಿಕೊಟ್ಟಿದ್ದಾರೆ.

ಈ ಕುರಿತು ನಿರ್ಧಾರ ಕೈಗೊಳ್ಳಲು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಆಹಾರ ಮತ್ತು ನಾಗರಿಕ ವ್ಯವಹಾರಗಳ ಸಚಿವ ಯು.ಟಿ.ಖಾದರ್‌, ಮೇಯರ್‌ ಜಿ.ಪದ್ಮಾವತಿ, ಉಪ ಮೇಯರ್‌ ಆನಂದ್‌, ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮಹೇಂದ್ರ ಜೈನ್‌ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿ ಲೋಗೋ, ಕಟ್ಟಡ ವಿನ್ಯಾಸ ಅಂತಿಮಗೊಳಿಸಿ, ಆಹಾರ ಪೂರೈಕೆಗೆ ಏಜೆನ್ಸಿ ಗುರುತಿಸುವ ಕಾರ್ಯ ಮಾಡಲಿದೆ ಎಂದು ತಿಳಿಸಿದರು.

Advertisement

ಲ್ಯಾಂಡ್‌ ಆರ್ಮಿ ಮೂಲಕ ಕಟ್ಟಡ ನಿರ್ಮಾಣ: ಪ್ರತಿ ಕ್ಯಾಂಟೀನ್‌ಗೆ 500 ಚದರ ಅಡಿಯ ಕಾಂಕ್ರೀಟ್‌ ಅಥವಾ ಸಾಂಪ್ರದಾಯಿಕ ಕಟ್ಟಡ ನಿರ್ಮಾಣ ಮಾಡಧಿಲಾಗುತ್ತಿದೆ. ಒಂದು ಕಟ್ಟಡಕ್ಕೆ 7.5 ಲಕ್ಷ ರೂ.ನಂತೆ ಒಟ್ಟು 15 ಕೋಟಿ ರೂ. ಬೇಕಾಗುತ್ತದೆ. ಕಟ್ಟಡ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಧಿಸುವ ಉದ್ದೇಶದಿಂದ ಕಾಮಗಾರಿಯನ್ನು ಲ್ಯಾಂಡ್‌ ಆರ್ಮಿಗೆ ವಹಿಸಿಕೊಡಲಾಗುವುದು ಎಂದರು.

ಆಹಾರ ಪೂರೈಕೆ ಕುರಿತು ಶೀಘ್ರ ತೀರ್ಮಾನ: ನಮ್ಮ ಕ್ಯಾಂಟೀನ್‌ ನಿರ್ವಹಣೆಯನ್ನು ಬಿಬಿಎಂಪಿಯೇ ಮಾಡಿದರೂ ಆಹಾರ ಸಿದ್ಧಪಡಿಸುವ ಕಾರ್ಯವನ್ನು ಏಜನ್ಸಿಗಳಿಗೆ ಗುತ್ತಿಗೆ ನೀಡಲಾಗುವುದು. ಗುಣಮಟ್ಟದ ಆಹಾರ ಪೂರೈಕೆಗೆ ಸ್ಪರ್ಧೆ ಇರಬೇಕು ಎಂಬ ಕಾರಣಕ್ಕೆ ಪ್ರತಿ ವಿಧಾನಸಭೆ ಕ್ಷೇತ್ರವಾರು ಏಜನ್ಸಿಗಳನ್ನು ನೇಮಕ ಮಾಡಲಾಗುವುದು. ಆಯಾ ವಿಧಾನಸಭೆ ವ್ಯಾಪ್ತಿಯ ವಾರ್ಡ್‌ಗಳಿಗೆ ಆ ಏಜನ್ಸಿಯೇ ಆಹಾರ ಪೂರೈಕೆ ಮಾಡಲಿದೆ ಎಂದು ಹೇಳಿದರು.

