ಬೇಲೂರು: ಬಡ ಜನರ ಹಸಿವು ನಿಗಿಸುವ ಮಹತ್ತರ ಯೋಜನೆ ಇಂದಿರಾ ಕ್ಯಾಂಟೀನ್‌ನಲ್ಲಿ ರುಚಿ ಇಲ್ಲದ ಆಹಾರ ನೀಡುತ್ತಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದು ಗುಣಮಟ್ಟದ ಆಹಾರ ನೀಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಾರ್ವಜನಿಕರ ಆರೋಪದ ಹಿನ್ನೆಲೆ ಉದಯವಾಣಿ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಪರೀಶಿಲಿಸಿದ್ದು ಊಟದಲ್ಲಿ ವ್ಯತ್ಯಾಸವಿದ್ದು, ಊಟಕ್ಕೆ ನೀಡುವ ಸಾಂಬರ್ ಯಾವುದ ರುಚಿ ಇಲ್ಲದಿರುವುದು ಕಂಡು ಬಂದಿದೆ.
ಗ್ರಾಹಕರ ದೂರು: ರಾಜ್ಯ ಸರ್ಕಾರ ಬಡವರ ಹಸಿವನ್ನು ನೀಗಿಸುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಆರಂಭ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಕ್ಯಾಂಟೀನ್‌ನ ತಿಂಡಿ-ಊಟ ರುಚಿ ಇಲ್ಲದಾಗಿದ್ದು ಕಾಟಚಾರಕ್ಕೆ ಕ್ಯಾಂಟೀನ್ ನಡೆಸುತ್ತಿದೆ ಎಂಬ ಭಾವನೆ ಜನರಲ್ಲಿದೆ ಬೆಳಗಿನ ತಿಂಡಿ ಇಡ್ಲಿ ಗಟ್ಟಿಯಾಗಿದ್ದು ಸಾಂಬಾರೋ ತಟ್ಟೆಯಲ್ಲಿ ನಿಲ್ಲುವುದೇ ಇಲ್ಲ. ಚಟ್ನಿಯಂತೂ ನೀರೋ ನೀರು. ಇನ್ನು ಉಪ್ಪಿಲ್ಲ, ಸೊಪ್ಪಿಲ್ಲ ಇಂತಹ ತಿಂಡಿ ತಿನ್ನುವುದಾದರೂ ಹೇಗೆ ಎಂದು ಗ್ರಾಹಕರು ದೂರುತ್ತಿದ್ದಾರೆ.
ಗುತ್ತಿಗೆದಾರನ ಆದೇಶದಂತೆ ಆಹಾರ: ಕ್ಯಾಂಟೀನ್‌ನಲ್ಲಿ ಪ್ರತಿ ದಿನ ಇಂತಹದೆ ತಿಂಡಿ-ಊಟ ನೀಡಬೇಕು ಎಂಬ ನಿಯಮವಿದೆ. ಆದರೆ ನಿಯಮ ಪಾಲನೆಯಾಗುತ್ತಿಲ್ಲ. ಗುತ್ತಿಗೆದಾರನಿಗೆ ಬೇಕಾದ ರೀತಿ ಆಹಾರ ವಿತರಣೆಯಾಗುತ್ತಿದೆ ಎಂದು ಗ್ರಾಹಕರು ದೂರುತ್ತಾರೆ. ಬಹತೇಕರು ಊಟದ ರುಚಿ ಇಲ್ಲದ ಕಾರಣ ತಟ್ಟೆಯಲ್ಲಿ ಹಾಕಿಸಿಕೊಂಡ ಅನ್ನ ಮತ್ತು ಮೊಸರನ್ನು ಕಸದ ಡಬ್ಬಿ ಹಾಕುತ್ತಿದ್ದು ಇಲ್ಲಿನ ವರನ್ನು ಕೇಳಿದರೆ, ನಾವುಗಳು ಏನು ಮಾಡಲು ಸಾಧ್ಯವಿಲ್ಲ, ಗುತ್ತಿಗೆದಾರರು ಏನ್ ನೀಡುತ್ತಾರೆ ಅದರಂತೆ ಅಡಿಗೆ ಮಾಡಲಾ ಗುತ್ತದೆ ಎಂದು ಉತ್ತರ ನೀಡುತ್ತಾರೆ.