ಆಹಾರದ ಗುಣಮಟ್ಟ ಮತ್ತು ಮೆನೂ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ತಮಿಳುನಾಡಿನಲ್ಲಿ ಇದೇ ಮಾದರಿಯ ಕ್ಯಾಂಟೀನ್‌ ಇದ್ದು, ಅಲ್ಲಿ ಯಾವ ರೀತಿ ಆಹಾರ ಪೂರೈಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ತರಿಸಿಕೊಳ್ಳಲಾಗುತ್ತದೆ. ಜತೆಗೆ ಈಗಾಗಲೇ ಪೌರ ಕಾರ್ಮಿಕರಿಗೆ ಊಟ ನೀಡುತ್ತಿದ್ದು, ಇವೆರಡನ್ನೂ ಪರಿಶೀಲಿಸಿ ಆಹಾರದ ಪ್ರಮಾಣ, ಗುಣಮಟ್ಟ ಮತ್ತು ಮೆನೂ ಏನು ಎಂಬುದನ್ನು ನಿರ್ಧರಿಸಲಾಗುವುದು. ಆದರೆ, ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ನಿಗದಿಪಡಿಸಿದ ಏಜನ್ಸಿಗಳು ಆಹಾರದ ಗುಣಮಟ್ಟವನ್ನು ಖಾತರಿಪಡಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಆಹಾರ ಮತ್ತು ನಾಗರೀಕ ವ್ಯವಹಾರಧಿಗಳ ಸಚಿವ ಯು.ಟಿ.ಖಾದರ್‌, ಮೇಯರ್‌ ಜಿ.ಪದ್ಮಾಧಿವತಿ, ಉಪ ಮೇಯರ್‌ ಆನಂದ್‌, ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಜರಿದ್ದರು.

ಇಸ್ಕಾನ್‌ ಈರುಳ್ಳಿ, ಬೆಳ್ಳುಳ್ಳಿ ಬಳಸದಿರೋದೇ ಸಮಸ್ಯೆ
ಇಸ್ಕಾನ್‌ನವರು ಬಿಸಿಯೂಟ ಎಲ್ಲಾ ಚೆನ್ನಾಗಿ ಮಾಡ್ತಾರೆ. ಒಳ್ಳೇ ಆಹಾರ ಕೊಡುತ್ತಾರೆ. ಆದರೆ, ಅವರು ಅಡುಗೆಗೆ ಈರುಳ್ಳಿ, ಬೆಳ್ಳುಳ್ಳಿ ಬಳಸುವುದಿಲ್ಲ. ಇದೇ ಸಮಸ್ಯೆಯಾಗಿರುವುದು. ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಸುವ ಕುರಿತು ಈ ಹಿಂದೆ ಇಸ್ಕಾನ್‌ ಜತೆ ಮಾತುಕತೆ ನಡೆಸಿದ್ದ ಕುರಿತು ಸುದ್ದಿಗಾರರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು. ಇಸ್ಕಾನ್‌ನವರ ಜತೆ ಮಾತನಾಡಿದ್ದೆವು.

ಆದರೆ, ಕ್ಯಾಂಟೀನ್‌ನಲ್ಲಿ ರುಚಿಯಾದ ಮತ್ತು ಜನರಿಗೆ ಇಷ್ಟವಾದ ಊಟ ಕೊಡಬೇಕು. ಅವರು ಈರುಳ್ಳಿ, ಬೆಳ್ಳುಳ್ಳಿ ಬಳಸುತ್ತಿಲ್ಲ ಎಂಬ ಕಾರಣಕ್ಕೆ ಬೇಡ ಎಂದು ಕೆಲವರು ಹೇಳಿದರು. ಮೇಲಾಗಿ ರುಚಿಯಲ್ಲಿ ಏಕತಾನತೆ ಇರಬಾರದು ಎಂಬ ಕಾರಣಕ್ಕೆ ಬೇರೆಯವರಿಂದ ಆಹಾರ ಸಿದ್ಧಪಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next