ಒಟ್ಟಾರೆ ಇಂದಿರಾ ಕ್ಯಾಂಟೀನ್‌ನಲ್ಲಿ ರುಚಿಕರವಾದ ತಿಂಡಿ, ಊಟ ಇಲ್ಲವಾಗಿದೆ. ಕೂಡಲೆ ಪುರಸಭೆ ಮತ್ತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಕ್ಷಣವೇ ಗಮನ ನೀಡುವ ಮೂಲಕ ಇಂದಿರಾ ಕ್ಯಾಂಟೀನ್ ಊಟ ತಿಂಡಿಯ ಗುಣಮಟ್ಟಕ್ಕೆ ಒತ್ತು ನೀಡುವುದು ಅಗತ್ಯವಾಗಿದೆ. ತಾಲೂಕಿನ ಚಿಲ್ಕೂರು ಲಕ್ಷ್ಮೀಪುರ ಗ್ರಾಮದ ನಿಂಗೇಗೌಡ ಪ್ರತಿಕ್ರಿಯಿಸಿ ರುಚಿ ಇಲ್ಲದ ತಿಂಡಿ ಊಟಕ್ಕೆ 10 ರೂ. ನೀಡಿ ತಿನ್ನುವ ವ್ಯವಸ್ಥೆ ಯಾಗಿದ್ದು ಕ್ಯಾಂಟೀನ್ ಅರಂಭದಲ್ಲಿ ಉತ್ತಮ ರುಚಿಯಾದ ತಿಂಡಿ ಊಟ ನೀಡುತ್ತಿದ್ದರು. ಅದರೆ ಇತ್ತಿಚೀನ ದಿನಗಳಲ್ಲಿ ರುಚಿ ಕರ ಊಟ ನೀಡುತ್ತಿಲ್ಲ.
ಗ್ರಾಮದಿಂದ ಪಟ್ಟಣಕ್ಕೆ ಬಂದಾಗ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡುವುದು ವಾಡಿಕೆಯಾಗಿದ್ದು ರುಚಿಕರವಾ ದ ಆಹಾರ ನೀಡದಿರುವುದು ಬೇಸರವಾಗಿದೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಪುರಸಭೆ ಅಧ್ಯಕ್ಷ ಸಿ.ಎನ್.ದಾನಿ. ಮಾತನಾಡಿ, ಪುರಸಭಾ ಅಧ್ಯಕ್ಷರಾದ ಬಳಿಕ ಇಂದಿರಾ ಕ್ಯಾಂಟೀನ್ ಗೆ ಖುದ್ದು ಭೇಟಿ ನೀಡಿ ಊಟ ಸವಿದು, ಸಮಸ್ಯೆಗಳನ್ನು ಸಂಬಂಧಿಸಿದವರಿಗೆ ತಿಳಿಸಿದರೂ ಕೂಡ, ಒಂದೆರಡು ದಿನ ಚೆನ್ನಾಗಿ ಮಾಡಿ, ಪುನಃ ಶುಚಿ ರುಚಿ ಇಲ್ಲದ ಊಟ ತಿಂಡಿ ನೀಡುತ್ತಿರುವ ಗಮನಕ್ಕೆ ಬಂದಿದ್ದು ಭೇಟಿ ನೀಡಿ ಉತ್ತಮ ರುಚಿಕರ ಆಹಾರ ನೀಡುವಂತೆ ಸೂಚಿಸಲಾಗು ವುದು ಎಂದು ತಿಳಿಸಿದ್ದಾರೆ.
● ಡಿ.ಬಿ.ಮೋಹನ್‌ಕುಮಾರ್.